*ಗೋಣಿಕೊಪ್ಪಲು, ಅ. 29: ಕಸ್ತೂರಿ ರಂಗನ್ ವರದಿ ಕೈ ಬಿಡಿ, ಅಂಗನವಾಡಿ ಕೇಂದ್ರಗಳಲ್ಲಿ ಆದಿವಾಸಿ ಮಹಿಳೆಯರಿಗೆ ಉದ್ಯೋಗ ಕೊಡಿ, 2006 ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಮೊದಲಾದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಭಾನುವಾರ ತಿತಿಮತಿಯಲ್ಲಿ ಜಿಲ್ಲಾ ಆದಿವಾಸಿ ಸಂಘಟನೆ ವತಿಯಿಂದ ಪ್ರತಿಭಟನಾ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮ ಜರುಗಿತು.ಜಿಲ್ಲಾ ಆದಿವಾಸಿ ಸಂಘಟನೆಯ ಸಂಚಾಲಕ ವೈ.ಕೆ. ಗಣೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಆದಿವಾಸಿಗಳು ತಿತಿಮತಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಿವಿಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.
ಬಳಿಕ ಸ್ಥಳೀಯ ಕಾವೇರಿ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರಾಜ್ಯ ಆದಿವಾಸಿ ಸಂಘಟನೆಯ ಅಧ್ಯಕ್ಷ ಗುರುಶಾಂತ್ ಪ್ರಜಾಪ್ರಭುತ್ವದ ಹಕ್ಕನ್ನು ಆದಿವಾಸಿಗಳಿಗೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಸಮಾಜದ ಅಡಿಗಲ್ಲು ಆದಿವಾಸಿಗಳು. ಈ ಜನಾಂಗವನ್ನು ಸರಕಾರಗಳು ಕಡೆಗಣಿಸುತ್ತಾ ಬಂದಿವೆ ಎಂದು ದೂರಿದರು.
ತಾಲೂಕು ಐಟಿಡಿಪಿ ಅಧಿಕಾರಿ ಚಂದ್ರಶೇಖರ್ ಮಾತನಾಡಿ, 10ನೇ ತರಗತಿ ಮತ್ತು ಪಿಯುಸಿ ವ್ಯಾಸಂಗ ಮಾಡಿದ ಪರಿಶಿಷ್ಟ ವರ್ಗದ ವಿದ್ಯಾರ್ಥಿ ಗಳಿಗೆ ಕಂಪ್ಯೂಟರ್, ವಾಹನ, ಹೊಲಿಗೆ ತರಬೇತಿ ಮೊದಲಾದವ ಗಳನ್ನು ಕಲಿಸಲಾಗುವದು. ಟ್ಯಾಕ್ಷಿ, ಆಟೋ ಮತ್ತಿತರ ವಾಹನಗಳನ್ನು ಒದಗಿಸಿ ಕೊಡಲಾಗುವದು. ಇದನ್ನು ಪಡೆದು ಕೊಂಡು ಮುಂದುವರಿ ಯಬೇಕು ಎಂದು ತಿಳಿಸಿದರು.
ಡಾ. ಜೆ. ಸೋಮಣ್ಣ ಮಾತನಾಡಿ ಗಿರಿಜನರ ಬದುಕಿಗೆ ಶಿಕ್ಷಣವೇ ಹೆದ್ದಾರಿ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದು ಹೇಳಿದರು.
ಹಿರಿಯರಾದ ಡಾ. ದುರ್ಗಾ ಪ್ರಸಾದ್ ಮಾತನಾಡಿ ಆರೋಗ್ಯವನ್ನು ಉತ್ತಮ ಪಡಿಸಿಕೊಂಡು ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು. ದಿವಾಕರ್ ಮಾತನಾಡಿದರು.