ಸೋಮವಾರಪೇಟೆ, ಅ. 27: ಟಿಪ್ಪು ಜಯಂತಿಗೆ ಹಣ ಬಿಡುಗಡೆಗೊಳಿಸಲು ಸರ್ಕಾರದಲ್ಲಿ ಅನುದಾನವಿದೆ. ಆದರೆ ಕನಕ ಜಯಂತಿಗೆ ಹಣ ನೀಡಲು ಸಾಧ್ಯವಿಲ್ಲ ಏಕೆ? ಎಂದು ತಾ.ಪಂ. ಉಪಾಧ್ಯಕ್ಷ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯ ಎಂ.ಬಿ. ಅಭಿಮನ್ಯು ಕುಮಾರ್ ಪ್ರಶ್ನಿಸಿದರು.

ಕನಕದಾಸ ಜಯಂತಿ ಆಚರಿಸುವ ಸಂಬಂಧ ಇಲ್ಲಿನ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಈ ಬಗ್ಗೆ ಪ್ರಶ್ನಿಸಿದರು.

ತಾಲೂಕು ತಹಶೀಲ್ದಾರ್ ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುದಾನದ ಬಗ್ಗೆ ಚರ್ಚೆಯಾಗುತ್ತಿದ್ದ ಸಂದರ್ಭ, ಕಳೆದ ವರ್ಷವೂ ಸಹ ಕನಕ ಜಯಂತಿ ಕಾರ್ಯಕ್ರಮಕ್ಕೆ ಸರ್ಕಾರದಿಂದ ಹಣ ಬಂದಿಲ್ಲ ಎಂದು ರಾಷ್ಟ್ರೀಯ ಹಬ್ಬಗಳ ಸಮಿತಿ ಸದಸ್ಯರು ತಿಳಿಸಿದರು. ಈ ಬಾರಿ ಕನಕ ಜಯಂತಿಗೆ ಹಣ ಬಿಡುಗಡೆಗೊಳಿಸಲು ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸುವಂತೆ ರಾಷ್ಟ್ರೀಯ ಹಬ್ಬಗಳ ಸಮಿತಿ ಸದಸ್ಯ ಜಯಪ್ಪ ಹಾನಗಲ್ ಸಲಹೆ ನೀಡಿದರು.

ಟಿಪ್ಪು ಜಯಂತಿಗೆ ಹಣ ಬಿಡುಗಡೆಗೊಳಿಸಲು ಸರ್ಕಾರದಲ್ಲಿ ಹಣವಿದೆ. ಆದರೆ ಕನಕ ಜಯಂತಿಗೆ ಹಣ ನೀಡಲು ಸಾಧ್ಯವಿಲ್ಲ ಎಂದು ಆಕ್ಷೇಪಿಸಿದ ಎಂ.ಬಿ. ಅಭಿಮನ್ಯು ಕುಮಾರ್, ಬಿಸಿಎಂ ಇಲಾಖೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಹಣವನ್ನು ಬಳಸಿಕೊಂಡು ಕನಕ ಜಯಂತಿ ಆಚರಿಸುವಂತೆ ಸಲಹೆ ನೀಡಿದರು.

ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ತಾ.ಪಂ., ಪ.ಪಂ. ಇವರುಗಳ ಸಂಯುಕ್ತ ಆಶ್ರಯದಲ್ಲಿ ನ. 17 ರಂದು ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಕನಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಭೆ ತೀರ್ಮಾನಿಸಿತು.

ಸಭೆಯಲ್ಲಿ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಪ್ರಭಾಕರ್, ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮೇಗೌಡ, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಬಿಸಿಎಂ ವಿಸ್ತರಣಾಧಿಕಾರಿ ಸ್ವಾಮಿ, ಸಮಿತಿ ಸದಸ್ಯರಾದ ಎಸ್.ಮಹೇಶ್, ಜೆ.ಸಿ. ಶೇಖರ್ ಮತ್ತಿತರರು ಉಪಸ್ಥಿತರಿದ್ದರು.