ಬಾಳುಗೋಡು, ಅ. 27: ಕೊಡವ ಸಮಾಜ ಒಕ್ಕೂಟದಿಂದ ನಡೆಯುತ್ತಿರುವ 6 ನೇ ವರ್ಷದ ಕೊಡವ ನಮ್ಮೆಯ 2 ನೇ ದಿನದ ಕಾರ್ಯಕ್ರಮದಲ್ಲಿ ಒಕ್ಕೂಟದ ಆವರಣದಲ್ಲಿ ನಿರ್ಮಿಸಿರುವ ಯುದ್ದ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನೀಡಲಾಯಿತು.ಅತಿಥಿಯಾಗಿ ಪಾಲ್ಗೊಂಡಿದ್ದ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಹಾಗೂ ಕೊಡವ ಸಮಾಜ ಒಕ್ಕೂಟ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಸ್ಮಾರಕದಲ್ಲಿ ಹೂಗುಚ್ಚ ಇಡುವ ಮೂಲಕ ಶೃದ್ದಾಂಜಲಿ ಸಲ್ಲಿಸಿದರು. ಈ ಸಂದರ್ಭ ಪಾಲ್ಗೊಂಡಿದ್ದವರು ಹೂ ಸಮರ್ಪಿಸಿ ಗೌರವ ನೀಡಿದರು. ‘ತಳಿಯತಕ್ಕಿ ಬೊಳ್‍ಚ’ದೊಂದಿಗೆ ಸಾಗಿ ಬಂದು ಸ್ಮಾರಕದಲ್ಲಿ ದೀಪವಿಟ್ಟು ಪೂಜಿಸಲಾಯಿತು. ಸಾಮೂಹಿಕವಾಗಿ ವಂದೇ ಮಾತರಂ ಗೀತೆ ಹಾಡುವ ಮೂಲಕ ನಮನ ಸಲ್ಲಿಸಲಾಯಿತು.
ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ಸುಬ್ಬಯ್ಯ ಮಾತನಾಡಿ, ಕಾವೇರಿ ಚಂಗ್ರಾಂದಿ ಆಚರಣೆಯಲ್ಲಿ ಮನೆಮನೆಗಳಲ್ಲಿ ಮೀದಿ ಇಡುವ ಮೂಲಕ ಹಿರಿಯರಿಗೆ ಗೌರವ ನೀಡುತ್ತೇವೆ. ಇದರೊಂದಿಗೆ ಒಕ್ಕೂಟದ ಆವರಣದಲ್ಲಿ ಯುದ್ದದಲ್ಲಿ ಮಡಿದ ಸೈನಿಕರನ್ನು ನೆನಪಿಸಿಕೊಳ್ಳುವ ಕಾರ್ಯ ನಡೆದಿರುವದು ವಿಶೇಷ ವಾಗಿದೆ. ಮಿಲಿಟರಿಯೇತರ ಸಂಸ್ಥೆ ಯೊಂದು ಮಡಿದ ಸೈನಿಕರಿಗೆ ನೀಡುತ್ತಿರುವ ಗೌರವದ ಸೇವೆ ಶ್ಲಾಘನೀಯ ಎಂದರು.
(ಮೊದಲ ಪುಟದಿಂದ) ಫೀ. ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಮೂಲಕ ನಮಗೆ ಗೌರವ ಹೆಚ್ಚಾಗುತ್ತಿದೆ. ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ನಮ್ಮ ಹಿರಿಯ ಚೇತನಗಳ ಪ್ರತಿಮೆ ಅನಾವರಣಗೊಳಿಸಲು ಬರುತ್ತಿರುವದು ನಮಗೆ ಹೆಮ್ಮೆ. ನವೆಂಬರ್ 4 ರಂದು ಗೋಣಿಕೊಪ್ಪದಲ್ಲಿ ನಡೆಯುವ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಪ್ರತೀ ಮನೆಯಿಂದ ಕೊಡವರು ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಳ್ಳುವ ಮೂಲಕ ಗೌರವ ನೀಡುವಂತಾಗಬೇಕು ಎಂದರು.
ನಮ್ಮಲ್ಲಿ ಪ್ರತಿಯೊಬ್ಬರೂ ನಾಯಕರಾಗುತ್ತಿರುವದು ಅನುಯಾಯಿಗಳನ್ನು ಕಾಣದಂತಾಗಿದೆ. ನಮಗೆ ಉತ್ತಮ ದಾರಿ ತೋರಿಸುವ ಸಂಸ್ಥೆಯ ಅನಿವಾರ್ಯತೆ ಇದೆ. ಇದಕ್ಕೆ ಹಿರಿಯರು ವಿಶೇಷ ಚಿಂತನೆ ಹರಿಸಿ ಎಲ್ಲಾ ಕೊಡವ ಸಮಾಜ ಹಾಗೂ ಒಕ್ಕೂಟವನ್ನು ಸೇರಿಸಿ ಬೇರೆ ಜನಾಂಗಗಳಿಗೆ ಇರುವಂತೆ ಗುರು, ಮಠ ಇಂತಹವುಗಳ ಸ್ಥಾಪನೆಗೆ ಚಿಂತಿಸಬೇಕು ಎಂದರು.
ಮುಂದಿನ ಚುನಾವಣೆಗೆ 2 ಎಂಎಲ್‍ಎ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ರಾಜಕೀಯದಲ್ಲಿ ಕೊಡವರ ಸ್ಥಾನವನ್ನು ಉಳಿಸಿಕೊಳ್ಳಬೇಕು. ಕೊಡಗಿನಿಂದ ಹೊರಗಿರುವ ಕೊಡವ ಮತದಾರರು ಚುನಾವಣೆಯಲ್ಲಿ ಮತ ಹಾಕಲು ತಮ್ಮ ಸ್ವಗ್ರಾಮಕ್ಕೆ ಬರಬೇಕು ಎಂದರು.
ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ಕೊಡವರ ಯುವಪೀಳಿಗೆ ಶೈಕ್ಷಣಿಕವಾಗಿ ಮುಂದುವರಿದಿದೆ. ಐಪಿಎಸ್, ಐಎಎಸ್ ಹುದ್ದೆ ಅಲಂಕರಿಸಲು ಮುಂದಾಗಬೇಕು. ಎಂಎಲ್‍ಎ ಅಯ್ಕೆಯಲ್ಲಿ ಕೊಡವರ ಬೆಂಬಲವಿರುತ್ತದೆ ಎಂಬುವದನ್ನು ಅರಿತುಕೊಂಡು ರಾಜಕೀಯವಾಗಿ ಮುಂದುವರಿಯಬೇಕು ಎಂದರು.
ಕೊಡವ ಸಮಾಜ ಒಕ್ಕೂಟ ಹಣವಂತರ ಪಾಲಿಗಿಲ್ಲ. 31 ಕೊಡವ ಸಮಾಜಗಳನ್ನು ಸೇರಿಸಿ ಸ್ಥಾಪಿಸಲಾಗಿದೆ. ಕೊಡವ ಸಮಾಜ ಪ್ರತೀ ಸದಸ್ಯ ಕೂಡ ಒಕ್ಕೂಟ ಸದಸ್ಯನಾಗಿದ್ದಾನೆ. ಈ ಮೂಲಕ ಒಗ್ಗಟ್ಟಿಗೆ ಮುಂದಾಗಿದ್ದೇವೆ ಎಂದರು. ಸರ್ಕಾರದ ಅನುದಾನದಿಂದಲೇ ಇಷ್ಟೊಂದು ಅಭಿವೃದ್ದಿ ಸಾಧ್ಯವಾಗಿದೆ. ಇದರ ರೂವಾರಿ ಮಲ್ಲೇಂಗಡ ದಾದಾ ಬೆಳ್ಯಪ್ಪ ಅವರ ಸಾಧನೆ ಶ್ಲಾಘನೀಯ ಎಂದರು.
ಕಾರ್ಯಕ್ರಮವನ್ನು ಮಾದೇಟೀರ ಬೆಳ್ಯಪ್ಪ ನಿರೂಪಿಸಿದರು. ಈ ಸಂದರ್ಭ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಮಲ್ಲೇಂಗಡ ದಾದಾ ಬೆಳ್ಯಪ್ಪ, ಕಾರ್ಯದರ್ಶಿ ವಾಟೇರೀರ ಶಂಕರಿ ಪೂವಯ್ಯ, ಉಪಾಧ್ಯಕ್ಷ ಮಂಡೇಯಡ ರವಿ ಉತ್ತಪ್ಪ ಉಪಸ್ಥಿತರಿದ್ದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿದರು.