ಮಡಿಕೇರಿ, ಅ.27 : ಕೊಡಗಿನ ವ್ಯಕ್ತಿ ಡಿವೈಎಸ್ಪಿ ಎಂ.ಕೆ. ಗಣಪತಿ ಅವರು ಸಂಶಯಾಸ್ಪದ ಸಾವು ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿರುವದಾಗಿ ತಿಳಿದು ಬಂದಿದೆ. ಪ್ರಸಕ್ತ ಮಾಹಿತಿಯನ್ವಯ ಇಂದು ಚೆನ್ನೈನಿಂದ ಸಿಬಿಐ ಸಿಬ್ಬಂದಿಯೊಬ್ಬರು ಮಡಿಕೇರಿಗೆ ಆಗಮಿಸಿದ್ದರು. ಮೊಹರಾದ ಲಕೋಟೆಯೊಂದನ್ನು ಅವರು ಇಂದು ಇಲ್ಲಿನ ನ್ಯಾಯಾಧೀಶರೊಬ್ಬರಿಗೆ ಖುದ್ದಾಗಿ ನೀಡಿರುವದಾಗಿ ತಿಳಿದು ಬಂದಿದೆ. ಇದರಲ್ಲಿ ಯಾವ ಅಂಶಗಳು ಅಡಕವಾಗಿವೆಯೆನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.ನಿನ್ನೆ ದಿನ ಸಿಬಿಐ ಸಚಿವ ಜಾರ್ಜ್ ಹಾಗೂ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎ.ಎನ್. ಪ್ರಸಾದ್ ಇವರುಗಳ ವಿರುದ್ಧ ಮೊಕದ್ದಮೆ ದಾಖಲಿಸಿರುವದ್ದಕ್ಕೆ ಹಿನ್ನೆಲೆಯಾಗಿ ಈ ಹಿಂದೆ ಮಡಿಕೇರಿ ಪೊಲೀಸರು ದಾಖಲಿಸಿದ್ದ ಮೊಕದ್ದಮೆಯ ಮಾಹಿತಿಯನ್ನೇ ಆದಾರವಾಗಿ ಪರಿಗಣಿಸಿರುವದಾಗಿ ತಿಳಿದು ಬಂದಿದೆ. ಮೃತ ಗಣಪತಿ ಅವರ ಪುತ್ರ ನೇಹಲ್ ಮಡಿಕೇರಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಗೆ ಸ್ಪಂದಿಸಿದ್ದ ನ್ಯಾಯಾಧೀಶರು ಮೊಕದ್ದಮೆ ದಾಖಲಿಸುವಂತೆ ಸೂಚಿಸಿದ್ದರು. ಪೊಲೀಸರು ಸೆ. 306ರ ಅನ್ವಯ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದರು. ಸಿಬಿಐ ಈ ಮೊಕದ್ದಮೆಯನ್ನೇ ತನ್ನ ಪ್ರಾರಂಭಿಕ ತನಿಖೆಯಲ್ಲಿ ಪರಿಗಣಿಸಿ ಹೆಜ್ಜೆ ಇರಿಸಿರುವದಾಗಿ ತಿಳಿದು ಬಂದಿದೆ ಆ ಬೆನ್ನಲ್ಲೇ ಇಂದು ಇಲ್ಲಿನ ನ್ಯಾಯಾಲಯಕ್ಕೆ ಸಿಬಿಐ ವತಿಯಿಂದ ಮೊಹರಾದ ಲಕೋಟೆಯು ಸಲ್ಲಿಕೆಯಾಗಿರುವದು ತೀವ್ರ ಕುತೂಹಲದೊಂದಿಗೆ ಮೃತ ಅಧಿಕಾರಿಯ ಕುಟುಂಬ ನ್ಯಾಯ ದೊರಕುವ ವಿಶ್ವಾಸ ವ್ಯಕ್ತಪಡಿಸಿದೆ.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಒಳಪಟ್ಟ ಬೆನ್ನಲ್ಲೇ ಗಣಪತಿ ಹುಟ್ಟೂರಾದ ರಂಗಸಮುದ್ರ ವ್ಯಾಪ್ತಿಯಲ್ಲಿ ಇದೀಗ ಬಿರುಸಿನ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಪೊಲೀಸ್ ಅಧಿಕಾರಿಯೊಬ್ಬರ ನಿಗೂಢ ಆತ್ಮಹತ್ಯೆ ಬಗ್ಗೆ ನ್ಯಾಯ ಕೋರಿ ಜಿಲ್ಲೆ ಹಾಗೂ ರಾಜ್ಯ ವ್ಯಾಪ್ತಿಯಲ್ಲಿ ಹಲವು ರೀತಿಯ ಪ್ರತಿಭಟನೆಗಳು ನಡೆದರೂ ಯಾವದೇ ರೀತಿಯ ಸಮರ್ಪಕ ಮಾಹಿತಿ ಹಾಗೂ ತಪಿತಸ್ಥರ ಮೇಲೆ ಕಾನೂನು ಕ್ರಮ ಜರುಗದಿರುವ ಬಗ್ಗೆ ಗ್ರಾಮದಲ್ಲಿ ಅತೃಪ್ತಿ ಉಂಟಾಗಿತ್ತು. ಇದರ ನಡುವೆ ಗಣಪತಿ ತಂದೆ ಮತ್ತು ಸಹೋದರ ಹಾಗೂ ಕುಟುಂಬ ಸದಸ್ಯರು ನ್ಯಾಯಕ್ಕಾಗಿ ಕಳೆದ ಹಲವು ತಿಂಗಳುಗಳಿಂದ ನ್ಯಾಯಾಲಯಗಳ ಮೊರೆ ಹೋಗುವದರೊಂದಿಗೆ ಲಕ್ಷಾಂತರ ರೂಗಳ ಖರ್ಚು ಮಾಡಿದ್ದರು.

ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶದ ಹಿನ್ನಲೆಯಲ್ಲಿ ಪ್ರಕರಣದ ಸಂಬಂಧ ಕೊನೆಗೂ ನ್ಯಾಯ ದೊರಕುವ ಭರವಸೆ ಹಲವರದ್ದಾಗಿದೆ. ಜುಲೈ 7, 2016 ರಂದು ಮಡಿಕೇರಿಯ ಖಾಸಗಿ ಲಾಡ್ಜ್

(ಮೊದಲ ಪುಟದಿಂದ) ಒಂದರಲ್ಲಿ ಡಿವೈಎಸ್ಪಿ ಗಣಪತಿ ಅವರ ನಿಗೂಢ ಸಾವು ಸಂಭವಿಸಿತ್ತು. ನಂತರದ ಬೆಳವಣಿಗೆಗಳು ಹಲವು ರೀತಿಯಲ್ಲಿ ಸಾಗುತ್ತಾ ನ್ಯಾಯ ದೊರಕದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಲಾಗಿತ್ತು. 2016 ಜುಲೈ 10 ರಂದು ಡಿವೈಎಸ್ಪಿ ಗಣಪತಿ ಪತ್ನಿ ಎಂ.ಜಿ.ಪವನ್ ಮತ್ತು ಪುತ್ರ ಎಂ.ಜಿ.ನೇಹಲ್ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರತ್ಯೇಕವಾಗಿ ಎರಡು ದೂರುಗಳನ್ನು ನೀಡಿದರೂ ಆ ಸಂದರ್ಭ ದೂರು ಸ್ವೀಕರಿಸಲು ನಿರಾಕರಿಸಲಾಗಿತ್ತು.

ಗಣಪತಿ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ಗಣಪತಿ ಅವರಿಗೆ ಸೇರಿದ ಪ್ರಮುಖ ದಾಖಲೆಗಳನ್ನು ಸಂರಕ್ಷಿಸಬೇಕು. ಈ ಮೂಲಕ ತಮ್ಮ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ದೂರಿನಲ್ಲಿ ಕೋರಲಾಗಿತ್ತು. ಆದರೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದು ನಂತರದ ಬೆಳವಣಿಗೆಯಲ್ಲಿ ತಡರಾತ್ರಿವರೆಗೂ ಪೊಲೀಸ್ ಠಾಣೆಗೆ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಕುಟುಂಬ ಸದಸ್ಯರು ಮುತ್ತಿಗೆ ಹಾಕಿ ಠಾಣೆಗೆ ಬೀಗ ಹಾಕಲು ಮುಂದಾಗುವದರೊಂದಿಗೆ ಧರಣಿ ನಡೆಸಿದ್ದರು.

ಈ ವೇಳೆ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಚರ್ಚಿಸಿ ಪ್ರಕರಣ ಸಿಒಡಿ ತನಿಖೆಯಲ್ಲಿರುವ ಕಾರಣ ದಾಖಲು ಮಾಡಲು ಬರುವದಿಲ್ಲ ಎಂಬ ಹಿಂಬರಹ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಿಸುವಲ್ಲಿ ತಾತ್ಕಾಲಿಕವಾಗಿ ಯಶಸ್ವಿಯಾಗಿದ್ದರು. ಅನಂತರದ ಬೆಳವಣಿಗೆಯಲ್ಲಿ ನ್ಯಾಯಾಲಯದ ಸೂಚನೆ ಮೇರೆಗೆ ಮಡಿಕೇರಿ ಠಾಣೆಯಲ್ಲಿ ದೂರು ದಾಖಲಾದರೂ ನ್ಯಾಯ ದೊರಕದ ಕುಟುಂಬ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿ ಅಲ್ಲಿಯೂ ಸ್ಪಂದನೆ ಸಿಗದೆ ಸುಪ್ರೀಂಕೋರ್ಟ್ ಕದ ತಟ್ಟಿ ಪ್ರಕರಣವನ್ನು ಸಿಬಿಐಗೆ ಕೋರಿದ್ದರು.

ಇದೀಗ ಸಿಬಿಐ ಸಚಿವ ಜಾರ್ಜ್, ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು ಮೂವರ ಮೇಲೆ ಮೊಕದ್ದಮೆ ದಾಖಲಿಸಿದೆ. ಈ ಮೂಲಕ ತಮಗೆ ನ್ಯಾಯ ದೊರಕುವದು ಖಚಿತ ಎನ್ನುತ್ತಾರೆ ಡಿವೈಎಸ್ಪಿ ಗಣಪತಿ ಸಹೋದರ ಎಂ.ಕೆ. ಮಾಚಯ್ಯ. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಗಣಪತಿ ಪತ್ನಿ ಮತ್ತು ಪುತ್ರ ದೂರು ನೀಡಿರುವದನ್ನು ಸಿಬಿಐ ಅಧಿಕಾರಿಗಳು ಗಮನಿಸಬೇಕಾಗಿದೆ. ನಂತರದ ಎಲ್ಲಾ ಬೆಳವಣಿಗೆಗಳನ್ನು ಪರಿಶೀಲಿಸಿದಲ್ಲಿ ಸತ್ಯಾಂಶ ಹೊರಬೀಳಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮಡಿಕೇರಿ ಲಾಡ್ಜ್‍ನಲ್ಲಿ ನಡೆದ ನಿಗೂಢ ಸಾವು ಪ್ರಕರಣದಲ್ಲಿ ಹಲವು ಅಂಶಗಳು ಬೆಳಕಿಗೆ ಬರಲಿದೆ ಎಂದು ಮಾಚಯ್ಯ ತಿಳಿಸಿದ್ದು ಈ ಮೂಲಕ ತಮ್ಮ ಅಣ್ಣನ ನಿಗೂಢ ಸಾವಿಗೆ ಪ್ರಮುಖ ಕಾರಣ ಕೂಡ ಹೊರಬರಲಿದೆ ಎಂದಿದ್ದಾರೆ.

-ಸಿಂಚು