ಸೋಮವಾರಪೇಟೆ, ಅ. 27: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೂಲಕ ಹಿರಿಯ ನಾಗರಿಕರಿಗೆ ಹಲವಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಗುರುತಿನ ಚೀಟಿ ಪಡೆಯುವ ಮೂಲಕ ಸರ್ಕಾರಿ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸೋಮವಾರ ಪೇಟೆ ನ್ಯಾಯಾಲಯದ ನ್ಯಾಯಾಧೀಶ ಶ್ಯಾಂಪ್ರಕಾಶ್ ಕರೆ ನೀಡಿದರು. ಇಲ್ಲಿನ ಸ್ತ್ರೀ ಶಕ್ತಿ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರಗಳು ಹಿರಿಯ ನಾಗರಿಕರಿಗೆ ಹಲವಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಪಿಂಚಣಿ, ಬಸ್, ರೈಲು ಸೇರಿದಂತೆ ಇತರ ಸಾರಿಗೆ ಸೌಲಭ್ಯಗಳ ದರದಲ್ಲಿ ರಿಯಾಯಿತಿ, ವೈದ್ಯಕೀಯ ಸೌಲಭ್ಯ, ಮೀಸಲಾತಿಗಳೂ ಸೇರಿದಂತೆ ಇತರ ಅವಕಾಶಗಳನ್ನು ಕಲ್ಪಿಸಿದೆ ಎಂದರು. ಹಿರಿಯ ನಾಗರಿಕರು ಸಂಬಂಧಿಸಿದ ಇಲಾಖೆಯನ್ನು ಸಂಪರ್ಕಿಸಿ ತಮ್ಮ ಗುರುತಿನ ಚೀಟಿಯನ್ನು ಪಡೆಯಬೇಕು. ವಿದ್ಯಾರ್ಥಿಗಳು, ಸಾರ್ವಜನಿಕರು ಈ ಬಗ್ಗೆ ಹಿರಿಯ ನಾಗರಿಕರಲ್ಲಿ ಅರಿವು ಮೂಡಿಸಬೇಕು ಎಂದು ನ್ಯಾಯಾಧೀಶರು ಕರೆ ನೀಡಿದರು. ಪ್ರತಿಯೊಬ್ಬರೂ ಕೆಲಸಕಾರ್ಯದಲ್ಲಿ ತೊಡಗಬೇಕು ದಿನಕ್ಕೆ ಒಂದು ಗಂಟೆ ವ್ಯಾಯಾಮ ಮಾಡುವ ಮೂಲಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು ಎಂದು ಶ್ಯಾಂ ಪ್ರಕಾಶ್ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ವಹಿಸಿದ್ದರು.

ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಸದಸ್ಯೆ ತಂಗಮ್ಮ, ಬಾಲಭವನ ಸಮಿತಿ ಸದಸ್ಯೆ ಸುಮಾ ಸುದೀಪ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಶೀಲಾ ಅವರುಗಳು ಉಪಸ್ಥಿತರಿದ್ದರು.