ಮಡಿಕೇರಿ, ಅ. 27: ಪ್ರಸಕ್ತ (2017-18ನೇ) ಸಾಲಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ “ಧನಶ್ರೀ” ಯೋಜನೆ ಮತ್ತು “ಚೇತನಾ” ಯೋಜನೆಗಳ ಫಲಾನುಭವಿಗಳ ಆಯ್ಕೆ ಸಮಿತಿ ಸಭೆಯು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆಯಿತು.

“ಧನಶ್ರೀ” ಮತ್ತು “ಚೇತನಾ” ಯೋಜನೆಯಡಿ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪ್ರತಿ ಫಲಾನುಭವಿಗೆ ಘಟಕ ವೆಚ್ಚ ರೂ. 50 ಸಾವಿರಗಳನ್ನು ನೀಡಲಾಗುವದು. ಈ ಪೈಕಿ ರೂ. 25 ಸಾವಿರ ಸಹಾಯಧನವಾಗಿ ಪರಿಗಣಿಸಲಾಗುತ್ತಿದೆ. ಉಳಿದ ರೂ. 25 ಸಾವಿರಗಳು ಬಡ್ಡಿ ರಹಿತ ಸಾಲವಾಗಿದ್ದು, ಪ್ರತಿ ಮಾಹೆ ರೂ. ಒಂದು ಸಾವಿರ 25 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕಾಗಿದೆ.

2017-18ನೇ ಸಾಲಿಗೆ ಚೇತನಾ ಯೋಜನೆಯಡಿ ಕೊಡಗು ಜಿಲ್ಲೆಗೆ 3 ಗುರಿಗಳನ್ನು ನಿಗದಿಪಡಿಸಿದ್ದು, 3 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಧನಶ್ರೀ ಯೋಜನೆ ಯಡಿ ಜಿಲ್ಲೆಗೆ 26 ಗುರಿಗಳನ್ನು ನಿಗದಿಪಡಿಸಿದ್ದು, 26 ಮಂದಿ ಮಹಿಳೆಯರನ್ನು ಅವರ ವಯಸ್ಸು, ವಿದ್ಯಾರ್ಹತೆ, ಆದಾಯ, ಚಟುವಟಿಕೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.

ಸಭೆಯಲ್ಲಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು, ಲೀಡ್ ಬ್ಯಾಂಕ್ ಕಾರ್ಪೋರೇಶನ್ ಬ್ಯಾಂಕ್‍ನ ವ್ಯವಸ್ಥಾಪಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರು, ಮಹಿಳೋದಯ ಮಹಿಳಾ ಒಕ್ಕೂಟದ ಸಂಚಾಲಕರು, ಜಿಲ್ಲಾ ಆಸ್ಪತ್ರೆಯ ಆರೈಕೆ ಮತ್ತು ಬೆಂಬಲ ಕೇಂದ್ರದ ಸಂಯೋಜಕರು, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಇತರರು ಉಪಸ್ಥಿತರಿದ್ದರು.