*ಸಿದ್ದಾಪುರ, ಅ. 27: ಸರಕಾರಿ ಶಾಲೆಗಳಲ್ಲಿ ವಿಧ್ಯಾರ್ಥಿಗಳ ಹಾಜರಾತಿಯನ್ನು ಹೆಚ್ಚಿಸಲು ಸರ್ವಜನಿಕ ಶಿಕ್ಷಣ ಇಲಾಖೆ ಹೊಸ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಶಾಲೆಗೆ ಬನ್ನಿ ಶನಿವಾರ ಕಲಿಯಲು ನೀಡಿ ಸಹಕಾರ ಎಂಬ ಕಾರ್ಯಕ್ರಮಕ್ಕೆ ಸ್ಥಳಿಯ ಗಿಟಾರ್ ವಾದಕ ಅಖಿಲ್ ನಾಣಯ್ಯ ಗಿಟಾರ್ ಕಲಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಯುವ ಪ್ರತಿಭೆಯೊಬ್ಬ ಯಾವದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ಪ್ರತಿ ಶನಿವಾರ ಕಾರ್ಯಕ್ರಮಗಳನ್ನು ಶಾಲೆಯಲ್ಲಿ ನೀಡಿ ಯುವ ಪ್ರತಿಭೆಗಳಿಗೆ ಗಿಟಾರ್ ಕಲಿಸುತ್ತಿದ್ದಾರೆ. ಅಭ್ಯತ್ಮಂಗಲ ಗ್ರಾಮದ ಅಖಿಲ್ ನಾಣಯ್ಯ, ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಕಳೆದ ಎರಡು ವರ್ಷಗಳಿಂದ ಬಿಡುವಿನ ಸಮಯದಲ್ಲಿ ಗಾಯನದೊಂದಿಗೆ ಗಿಟಾರ್ ವಾದನದ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಅಭ್ಯತ್ಮಂಗಲದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರದಂದು ಉಚಿತವಾಗಿ ಗಿಟಾರ್ ನುಡಿಸುವದನ್ನು ಕಲಿಸುತ್ತಿದ್ದಾರೆ. ಕಾರ್ಮಿಕ ಮಕ್ಕಳೇ ಹೆಚ್ಚಾಗಿರುವ ಶಾಲೆಯಲ್ಲಿ ಶಿಕ್ಷಣದೊಂದಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ವಿದ್ಯಾರ್ಥಿಗಳಿಗೆ ಗಿಟಾರ್ ಕಲಿಕೆ ವಿಶೇಷವಾಗಿದೆ. ವಿದ್ಯಾರ್ಥಿಗಳು ಗಿಟಾರ್ ಕಲಿಕೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ.
ಗಿಟಾರ್ ವಾದನದ ಬಗ್ಗೆ ಶಾಲಾ ಮುಖ್ಯ ಶಿಕ್ಷಕಿ ಡೈಸಿ ಮಾತನಾಡಿ, ಶಾಲೆಗೆ ಬನ್ನಿ ಶನಿವಾರ ಕಲಿಯಲು ನೀಡಿ ಸಹಕಾರ ಎಂಬ ಕಾರ್ಯಕ್ರಮಕ್ಕೆ ಸ್ಥಳಿಯ ಗಿಟಾರ್ ವಾದಕ ಅಖಿಲ್ ನಾಣಯ್ಯ. ವಿದ್ಯಾರ್ಥಿಗಳಿಗೆ ಗಿಟಾರ್ ಕಲಿಕೆಯ ಮೂಲಕ ಒತ್ತು ನೀಡಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಶಿಕ್ಷಕ ಅಶ್ರಪ್ ಮಾತನಾಡಿ, ಕಾರ್ಮಿಕರ ಮಕ್ಕಳೇ ಅಧಿಕವಾಗಿರುವ ಶಾಲೆಯಲ್ಲಿ ಗಿಟಾರ್ ಕಲಿಕೆ ಕಾರ್ಯಕ್ರಮ ವಿದ್ಯಾಥಿಗಳಿಗೆ ಪ್ರೋತ್ಸಾಹ ದಾಯಕವಾಗಿದ್ದು, ಇಂತಹ ಕಾರ್ಯ ಕ್ರಮಗಳಿಂದ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚುತ್ತದೆ ಎಂದರು. ಈ ಬಗ್ಗೆ ಅನಿಸಿಕೆ ಹಂಚಿ ಕೊಂಡಿರುವ ಅಖಿಲ್ ನಾಣಯ್ಯ, ಗಿಟಾರ್ ವಾದನದ ಮೂಲಕ ವಿದ್ಯಾರ್ಥಿಗಳಲ್ಲಿ ಸಂಗೀತದ ಮೇಲೆ ಆಸಕ್ತಿಯನ್ನು ಬೆಳೆಸಿಕೊಳ್ಳುವಂತೆ ಪ್ರೇರೆಪಿಸಲಾಗುವದೆಂದರು.