ಕುಶಾಲನಗರ, ಅ. 27: ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪ್ರಸ್ತಾವಿತ ನೂತನ ಕಾವೇರಿ ತಾಲೂಕು ರಚನೆಗೆ ಒತ್ತಾಯ ಹೋಬಳಿಯಾದ್ಯಂತ ಕೇಳಿಬರುತ್ತಿದ್ದು ಹೋರಾಟದ ಕಿಚ್ಚು ಮತ್ತೆ ಗರಿಗೆದರಿದೆ. ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿಯ ಗ್ರಾಮಗಳನ್ನು ಸೇರ್ಪಡೆ ಗೊಳಿಸುವದರೊಂದಿಗೆ ನೆಲ್ಲಿಹುದಿಕೇರಿಯಿಂದ ಶಿರಂಗಾಲ, ಕುಶಾಲನಗರದಿಂದ ಮಾದಾಪುರ ಮತ್ತು ಚೆಟ್ಟಳ್ಳಿ ತನಕದ ಪ್ರದೇಶಗಳನ್ನು ಒಗ್ಗೂಡಿಸಿ ನೂತನ ತಾಲೂಕು ರಚನೆಗೆ ಹಲವು ವರ್ಷಗಳಿಂದ ಹೋರಾಟ ನಡೆದರೂ ಯಾವದೇ ರೀತಿಯ ಸ್ಪಂದನ ಸರಕಾರದಿಂದ ದೊರಕದಿರುವದು ಈ ಭಾಗದ ಜನತೆಯಲ್ಲಿ ಆಕ್ರೋಶ ಮನೆಮಾಡಲು ಕಾರಣವಾಗಿದೆ.

ನೂತನವಾಗಿ ರಾಜ್ಯದಲ್ಲಿ ಮತ್ತೆ 43 ತಾಲೂಕುಗಳ ರಚನೆಗೆ ಸಂಪುಟ ಸಮ್ಮತಿ ನೀಡಿದ್ದು, ಕೊಡಗು ಜಿಲ್ಲೆಯನ್ನು ಮಾತ್ರ ಸಂಪೂರ್ಣ ಕಡೆಗಣಿಸಿದೆ ಎಂದರೆ ತಪ್ಪಾಗಲಾರದು. ಜಿಲ್ಲೆಯ ಕುಶಾಲನಗರ, ನಾಪೋಕ್ಲು, ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಮೂರು ನೂತನ ತಾಲೂಕುಗಳಿಗೆ ಕಳೆದ ಹಲವು ವರ್ಷಗಳಿಂದ ಬೇಡಿಕೆಯಿದ್ದರೂ ಜನಪ್ರತಿನಿಧಿಗಳ ಹಾಗೂ ಹೋರಾಟಗಾರರ ನಿರ್ಲಕ್ಷ್ಯದಿಂದ ತಾಲೂಕು ರಚನೆಯ ಘೋಷಣೆ ಇನ್ನೂ ಕನಸಾಗಿಯೇ ಉಳಿದಿದೆ. ಹೋರಾಟದ ನಡುವೆ ರಾಜಕೀಯ ಬೆರೆತು ಹೋರಾಟದ ಕಿಚ್ಚು ಕಡಿಮೆಯಾಗುತ್ತಿದ್ದಿದ್ದೆ ಈ ಎಲ್ಲಾ ಬೆಳವಣಿಗೆಗಳಿಗೆ ಪ್ರಮುಖ ಕಾರಣ ಎನ್ನುವದು ನಾಗರಿಕ ವಲಯದಲ್ಲಿ ಕೇಳಿಬರುತ್ತಿರುವ ಮಾತು. ಜಿಲ್ಲೆಯಲ್ಲಿ ಮೂರು ಶಾಸಕರ ಸ್ಥಾನ ಎರಡಕ್ಕೆ ಸೀಮಿತವಾಗುತ್ತಿದ್ದ ಸಂದರ್ಭ ಜನತೆ ಮಾತ್ರ ಯಾವದೇ ಪ್ರತಿಕ್ರಿಯೆ ವ್ಯಕ್ತಪಡಿಸದಿರುವದು, ಕೊಡಗು ಜಿಲ್ಲೆಯನ್ನು ಸ್ವತಂತ್ರ ಲೋಕಸಭಾ ಕ್ಷೇತ್ರ ಪಡೆಯುವಲ್ಲಿಯೂ ಕೊಡಗು ವಿಫಲವಾಗಿದ್ದು ಆದಷ್ಟು ಬೇಗನೇ ಜಿಲ್ಲೆಯ ಪುನರ್ ವಿಂಗಡಣೆ ಆಗಬೇಕೆನ್ನುವದು ಹಲವರ ವಾದವಾಗಿದೆ.

ನೆರೆಯ ದಕ್ಷಿಣ ಕನ್ನಡ, ಮೈಸೂರು, ಹಾಸನ ಜಿಲ್ಲೆಗಳ ಗಡಿಭಾಗಗಳನ್ನು ಒಳಗೊಂಡಂತೆ ಜಿಲ್ಲೆ ಪುನರ್ ವಿಂಗಡಣೆಯಾದಲ್ಲಿ ಲೋಕಸಭಾ ಸ್ಥಾನ ಸೇರಿದಂತೆ ಮೂರು ಶಾಸಕ ಕ್ಷೇತ್ರಗಳನ್ನು ಮತ್ತೆ ಪಡೆಯುವ ಅವಕಾಶ ಈ ಮೂಲಕ ಒದಗಬಹುದು ಎನ್ನುವದು ಆಶಯವಾಗಿದೆ.

ಕುಶಾಲನಗರ, ಸುಂಟಿಕೊಪ್ಪ, ನೆಲ್ಲಿಹುದಿಕೇರಿ, ತೊರೆನೂರು ಸೇರಿದಂತೆ ಹಲವೆಡೆ ಇದೀಗ ನೂತನ ತಾಲೂಕು ರಚನೆ ಹೋರಾಟದ ಕೂಗು ಸಾಮೂಹಿಕವಾಗಿ ಎದ್ದಿದ್ದು ಇದೇ ರೀತಿ ಮುಂದುವರೆದಲ್ಲಿ ಮುಂದಿನ ದಿನದಲ್ಲಿ ಪ್ರಸ್ತಾವಿತ ನೂತನ ಕಾವೇರಿ ತಾಲೂಕು ರಚನೆ ನಿಶ್ಚಿತ ಎನ್ನುವದು ಹೋರಾಟಗಾರರ ಕನಸಾಗಿದೆ.

ಕುಶಾಲನಗರದಲ್ಲಿ ಕಳೆದ 1 ತಿಂಗಳಿನಿಂದ ತಾಲೂಕು ರಚನೆಯ ಹೋರಾಟಗಳು ಗರಿಗೆದರುವದರೊಂದಿಗೆ ವಿವಿಧ ಸಂಘಸಂಸ್ಥೆಗಳು ನಿರಂತರ ನಿರಶನ, ಧರಣಿ ಮತ್ತಿತರ ಪ್ರತಿಭಟನೆಗಳಲ್ಲಿ ತೊಡಗಿಕೊಂಡಿದ್ದು ಮನೆಮನೆಗೆ ಹೋರಾಟದ ಕಿಚ್ಚು ತಲುಪುವಂತಾಗಿದೆ. ರಾಜಕೀಯ ರಹಿತವಾಗಿ ಹೋರಾಟ ನಡೆದಲ್ಲಿ ಉದ್ದೇಶ ಈಡೇರುವದು ಖಚಿತ ಎನ್ನುತ್ತಾರೆ ಇಲ್ಲಿನ ಹಿರಿಯ ನಾಗರಿಕರು. ಕುಶಾಲನಗರಕ್ಕೆ ನೂತನವಾಗಿ ಮಂಜೂರಾಗಿರುವ ವಿಶೇಷ ತಹಶೀಲ್ದಾರ್, ಉಪನೋಂದಣಾಧಿಕಾರಿ ಕಚೇರಿಗಳು ಇನ್ನೂ ಪ್ರಾರಂಭಗೊಳ್ಳದಿರುವದು ಜನಪ್ರತಿನಿಧಿಗಳ ತಾತ್ಸಾರ ಮನೋಭಾವನೆಯನ್ನು ಎತ್ತಿ ತೋರಿಸುತ್ತಿದೆ ಎಂದರೆ ತಪ್ಪಾಗಲಾರದು. ದಿನನಿತ್ಯ ನಡೆಯುವ ನಿರಶನ, ಧರಣಿ ಪೈಪೋಟಿಯಲ್ಲಿ ನಡೆಯುತ್ತಿದ್ದರೂ ಹೋರಾಟದ ಕಿಚ್ಚು ಅಧಿಕಾರಿಗಳಿಗೆ ತಲುಪದಿರುವದು ಕಂಡುಬರುತ್ತಿದೆ. ಯಾವದೇ ಸಂಘಟನೆಗಳು ತಮ್ಮ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಡಳಿತ ಕ್ಕಾಗಲೀ, ಸ್ಥಳೀಯ ಆಡಳಿತಕ್ಕಾಗಲೀ ನೀಡದಿರುವದು ಇದಕ್ಕೆ ಕಾರಣವಾಗಿದೆ. ಈ ತಿಂಗಳ 30 ರಂದು ಪ್ರಸ್ತಾವಿತ ತಾಲೂಕು ವ್ಯಾಪ್ತಿಯ ಪ್ರದೇಶ ಜನರಿಂದ ಬೃಹತ್ ರ್ಯಾಲಿ ಆಯೋಜಿಸಲಾಗಿದ್ದು ನಂತರದ ಬೆಳವಣಿಗೆಯನ್ನು ಕಾದು ನೋಡಬೇಕಾಗಿದೆ. ಈಗಾಗಲೆ ಸಂಪುಟದಿಂದ ಸಮ್ಮತಿಗೊಂಡ 43 ತಾಲೂಕುಗಳ ಜೊತೆಗೆ ಕುಶಾಲನಗರ ಕೇಂದ್ರವಾಗಿರಿಸಿಕೊಂಡು ನೂತನ ತಾಲೂಕು ರಚನೆ ಕನಸು ನನಸಾಗುವದೇ ಎಂದು ಕಾದು ನೋಡಬೇಕಾಗಿದೆ.

- ಚಂದ್ರಮೋಹನ್