ಮಡಿಕೇರಿ, ಅ. 27: ನಗರಸಭೆಯ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ನಗರದ ಜನತೆ ಮಾತ್ರವಲ್ಲದೆ ದೇಶ, ವಿದೇಶದಿಂದ ಆಗಮಿಸುತ್ತಿರುವ ಪ್ರವಾಸಿಗರು ಕೂಡ ನರಕಯಾತನೆ ಅನುಭವಿಸುತ್ತಿದ್ದಾರೆ. ನಗರಸಭೆಯಲ್ಲಿರುವ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರುಗಳು ಜನರ ಹಿತ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವದರಿಂದ ಸರ್ವ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಬೇಕೆಂದು ಜೆಡಿಎಸ್ ಆಗ್ರಹಿಸಿದೆ. ಅಧಿಕಾರದ ದಾಹಕ್ಕೆ ಅಂಟಿಕೊಂಡವರು ರಾಜೀನಾಮೆ ನೀಡುವ ನಿರ್ಧಾರವನ್ನು ಕೈಗೊಳ್ಳುವ ಬಗ್ಗೆ ಸಂಶಯವಿದ್ದು, ಸರಕಾರ ನಿಷ್ಪ್ರಯೋಜಕ ನಗರಸಭೆಯನ್ನು ಸೂಪರ್ ಸೀಡ್ ಮಾಡಬೇಕೆಂದು ರಾಜ್ಯ ಜೆಡಿಎಸ್ ಕಾರ್ಯದರ್ಶಿ ಡಾ. ಮನೋಜ್ ಬೋಪಯ್ಯ ಹಾಗೂ ಜಿಲ್ಲಾ ವಕ್ತಾರ ಭರತ್‍ಕುಮಾರ್ ಒತ್ತಾಯಿಸಿದ್ದಾರೆ.

ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ನೀಡಲಾಗದ ನಗರಸಭೆ ಕೇವಲ ಕಾಲಹರಣದಲ್ಲಿ ತೊಡಗಿದೆ. ಸರಕಾರದಿಂದ ಕೋಟಿಗಟ್ಟಲೆ ಹಣ ಬಂದರೂ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರುಗಳ ನಡುವಿನ ವೈಯುಕ್ತಿಕ ಕಾಳಗದಿಂದಾಗಿ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಬಿಜೆಪಿ ಮಂದಿ ಉಪಾಧ್ಯಕ್ಷ ಸ್ಥಾನ

(ಮೊದಲ ಪುಟದಿಂದ) ಹಾಗೂ ಸ್ಥಾಯಿ ಸಮಿತಿ ಸ್ಥಾನದಲ್ಲಿ ಅಧಿಕಾರ ಅನುಭವಿಸುತ್ತಿದ್ದರೂ ನಗರಸಭಾ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಚಾರವಾಗಿದ್ದು, ಮೊದಲು ಉಪಾಧ್ಯಕ್ಷ ಸ್ಥಾನ ಹಾಗೂ ಸ್ಥಾಯಿ ಸಮಿತಿಯಲ್ಲಿರುವ ಬಿಜೆಪಿ ಪ್ರತಿನಿಧಿಗಳು ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಲಿ ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಶಾಸಕರುಗಳ ಕೊಡುಗೆ ಶೂನ್ಯ

ನಗರಸಭೆ ಇಷ್ಟೊಂದು ಹದಗೆಟ್ಟಿದ್ದರೂ ನಗರ ವ್ಯಾಪ್ತಿಯಿಂದಲೇ ನಿರ್ಣಾಯಕ ಮತಗಳನ್ನು ಗಳಿಸಿ ಗೆಲುವು ಸಾಧಿಸುತ್ತಿರುವ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸP ಎಂ.ಪಿ.ಅಪ್ಪಚ್ಚು ರಂಜನ್, ಸ್ಥಳೀಯ ನಿವಾಸಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಜನರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರದ ಅಭಿವೃದ್ಧಿಗೆ ಕೈಜೋಡಿಸದೆ ಇರುವದು ದುರಂತವೇ ಸರಿ. ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ವೀಣಾಅಚ್ಚಯ್ಯ, ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್‍ಸಿಂಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವÀ ಎಂ.ಆರ್. ಸೀತಾರಾಂ ಅವರುಗಳು ಮನಸ್ಸು ಮಾಡಿದ್ದರೆ ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿ ನಗರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯ ಬಹುದಾಗಿತ್ತು. ಆದರೆ ಕೇವಲ ರಾಜಕಾರಣ ಮಾಡುವದಕ್ಕಷ್ಟೇ ಅಧಿಕಾರವನ್ನು ಬಳಸಿಕೊಳ್ಳುತ್ತಿರುವ ಈ ಮಂದಿ ಪ್ರವಾಸಿಗರ ಸ್ವರ್ಗ ವಾಗಿರುವ ಮಡಿಕೇರಿಯನ್ನು ನರಕ ಮಾಡಿದ್ದಾರೆ ಎಂದರು ಟೀಕಿಸಿದ್ದಾರೆ.

ನಗರದ ತುಂಬಾ ಹೊಂಡ ಗುಂಡಿಗಳಿದ್ದು, ಮುಂದಿನ 30 ದಿನಗಳೊಳಗೆ ಹೊಂಡಗಳನ್ನು ಮುಚ್ಚಿ ಡಾಮರೀಕರಣ ಮಾಡದಿದ್ದರೆ, ಆ ಹೊಂಡಗಳಿಗೆ ಆಯಾ ವಾರ್ಡ್‍ನ ನಗರಸಭಾ ಸದಸ್ಯರ ಹೆಸರನ್ನಿಟ್ಟು ನಾಮ ಫಲಕವನ್ನು ಅಳವಡಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಹಮ್ಮಿ ಕೊಳ್ಳಲಾಗುವದು. ನಗರಸಭೆಯಲ್ಲಿ ತೆರಿಗೆ ವಸೂಲಿ ಸಂದರ್ಭ ನಡೆದಿರುವ ಕೋಟ್ಯಾಂತರ ರೂಪಾಯಿ ಹಗರಣದ ವರದಿಯನ್ನು ಬಹಿರಂಗಪಡಿಸಿ ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮಕ್ಕೆ ಕಾಳಜಿ ವಹಿಸದಿದ್ದಲ್ಲಿ ನಗರಸಭೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವದಾಗಿ ಎಚ್ಚರಿಕೆ ನೀಡುತ್ತೇವೆ.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‍ನ ಚೆಯ್ಯಂಡಾಣೆ ಘಟಕದ ಪ್ರಮುಖ ಪಿ. ಪ್ರತಾಪ್, ಕಾಕೋಟು ಪರಂಬುವಿನ ಅಮ್ಮಂಡ ವಿವೇಕ್, ಕಕ್ಕಬೆಯ ಕೆ. ಶರಣ್, ಕಡಂಗದ ಎಂ. ಮದನ್ ಹಾಗೂ ಮಡಿಕೇರಿ ನಗರ ಕಾರ್ಯದರ್ಶಿ ಮಹಮ್ಮದ್ ಅಬ್ರಾರ್ ಉಪಸ್ಥಿತರಿದ್ದರು.