ಕೂಡಿಗೆ, ಅ. 27: ಜಿಲ್ಲೆಯ ಏಕೈಕ ಅಣೆಕಟ್ಟೆಯಾದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಬೃಂದಾವನ ಹಾಗು ಸಂಗೀತ ಕಾರಂಜಿ ನಿರ್ಮಾಣದ ಬಗ್ಗೆ ರೂ. 10 ಕೋಟಿಗೂ ಅಧಿಕ ವೆಚ್ಚದಲ್ಲಿ ಬೃಂದಾವನದ ಕಾಮಗಾರಿಯು ಕುಂಟುತ್ತಾ ಸಾಗಿ ಎರಡು ವರ್ಷಗಳ ಹಿಂದೆ ಕಾಮಗಾರಿ ಮುಗಿದಿದೆ. ಆದರೆ, ಪ್ರವಾಸಿಗರನ್ನು ಆಕರ್ಷಿಸುವ ಬಹುಮುಖ್ಯವಾದ ಸಂಗೀತ ಕಾರಂಜಿಯು ಅನೇಕ ಎಡರು-ತೊಡರುಗಳಿಂದ ಸಾಗಿ ಇದೀಗ ಶೇ. 95 ರಷ್ಟು ಕಾಮಗಾರಿ ಮುಗಿದಿದೆ. ಸಂಗೀತ ಕಾರಂಜಿಗೆ ರೂ. 2.49 ಕೋಟಿ ಹಣವನ್ನು ವಿನಿಯೋಗಿಸಿ ಆಧುನಿಕ ತಂತ್ರಗಾರಿಕೆಯನ್ನೊಳಗೊಂಡ ಬಣ್ಣ ಬಣ್ಣದ ವಿದ್ಯುತ್ ಮತ್ತು ಸಂಗೀತವನ್ನು ಅಳವಡಿಸಿದ್ದು ಪ್ರವಾಸಿಗರನ್ನು ಆಕರ್ಷಿಸಲು ಸಿದ್ಧಗೊಂಡಿದೆ. ಮುಂದಿನ ತಿಂಗಳ ಅಂತ್ಯದೊಳಗೆ ಈ ಸಂಗೀತ ಕಾರಂಜಿ ಉದ್ಘಾಟನೆಗೊಳ್ಳಲು ಸರ್ಕಾರಕ್ಕೆ ಪತ್ರವ್ಯವಹಾರ ನಡೆಸಲಾಗಿದ್ದು, ಉದ್ಘಾಟನೆ ದಿನಾಂಕವನ್ನು ಗುರುತಿಸುವ ಕೆಲಸ ಬಾಕಿ ಉಳಿದಿದೆ. ಇದುವರೆಗೂ ಬೃಂದಾವನವನ್ನು ವೀಕ್ಷಿಸಿ ತೆರಳುತ್ತಿದ್ದ ಪ್ರವಾಸಿಗರಿಗೆ ಸಂಜೆಯ ಸಂಗೀತ ಕಾರಂಜಿ ರಸದೌತಣ ನೀಡುವ ಯೋಜನೆಗೆ ಉದ್ಘಾಟನೆ ಭಾಗ್ಯ ದೊರಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.