ಮಡಿಕೇರಿ, ಅ. 27: ಇಲ್ಲಿನ ಚೆಸ್ಕಾಂ ಕಚೇರಿಯಲ್ಲಿ ಇಂದು ಜರುಗಿದ ತ್ರೈಮಾಸಿಕ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುವದ ರೊಂದಿಗೆ ಕೂಡಲೇ ಸಮಸ್ಯೆಗಳಿಗೆ ಸ್ಪಂದಿಸಿ ಇತ್ಯರ್ಥಗೊಳಿಸುವಂತೆ ಒತ್ತಾಯಿಸಿದರು. ಈ ಬಗ್ಗೆ ಸಮ್ಮತಿಸಿದ ಅಧೀಕ್ಷಕ ಅಭಿಯಂತರ ರಾಘವೇಂದ್ರ ಅವರು, ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆಯೊಂದಿಗೆ ಆದಷ್ಟು ಶೀಘ್ರಗತಿಯಲ್ಲಿ ಸಮಸ್ಯೆ ನಿವಾರಿಸುವಂತೆ ತಿಳಿ ಹೇಳಿದರು.ಗ್ರಾಮೀಣ ಜನತೆಯ ಸಮಸ್ಯೆಗಳಿಗೆ ಬೆನ್ನು ತಿರುಗಿಸಿರುವ ಇಲಾಖೆಯ ಮಂದಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ತಿಂಗಳುಗಟ್ಟಲೆಯಿಂದ ದೂರು ಸಲ್ಲಿಸಿದರೂ ತಿರುಗಿಯೂ ನೋಡುತ್ತಿಲ್ಲವೆಂಬ ಅಸಮಾಧಾನ ಸಭೆಯಲ್ಲಿ ವ್ಯಕ್ತಗೊಂಡಿತು.

ನಗರದ ಮಾರುಕಟ್ಟೆ ಪ್ರದೇಶದಲ್ಲಿ ವಾಹನ ದಟ್ಟಣೆ ನಡುವೆ ಮಂಜುನಾಥ ಎಂಬವರ

(ಮೊದಲ ಪುಟದಿಂದ) ಮನೆ ಬಾಗಿಲಿಗೆ ಹೊಂದಿಕೊಂಡಂತೆ ಟ್ರಾನ್ಸ್‍ಫಾರ್ಮರ್ ಅಳವಡಿಸಿರುವ ಬಗ್ಗೆ ಅಸಮಾಧಾನದೊಂದಿಗೆ ಜೀವಕ್ಕೆ ಬೆಲೆ ಗೊತ್ತಿರುವ ಅಧಿಕಾರಿಗಳು ಈ ಕೆಲಸ ಮಾಡಲಾರರು ಎಂದು ಗಮನ ಸೆಳೆಯಲಾಯಿತು. ಇತ್ತ ತುರ್ತು ಗಮನ ಹರಿಸಿ ಟ್ರಾನ್ಸ್‍ಫಾರ್ಮರ್ ಅನ್ನು ಸುರಕ್ಷಿತ ಕಡೆಗೆ ಬದಲಾಯಿಸಲು ಅಧಿಕಾರಿ ಸೂಚಿಸಿದರು.

ಇನ್ನೊಂದೆಡೆ ನಿವೃತ್ತ ಪೊಲೀಸ್ ಅಧಿಕಾರಿ ಪೆರುಮಾಳ್ ಎಂಬವರಿಗೆ ನಿರತಂತರವಾಗಿ ವಿದ್ಯುತ್ ಬಿಲ್ ಪಾವತಿಸದಿರುವ ಬಗ್ಗೆ ಚೆಸ್ಕಾಂನಿಂದ ಮೊಬೈಲ್ ಸಂದೇಶ ಬರುತ್ತಿರುವ ಆರೋಪ ಕೇಳಿಬಂತು. ಈ ಬಗ್ಗೆ ಪರಿಶೀಲಿಸಿದಾಗ ಗುಲ್ಬರ್ಗಕ್ಕೆ ಸೇರಿದ ಗ್ರಾಹಕರೊಬ್ಬರಿಗೆ ರವಾನೆಯಾಗಬೇಕಿರುವ ಸಂದೇಶ ಮಡಿಕೇರಿಗೆ ಬಂದಿರುವದು ಖಾತರಿಯಾಯಿತು.

ಇನ್ನೋರ್ವ ಬಿಎಸ್‍ಎನ್‍ಎಲ್ ಉದ್ಯೋಗಿ ಹರೇಂದ್ರ ಎಂಬವರ ಮನೆಯ ಬಾವಿಗೆ ಅಳವಡಿಸಿರುವ ಮೋಟಾರು ಯಂತ್ರಕ್ಕೆ ಕಾಲ ಕಾಲಕ್ಕೆ ಬಿಲ್ ಪಾವತಿಸುತ್ತಿದ್ದರೂ, ಶೇ. 50 ಬಡ್ಡಿಯೊಂದಿಗೆ ಮತ್ತೆ ಮತ್ತೆ ಅಧಿಕ ಬಿಲ್ ರವಾನೆಯಾಗುತ್ತಿರುವ ಆರೋಪ ಕೇಳಿಬಂತು.

ಹಾಕತ್ತೂರುವಿನ ವಿಧವಾ ಮಹಿಳೆ ಶಾಂತಮ್ಮ ಕುಶಾಲಪ್ಪ ಎಂಬವರ ತೋಟದ ಮನೆಗೆ ಸಂಪರ್ಕವಿರುವ ವಿದ್ಯುತ್ ತಂತಿ ಮೇಲೆ ಕಳೆದ ಜುಲೈನಲ್ಲಿ ಮರದ ಕೊಂಬೆ ಮುರಿದು ಬಿದ್ದು ವಿದ್ಯುತ್ ಕಡಿತಗೊಂಡಿದ್ದರೂ, ಲೈನ್‍ಮನ್ ಕಾಳಪ್ಪ ಎಂಬವರು ಇದುವರೆಗೆ ತೆರವುಗೊಳಿಸದೆ ಶತಾಯಿಸುತ್ತಿರುವ ದೂರು ಕೇಳಿ ಬಂತು. ಈ ಬಗ್ಗೆ ಅಧಿಕಾರಿ ಕ್ರಮಕ್ಕೆ ಸೂಚಿಸಿದರು.

ಇಲ್ಲಿನ ಅಶೋಕಪುರ ನಿವಾಸಿ ಸತೀಶ್ ಎಂಬವರ ಮನೆಗೆ ಹೊಂದಿಕೊಂಡಂತೆ ವಿದ್ಯುತ್ ತಂತಿ ತೀರಾ ಕೆಳಗಡೆ ನೇತಾಡುತ್ತಿದ್ದು, ಕಳೆದ ಜೂನ್‍ನಲ್ಲಿ ಲಿಖಿತ ದೂರು ಸಲ್ಲಿಸಿದ್ದರೂ, ಇದುವರೆಗೆ ಚೆಸ್ಕಾಂ ಸಿಬ್ಬಂದಿ ಗಮನ ಹರಿಸದೆ ನಿರ್ಲಕ್ಷ್ಯ ತೋರುತ್ತಿರುವದಾಗಿ ಗಮನ ಸೆಳೆಯಲಾಯಿತು.

ಇನ್ನು ಗ್ರಾಮೀಣ ಸಮಸ್ಯೆಗಳ ಬಗ್ಗೆ ಯವಕಪಾಡಿಯ ಕುಡಿಯರ ಮುತ್ತಪ್ಪ, ಕಕ್ಕಬೆ ಗ್ರಾ.ಪಂ. ಸದಸ್ಯ ಎಂ. ರಮೇಶ್ ಕಂಗಾಂಡ ಜೂಲಿ ಪೂವಪ್ಪ ಮೊದಲಾದವರು ಗ್ರಾಮೀಣ ವಿದ್ಯುತ್ ಸಮಸ್ಯೆಯೊಂದಿಗೆ ನಾಪೋಕ್ಲು ಹೋಬಳಿಗೆ ಮಹಿಳಾ ಅಧಿಕಾರಿ ಬದಲಿಗೆ ಸಮರ್ಥರೊಬ್ಬರನ್ನು ನೇಮಿಸುವಂತೆ ಗಮನ ಸೆಳೆದರು. ಆದಿವಾಸಿ ಗಿರಿಜನ ಕುಟುಂಬಗಳ ಅನೇಕ ಮನೆಗಳಿಗೆ ಇನ್ನೂ ವಿದ್ಯುತ್ ಒದಗಿಸದಿರುವ ಬಗ್ಗೆ ಅಸಮಾಧಾನ ಹೊರಗೆಡವಿದರು.

ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಮುಟ್ಲು ಗ್ರಾಮದಲ್ಲಿ ನೂರಾರು ಮೀಟರ್ ಅಂತರದಲ್ಲಿ ಕಂಬ ಅಳವಡಿಸಿದ್ದು, ಪದೇ ಪದೇ ಸಮಸ್ಯೆ ಎದುರಾಗುತ್ತಿದ್ದರೂ, ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವದಾಗಿ ಅಸಮಾಧಾನ ವ್ಯಕ್ತಗೊಂಡಾಗ ತಾನೇ ಖುದ್ದು ಪರಿಶೀಲಿಸಿ ಶೀಘ್ರ ಇತ್ಯಾರ್ಥಗೊಳಿಸುವದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಅಭಿವೃದ್ಧಿ ಕೆಲಸಗಳಿಗೆ ಚೆಸ್ಕಾಂನಲ್ಲಿ ಹಣ ಮತ್ತು ಸಾಮಗ್ರಿಗಳ ಯಾವ ಕೊರತೆಯೂ ಇಲ್ಲವೆಂದು ಸ್ಪಷ್ಟಪಡಿಸಿದ ಅಧೀಕ್ಷಕ ಅಭಿಯಂತರ ರಾಘವೇಂದ್ರ ಅವರು ಮೂಲಭೂತ ಸೌಲಭ್ಯ ಕಲ್ಪಿಸಲು ಇಲಾಖೆಯಿಂದ ತ್ವರಿತವಾಗಿ ಗಮನ ಹರಿಸುವ ಭರವಸೆ ನೀಡಿದರು. ಅಲ್ಲದೆ ಸಮಸ್ಯೆಗಳನ್ನು ಈಡೇರಿಸಲು ತ್ರೈಮಾಸಿಕ ಸಭೆಯು ತಮ್ಮ ಅಧ್ಯಕ್ಷತೆಯಲ್ಲೇ ಜರುಗಲಿದ್ದು, ಸಾರ್ವಜನಿಕರು ಲಿಖಿತ ಅಥವಾ ನೇರ ದೂರು ಸಲ್ಲಿಸಿ ಇತ್ಯರ್ಥಗೊಳಿಸಿಕೊಳ್ಳುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಇಲಾಖೆಯ ಅಧಿಕಾರಿಗಳಾದ ಸೋಮಶೇಖರ್, ತಾರಾ, ದೊಡ್ಡಮನಿ, ಸಂಪತ್, ದೇವಯ್ಯ ಮೊದಲಾದವರು ಹಾಜರಿದ್ದು, ಸಾರ್ವಜನಿಕ ದೂರುಗಳನ್ನು ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.