ವರದಿ-ಚಂದ್ರಮೋಹನ್

ಕುಶಾಲನಗರ, ಅ. 27: ಕಾವೇರಿ ಮೂಲಕ್ಷೇತ್ರ ತಲಕಾವೇರಿಯಲ್ಲಿ ತುಲಾ ಸಂಕ್ರಮಣ ಸಂದರ್ಭ ಯಾತ್ರಿಕರ ವಾಹನ ನಿಲುಗಡೆ ವ್ಯವಸ್ಥೆಗೆ ಸಮರ್ಪಕ ಮಾಹಿತಿ ಕೊರತೆ ಎದುರಾಗು ತ್ತಿರುವದು ಇತ್ತೀಚಿನ ಬೆಳವಣಿಗೆ ಯಾಗಿದೆ. ದಕ್ಷಿಣ ಭಾರತದ ವಿವಿಧೆಡೆಯಿಂದ ಸಂಕ್ರಮಣ ಸಂದರ್ಭ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳು ತಲಕಾವೇರಿಯಲ್ಲಿ ವಾಹನ ನಿಲುಗಡೆಗೆ ಮಾತ್ರ ಪರದಾಡುತ್ತಿರುವ ದೃಶ್ಯ ಈ ಸಂದರ್ಭ ಕಾಣಬಹುದು.

ತಲಕಾವೇರಿಯಲ್ಲಿ ನಿಯೋಜನೆ ಗೊಂಡಿರುವ ಪೊಲೀಸ್ ಹೊರಠಾಣೆ ಯಲ್ಲಿ ಕೇವಲ ಎರಡು ಮಂದಿ ಸಿಬ್ಬಂದಿಗಳು ದಿನನಿತ್ಯ ನೂರಾರು ವಾಹನಗಳ ನಿಲುಗಡೆಗೆ ಶ್ರಮಿಸುವ ದರೊಂದಿಗೆ ಕ್ಷೇತ್ರದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು, ಈ ಠಾಣೆಯಲ್ಲಿ ಪೊಲೀಸರ ಕೊರತೆ ಎದ್ದು ಕಾಣುತ್ತಿದೆ. ಜಾತ್ರಾ ಸಂದರ್ಭ ತೀರ್ಥೋದ್ಭವ ದಿನದಲ್ಲಿ ಮಾತ್ರ ಹೆಚ್ಚುವರಿ ಪೊಲೀಸರ ನಿಯೋಜನೆ ಬಿಟ್ಟರೆ ಇನ್ನುಳಿದಂತೆ ತಿಂಗಳಿಡೀ ಬೆರಳೆಣಿಕೆಯ ಪೊಲೀಸರು ಇಲ್ಲಿನ ವ್ಯವಸ್ಥೆ ನೋಡಿಕೊಳ್ಳಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತದೆ.

ತಲಕಾವೇರಿ ಕ್ಷೇತ್ರಕ್ಕೆ ಪ್ರವೇಶ ಮಾಡುವ ವಾಹನಗಳಿಗೆ ಭಾಗಮಂಡಲದ ಗ್ರಾಮ ಪಂಚಾಯಿತಿ ಮೂಲಕ ಪ್ರವೇಶ ಶುಲ್ಕ ತೆರಬೇಕಾಗಿದ್ದು ವಾರ್ಷಿಕ ರೂ. 26 ಲಕ್ಷಕ್ಕೂ ಅಧಿಕ ಆದಾಯ ದೊರಕುತ್ತದೆ. ಆದರೆ ತಲಕಾವೇರಿ ಕ್ಷೇತ್ರದಲ್ಲಿ ವಾಹನ ನಿಲುಗಡೆ ಮಾಡಲು ಭಕ್ತಾದಿಗಳು ಪರದಾಡುವ ಸ್ಥಿತಿ ಒಂದು ತಿಂಗಳ ಕಾಲ ಸೃಷ್ಟಿಯಾಗುವದು ಸಾಮಾನ್ಯವಾಗಿದೆ.

ಭಕ್ತಾದಿಗಳಿಗೆ ವಾಹನ ನಿಲುಗಡೆಗೆ ಸಮರ್ಪಕ ಮಾಹಿತಿಯ ಕೊರತೆ ಯಿಂದ ಈ ಸಮಸ್ಯೆ ಉದ್ಭವಿಸುತ್ತಿದ್ದು ಇದಕ್ಕೆ ಗ್ರಾಮಪಂಚಾಯ್ತಿ ಆಡಳಿತ ಶಾಶ್ವತ ಪರಿಹಾರ ಒದಗಿಸಬೇಕಾಗಿದೆ. ಮಾಹಿತಿಯ ಕೊರತೆಯಿಂದ ಕ್ಷೇತ್ರದ ಸಮೀಪ ವಾಹನ ತೆರಳಿದಲ್ಲಿ ವಾಹನ ದಟ್ಟಣೆಯಿಂದ ಸಮಸ್ಯೆಯ ಸುಳಿಯೊಳಗೆ ಕೆಲವೊಮ್ಮೆ ವಾಹನಗಳು ಸಿಲುಕುತ್ತಿರುವದು ಇತ್ತೀಚಿನ ಬೆಳವಣಿಗೆಯಾಗಿದೆ.

ಗ್ರಾಮ ಪಂಚಾಯಿತಿಯಿಂದ ಓರ್ವ ಸಿಬ್ಬಂದಿಯನ್ನು ತಲಕಾವೇರಿ ಕ್ಷೇತ್ರದಲ್ಲಿ ನಿಯೋಜಿಸಲಾಗಿದ್ದು ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಆಡಳಿತ ಮಂಡಳಿಯ ಗಮನಕ್ಕೆ ತರಲಾಗುವದು ಎಂದು ಭಾಗಮಂಡಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ‘ಶಕ್ತಿ’ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ತುಲಾ ಸಂಕ್ರಮಣ ಸಂದರ್ಭ ದಿನನಿತ್ಯ ನೂರಾರು ವಾಹನಗಳು ಕ್ಷೇತ್ರಕ್ಕೆ ಆಗಮಿಸುತ್ತಿದ್ದು ವಾರಾಂತ್ಯದಲ್ಲಿ ಸಾವಿರ ಸಂಖ್ಯೆ ತಲುಪುತ್ತದೆ. ಇದರೊಂದಿಗೆ ಪ್ರವಾಸಿಗರ ಬಸ್, ಮ್ಯಾಕ್ಸಿ ಕ್ಯಾಬ್‍ಗಳು ಕೂಡ ಕ್ಷೇತ್ರಕ್ಕೆ ಬರುವ ಹಿನ್ನೆಲೆಯಲ್ಲಿ ನಿಲುಗಡೆಗೆ ತೊಂದರೆಯಾಗುತ್ತಿರುವ ಬಗ್ಗೆ ಪಂಚಾಯ್ತಿ ಗಮನಕ್ಕೆ ತಂದಿರುವದಾಗಿ ಭಗಂಡೇಶ್ವರ-ತಲಕಾವೇರಿ ದೇವಾಲಯಗಳ ಕಾರ್ಯ ನಿರ್ವಾಹಕರಾದ ಜಗದೀಶ್ ಅವರನ್ನು ಸಂಪರ್ಕಿಸಿದ ಸಂದರ್ಭ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಿ ಸ್ಥಳೀಯ ಆಡಳಿತದಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸುವದರೊಂದಿಗೆ ತಲಕಾವೇರಿ ಕ್ಷೇತ್ರದ ಹೊರ ಪೊಲೀಸ್ ಠಾಣೆಗೆ ವಿಶೇಷ ದಿನಗಳಲ್ಲಿ ಹೆಚ್ಚುವರಿ ಸಿಬ್ಬಂದಿಗಳ ನೇಮಕ ಮಾಡುವ ಬಗ್ಗೆ ಚಿಂತನೆ ಹರಿಸಬೇಕಾಗಿದೆ ಎನ್ನುವದು ಭಕ್ತಾದಿಗಳ ಆಗ್ರಹವಾಗಿದೆ.