ಮಡಿಕೇರಿ, ಅ. 27: ರಾಜ್ಯ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ರಾಜ್ಯ ಸರಕಾರ ಪ್ರಾದೇಶಿಕ ಸಾರಿಗೆ ಇಲಾಖೆ ಮೂಲಕ ಹೊಸ ಆದೇಶ ಜಾರಿಗೆ ಬಂದಿದೆ. 100 ಸಿ.ಸಿ.ಗೆ ಕಡಿಮೆ ಸಾಮಥ್ರ್ಯದ ಇಂಜಿನ್ ಹೊಂದಿರುವ ದ್ವಿಚಕ್ರ ವಾಹನಗಳಿಗೆ ಹಿಂಬದಿ ಸೀಟು ಅಳವಡಿಸಿದ್ದಲ್ಲಿ ಅಂತಹ ವಾಹನಗಳ ನೋಂದಣಿಯನ್ನು ನಿಷೇಧಿಸಲಾಗಿದೆ. ರಾಜ್ಯ ಉಚ್ಛ ನ್ಯಾಯಾಲಯವು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪೆನಿ ಲಿಮಿಟೆಡ್ ವಿರುದ್ಧ ಹೇಮಂತ್ ಪ್ರಕರಣದಲ್ಲಿ ನೀಡಿರುವ ತೀರ್ಪಿನಲ್ಲಿ 100 ಸಿ.ಸಿ.ಗೂ ಕಡಿಮೆ ಸಾಮಥ್ರ್ಯ ಹೊಂದಿರುವ ಇಂಜಿನ್‍ಗಳ ದ್ವಿಚಕ್ರ ವಾಹನಗಳ ಹಿಂಬದಿ ಸೀಟು ಅಳವಡಿಕೆ ಮಾಡಿರುವಂತಹ ನೋಂದಣಿಯನ್ನು ನಿಷೇಧಿಸುವಂತೆ ನೀಡಿರುವ ನಿರ್ದೇಶನದಂತೆ ಪ್ರಾದೇಶಿಕ ಸಾರಿಗೆ ಇಲಾಖೆ ಈ ಆದೇಶ ಹೊರಡಿಸಿದ್ದು, ತಾ. 24ರಿಂದಲೇ ಇದು ಜಾರಿಗೆ ಬಂದಿದೆ.

ಇಂತಹ ವಾಹನಗಳ ನೋಂದಣಿಯನ್ನು ನಿಷೇಧಿಸಿರುವದು ಮಾತ್ರವಲ್ಲದೆ ಅಂತಹ ವಾಹನಗಳ ಮೇಲೆ ಹಿಂಬದಿ ಸವಾರನೊಂದಿಗೆ ಪ್ರಯಾಣಿಸುವದನ್ನು ಸಹ ನಿಷೇಧಿಸಲಾಗಿದೆ. ನೂತನ ಆದೇಶ ಇಡೀ ರಾಜ್ಯದಲ್ಲಿ ಜಾರಿಯಾಗಿದ್ದು, ಕೊಡಗು ಜಿಲ್ಲೆಯಲ್ಲಿಯೂ ಇಂತಹ ವಾಹನಗಳ ನೋಂದಣಿಯನ್ನು ಮಾಡಲಾಗುತ್ತಿಲ್ಲ.

ಜಿಲ್ಲೆಯಲ್ಲಿ 20 ಸಾವಿರಕ್ಕೂ ಅಧಿಕ ವಾಹನ

ಕೊಡಗು ಜಿಲ್ಲೆಯಲ್ಲಿ ಪ್ರಾದೇಶಿಕ ಸಾರಿಗೆ ಇಲಾಖಾ ಕಚೇರಿಯಲ್ಲಿ ಈ ಆದೇಶ ಜಾರಿಗೆ ಬರುವ ತನಕ 100 ಸಿ.ಸಿ. ಸಾಮಥ್ರ್ಯಕ್ಕಿಂತ ಕಡಿಮೆ ಇರುವ 20,665 ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ. ಇದೀಗ ಹಿಂಬದಿ ಸೀಟು ಇರುವ ಹೊಸ ವಾಹನಗಳ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ. ಸದರಿ ವಾಹನಗಳಿಗೆ ಒಂದು ಸೀಟು ಅಳವಡಿಸಿಕೊಂಡು ವಾಹನದ ಆಸನ ಸಾಮಥ್ರ್ಯ ಒಂದು ಎಂಬದಾಗಿ ನಮೂದಿಸಿರುವ ದಾಖಲೆಗಳನ್ನು ಸಲ್ಲಿಸಿದಲ್ಲಿ

(ಮೊದಲ ಪುಟದಿಂದ) ಮಾತ್ರ ಅಂತಹ ವಾಹನಗಳನ್ನು ನೋಂದಣಿ ಮಾಡಲಾಗುವದು. ಈಗಾಗಲೇ ನೋಂದಣಿಯಾಗಿರುವ 100 ಸಿ.ಸಿ. ಕಡಿಮೆ ಸಾಮಥ್ರ್ಯದ ವಾಹನ ಮಾಲೀಕರು ಇದರಿಂದಾಗಿ ಪೇಚಿಗೆ ಸಿಲುಕಿದ್ದಾರೆ. ಏಕೆಂದರೆ ಇವರು ತಮ್ಮ ವಾಹನದಲ್ಲಿ ಹಿಂಬದಿ ಸವಾರರೊಂದಿಗೆ ಪ್ರಯಾಣಿಸುವಂತಿಲ್ಲ. ಒಬ್ಬೊಬ್ಬರೇ ಚಾಲನೆ ಮಾಡಲಷ್ಟೇ ಅವಕಾಶವಿದೆ. ಇದನ್ನು ನಿಯಂತ್ರಿಸಲು ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಅಧಿಕಾರ ನೀಡಲಾಗಿದೆ.

ರಾಜ್ಯದಲ್ಲಿ ಮಾತ್ರ

1989ರಲ್ಲೇ ಕರ್ನಾಟಕ ಮೋಟಾರು ವಾಹನ ಕಾಯ್ದೆ ತಂಡ ಸಂದರ್ಭದಲ್ಲೇ ಈ ನಿಯಮವನ್ನು ಅನುಷ್ಠಾನಗೊಳಿಸಿದ್ದರೂ ಉಚ್ಛ ನ್ಯಾಯಾಲಯದಿಂದ ಈ ಆದೇಶ ಜಾರಿಯಾಗುವ ತನಕ ಸಾರಿಗೆ ಇಲಾಖೆಯ ಬಹುತೇಕ ಅಧಿಕಾರಿಗಳೂ ಸೇರಿದಂತೆ ಸಾರ್ವಜನಿಕರಿಗೆ ಇದರ ಅರಿವು ಇರಲಿಲ್ಲ ಎನ್ನಲಾಗುತ್ತಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವವರು ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಇಂತಹ ದ್ವಿಚಕ್ರ ವಾಹನಗಳನ್ನು ಖರೀದಿಸುವವರಾಗಿದ್ದಾರೆ. ಹೊಸ ಆದೇಶದಿಂದ ಇಂತಹ ದ್ವಿಚಕ್ರ ವಾಹನ ತಯಾರಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಈಗಾಗಲೇ ಸಿದ್ಧಪಡಿಸಲಾಗಿರುವ ಇಂತಹ ವಾಹನಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲದಂತಾಗಿದೆ. ರಾಜ್ಯದಲ್ಲಿ ಮಾರಾಟ ಮಾಡಬೇಕಾದರೆ ಕೇವಲ ಒಂದು ಸೀಟಿಗೆ ಮಾರ್ಪಾಡು ಮಾಡಬೇಕಾದ ಅನಿವಾರ್ಯತೆಯಲ್ಲಿ ತಯಾರಕರು ಇದ್ದಾರೆ.