ಮಡಿಕೇರಿ, ಅ. 29: ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಬಡತನ ರೇಖೆ ಮೇಲ್ಪಟ್ಟು ಮಧ್ಯಮ ವರ್ಗಕ್ಕೆ (ಎಪಿಎಲ್) ನ್ಯಾಯಬೆಲೆ ಅಂಗಡಿಗಳ ಮುಖಾಂತರ ಪೂರೈಕೆಯಾಗುತ್ತಿರುವ ಅಕ್ಕಿಯಲ್ಲಿ ಕೊರತೆ ಎದುರಾಗಿದ್ದು, ಎರಡು ತಿಂಗಳಿನಿಂದ ಸರಬರಾಜು ಸ್ಥಗಿತಗೊಳಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ಗೊತ್ತಾಗಿದೆ.ಹಸಿವು ಮುಕ್ತ ಕರ್ನಾಟಕ ಘೋಷಣೆಯೊಂದಿಗೆ ಬಡತನ ರೇಖೆಯಡಿ ಈ ಹಿಂದೆ ರಾಜ್ಯ ಸರಕಾರವು ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ಕುಟುಂಬಕ್ಕೆ ಉಚಿತ ಅಕ್ಕಿಯೊಂದಿಗೆ ಒಂದು ಲೀ ಎಣ್ಣೆ, ಒಂದು ಕೆ.ಜಿ. ಸಕ್ಕರೆ, ಒಂದು ಕೆ.ಜಿ. ಉಪ್ಪು, ಪೌಷ್ಠಿಕ ಕಾಳುಗಳನ್ನು ನೀಡಲಾರಂಭಿಸಿತ್ತು.

ಕಳೆದ ಜೂನ್‍ನಿಂದ ಪ್ರತಿ ಕುಟುಂಬದ ಸದಸ್ಯರಿಗೆ ತಲಾ ಏಳು ಕೆ.ಜಿ. ಅಕ್ಕಿಯೊಂದಿಗೆ ಒಂದು ಕೆ.ಜಿ. ಕಾಳು ಪೂರೈಕೆ ನೀಡುವದರೊಂದಿಗೆ ಎಪಿಎಲ್ ಕಾರ್ಡುದಾರರಿಗೆ ನ್ಯಾಯಬೆಲೆಯನ್ನು ಪಡೆದು ಅಕ್ಕಿಯನ್ನು ಬೇಡಿಕೆಯಂತೆ ನೀಡುತ್ತಿತ್ತು. ಆದರೆ ಈಗ ದಾಸ್ತಾನು ಅನುಸಾರ ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಪಡಿತರವನ್ನು ಅಗತ್ಯಕ್ಕೆ ತಕ್ಕಂತೆ ಸರಬರಾಜು ಗೊಳಿಸಲಾಗುತ್ತಿದೆ ಎಂದು ಗೊತ್ತಾಗಿದೆ.

ಒಂದು ಅಂದಾಜಿನ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಎಪಿಎಲ್ ಕಾರ್ಡು ಮುಖಾಂತರ 2,97,013 ಕುಟುಂಬಗಳು ಮಧ್ಯಮ ವರ್ಗದವರಾಗಿದ್ದು, ಇದುವರೆಗೆ ಅಕ್ಕಿಯನ್ನು ಸರಕಾರ ನಿಗದಿಗೊಳಿಸಿರುವ ದರದಂತೆ ಪ್ರತಿ ಕೆ.ಜಿ.ಯೊಂದಕ್ಕೆ ರೂ. 15ರಂತೆ ಪಾವತಿಸಿ ನ್ಯಾಯಬೆಲೆ ಅಂಗಡಿಗಳ ಮುಖಾಂತರ ಕೊಂಡುಕೊಳ್ಳುತ್ತಿದ್ದರು.

ಆದರೆ ಕಳೆದ ಮೂರು ತಿಂಗಳಿನಿಂದ ರಾಜ್ಯದಲ್ಲಿ ಪಡಿತರ ಸಮಪರ್ಕವಾಗಿ ಪೂರೈಕೆಗೊಳ್ಳದೆ, ಬೇರೆ ಬೇರೆ ಜಿಲ್ಲೆಗಳಲ್ಲಿ ಆಯ ತಿಂಗಳು ಗ್ರಾಹಕರಿಗೆ ವಿತರಣೆಯಾಗದೆ ಬಾಕಿ ಉಳಿಯುತ್ತಿದ್ದ ಸಾಮಗ್ರಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾಗಿ ಖಾತರಿಯಾಗಿದೆ.

ಪ್ರಸಕ್ತ ರಾಜ್ಯದಲ್ಲಿ ಈ ರೀತಿ ಎಪಿಎಲ್ ಕಾರ್ಡುದಾರರಿಗೆ ಪೂರೈಸಲಾಗುತ್ತಿದ್ದ ಒಟ್ಟು ಅಕ್ಕಿ 28,45,750 ಕ್ವಿಂಟಾಲ್ ಬೇಡಿಕೆಯಲ್ಲಿ ಕೊರತೆ ಎದುರಿಸುವಂತಾಗಿ ಕೇವಲ 14,22,717 ಕ್ವಿಂಟಾಲ್ ಮಾತ್ರ ದಾಸ್ತಾನು ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿನಿಂದ ಗ್ರಾಹಕರಿಗೆ ಪಡಿತರ ವ್ಯವಸ್ಥೆಯಲ್ಲಿ ಅಕ್ಕಿಯನ್ನು ತಡೆಹಿಡಿದಿರುವದಾಗಿ ಮೂಲಗಳು ದೃಢಪಡಿಸಿವೆ.

ಪುಟ್ಟ ಜಿಲ್ಲೆ ಕೊಡಗಿನಲ್ಲಿ ಮಾಸಿಕ 1228 ಕ್ವಿಂಟಾಲ್ ಅಕ್ಕಿಯನ್ನು ಗ್ರಾಹಕರಿಗೆ ವಿತರಿಸಬೇಕಿದ್ದು, ಇದೀಗ ಕೇವಲ 38 ಕ್ವಿಂಟಾಲ್‍ನಷ್ಟು ದಾಸ್ತಾನು ಮಾತ್ರ ಲಭ್ಯವಿರುವದಾಗಿ ಸುಳಿವು ಲಭಿಸಿದೆ.

ಹೀಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತರು ಕಳೆದ ಸೆಪ್ಟೆಂಬರ್‍ನಲ್ಲಿ ಆದೇಶ ಹೊರಡಿಸಿ ಬಿಪಿಎಲ್ ಚೀಟಿದಾರರಿಗೆ ಪಡಿತರ ಪೂರೈಸಲು ಬಯೋಮೆಟ್ರಿಕ್ ಆಧರಿತ ತಾಂತ್ರಿಕ ತೊಡಕು ನಿವಾರಣೆಗಾಗಿ ಬೆರಳಚ್ಚು (ಹೆಬ್ಬೆಟ್ಟು ಮುದ್ರೆ) ಪಡೆಯದೆ ದಿನಸಿ ನೀಡಲು ನಿರ್ದೇಶಿಸಿದ್ದಾರೆ. ಇಲ್ಲಿ ಎಪಿಎಲ್ ಚೀಟಿದಾರರಿಗೆ ಅಕ್ಕಿ ಕೊರತೆಯಿಂದಾಗಿ ಯಾವದೇ ಆದೇಶ ನೀಡಿರುವದಿಲ್ಲ.

ಅಕ್ಟೋಬರ್ ಮಾಹೆಯಲ್ಲಿ ಪಡಿತರ ಪೂರೈಸುವ ನ್ಯಾಯ ಬೆಲೆ ಅಂಗಡಿಗಳಿಗೆ ಕೇವಲ ಅಕ್ಕಿ, ಬೇಳೆ ಸರಬರಾಜುಗೊಳಿಸಿದರೂ, ಆಯ ಜಿಲ್ಲೆಗಳ ಬೇಕು ಬೇಡಿಕೆಗಳ ಕುರಿತು ಯಾವದೇ ಸೂಚನೆಯನ್ನಾಗಲೀ ದಾಸ್ತಾನು ಸರಬರಾಜು ಬಗ್ಗೆಯಾಗಲೀ ಉಲ್ಲೇಖಿಸಿಲ್ಲ. ಹೀಗಾಗಿ ಅಧಿಕಾರಿಗಳು ಗೊಂದಲದಲ್ಲಿ ಸಿಲುಕುವದರೊಂದಿಗೆ ಜನತಾ ಬಜಾರ್‍ನಂತಹ ಸಹಕಾರ ಸಂಸ್ಥೆಗಳು ಇಲಾಖೆಯ ಆದೇಶಕ್ಕಾಗಿ ಪಡಿತರ ಪೂರೈಸದೇ ಇಂದಿನ ತನಕ ಕಾಯುವಂತಾಯಿತು.

‘ಶಕ್ತಿ’ ವರದಿಗೆ ಸ್ಪಂದನ : ಜನತಾ ಬಜಾರ್ ಮೂಲಕ ಬಿಪಿಎಲ್ ಕಾರ್ಡುದಾರರಿಗೆ ಅಕ್ಟೋಬರ್ ತಿಂಗಳ ಅಕ್ಕಿ ವಿತರಿಸಲಾಗದಿರುವ ಕುರಿತು ‘ಶಕ್ತಿ’ ಬೆಳಕು ಚೆಲ್ಲಿದ ಬೆನ್ನಲ್ಲೇ ಜಿಲ್ಲಾ ಆಹಾರ ಇಲಾಖೆ ಉಪನಿರ್ದೇಶಕರು ಮೌಖಿಕ ಆದೇಶದೊಂದಿಗೆ ಪಡಿತರ ಚೀಟಿದಾರರಿಗೆ ತೊಂದರೆಯಾಗದಂತೆ ಅಕ್ಕಿ ಪೂರೈಸಲು ಕ್ರಮ ಕೈಗೊಂಡಿದ್ದಾರೆÉ. ಅಲ್ಲದೆ ನವೆಂಬರ್ ಮಾಹೆಯಲ್ಲಿ ಸಮಸ್ಯೆ ಬಗೆಹರಿಯುವ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಇಲಾಖೆಯಿಂದ ಒಂದು ವೇಳೆ ಪಡಿತರ ಬಿಡುಗಡೆಯಾದರೆ ಎಪಿಎಲ್ ಕಾರ್ಡುದಾರರಿಗೂ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸರಕಾರದ ನೀತಿಯಿಂದಾಗಿ ಗ್ರಾಹಕರಿಂದ ಅನವಶ್ಯಕ ಟೀಕೆಯನ್ನು ನ್ಯಾಯಬೆಲೆ ಅಂಗಡಿಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ಕೇಳುವಂತಾಗಿದೆ ಎಂದು ಜನತಾ ಬಜಾರ್ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದಾರೆ.

ಆದಿವಾಸಿಗಳ ಆಕ್ರೋಶ

ಕೂಡಿಗೆ ಬಸವನಹಳ್ಳಿಯ ಆದಿವಾಸಿ ಕೇಂದ್ರದಲ್ಲಿರುವ ದಿಡ್ಡಳ್ಳಿ ಯಿಂದ ಬಂದ 152 ಕುಟುಂಬಗಳಿಗೆ ಅನುಕೂಲವಾಗುವಂತೆ ತಾತ್ಕಾಲಿಕ ಶೆಡ್ಡುಗಳು ನಿರ್ಮಾಣಗೊಂಡಿದ್ದರೂ ಸಮರ್ಪಕವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿರುವದಿಲ್ಲ. ಮೇಲ್ಮಟ್ಟದ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಮನಬಂದಂತೆ ಸ್ಥಳಕ್ಕೆ ಭೇಟಿ ನೀಡಿ ತೆರಳುವ ಪದ್ಧತಿಯಾಗಿದೆ. ಬಸವನಹಳ್ಳಿ ಕೇಂದ್ರಕ್ಕೆ ಪೌಷ್ಟಿಕ ಆಹಾರವನ್ನು ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ ಎಂದು ಆದಿವಾಸಿಗಳು ಆರೋಪಿಸಿದ್ದಾರೆ.

ಕಳೆದ ತಿಂಗಳು ಮಾತ್ರ ಆಹಾರ ವಸ್ತುಗಳನ್ನು ನೀಡಿದ್ದು, ಇದೀಗ ಪೌಷ್ಟಿಕ ಆಹಾರ ಮಾಸಿಕ ಪದ್ಧತಿಯನುಗುಣ ವಾಗಿ ನಿಯಮಾನುಸಾರ ನೀಡದೆ ಮನ ಬಂದಂತೆ ಅರ್ಧ ವಸ್ತುಗಳನ್ನು ನೀಡುತ್ತಿ ದ್ದಾರೆ ಎಂದು ಸ್ಥಳಕ್ಕೆ ತೆರಳಿದ ಸುದ್ದಿ ಗಾರರಿಗೆ ಆದಿವಾಸಿಗಳು ತಿಳಿಸಿದ್ದಾರೆ.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ

(ಮೊದಲ ಪುಟದಿಂದ) ಅಧಿಕಾರಿಯು ಬೇರೆಡೆಗೆ ವರ್ಗಾವಣೆ ಗೊಂಡಿರುವ ಹಿನ್ನೆಲೆಯಲ್ಲಿ ಆದಿವಾಸಿ ಗಳ ಕೇಂದ್ರಗಳಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸದೆ, ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಹಣ ಬಿಡುಗಡೆ ಯಲ್ಲಿ ಹಿಂದೇಟು ಹಾಕುತ್ತಿರುವದಾಗಿ ಬಸವನಹಳ್ಳಿ ಸಹಕಾರ ಸಂಘದ ನಿರ್ದೇಶಕ ಮೋಹನ್ ಸೇರಿದಂತೆ ಆದಿವಾಸಿ ಕೇಂದ್ರದ ನಿವಾಸಿಗಳು ಆರೋಪಿಸಿದ್ದಾರೆ.

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಅನ್ನ ಭಾಗ್ಯಕ್ಕೆ’ ಕೊಡಗರ ಹಳ್ಳಿ ಹಾಗೂ 7ನೇ ಹೊಸಕೋಟೆ ಗ್ರಾ.ಪಂ. ವ್ಯಾಪ್ತಿಯ ಫಲಾನುಭವಿಗಳಿಗೆ ಕತ್ತರಿ ಬಿದ್ದಿದೆ ಎಂದು ಕೊಡಗರ ಹಳ್ಳಿ ಗ್ರಾಮ ಪಂಚಾಯಿತಿ ಅದ್ಯಕ್ಷ ಹೆಚ್.ಇ. ಅಬ್ಬಾಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನ್ಯಾಯಬೆಲೆ ಅಂಗಡಿಗಳಿಗೆ ಫಲಾನುಭವಿಗಳು ತೆರಳಿ ಅಕ್ಕಿ, ಬೇಳೆ ಕೊಡಿ ಎಂದರೆ ಆಹಾರ ಧಾನ್ಯ ಬಂದಿದೆ. ಆದರೆ ಕೊಡಲು ಸಾಧ್ಯವಾಗುವದಿಲ್ಲ, ಬಯೋಮೆಟ್ರಿಕ್‍ಗೆ ಪಡಿತರ ಚೀಟಿದಾರರ ಹೆಸರು ದಾಖಲಾಗದೆ ಇರುವದರಿಂದ ಆಹಾರ ಸಾಮಗ್ರಿ ಕೊಡಲು ಬರುವದಿಲ್ಲ ಎಂದು ಪಡಿತರ ಆಹಾರ ಸಾಮಗ್ರಿ ವಿತರಣಾ ಸಿಬ್ಬಂದಿ ಉತ್ತರಿಸುತ್ತಿದ್ದು, ಪಡಿತರ ಚೀಟಿದಾರರು ಈ ತಿಂಗಳ ಅಕ್ಕಿ, ಬೇಳೆ ಲಭ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು ಗ್ರಾಮಸ್ಥರೊಂದಿಗೆ ಪಡಿತರ ಅಂಗಡಿ ಮುಂದೆ ಪ್ರತಿಭಟನೆ ನಡೆಸಲಾಗುವದು ಎಂದು ತಿಳಿಸಿದ್ದಾರೆ. ಈ ಬಗ್ಗೆ ಸೋಮವಾರಪೇಟೆ ತಾಲೂಕು ಪರಿವೀಕ್ಷಕ ಸದಾನಂದ ಅವರಲ್ಲಿ ಮಾಹಿತಿ ಬಯಸಿದಾಗ ತಾಂತ್ರಿಕ ದೋಷದಿಂದ ಈ ರೀತಿಯಾಗಿದೆ. ಪಡಿತರ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದಾರೆ.

ಅಧಿಕಾರಿ ವಿರುದ್ಧ ಆಕ್ರೋಶ

ಕುಶಾಲನಗರ : ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಬಿ.ಎಂ. ಪ್ರಕಾಶ್ ಸಮರ್ಪಕವಾಗಿ ಕೆಲಸ ನಿರ್ವಹಿಸದೆ ಆದಿವಾಸಿಗಳ ಬಗ್ಗೆ ನಿರ್ಲಕ್ಷ್ಯ ತಾಳುತ್ತಿದ್ದಾರೆ ಎಂದು ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಆರೋಪಿಸಿದ್ದಾರೆ. ಕಳೆದ ಕೆಲವು ಸಮಯದಿಂದ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಗ್ರಾಮಗಳಲ್ಲಿ ನೆಲೆಸಿರುವ ಪುನರ್ವಸತಿ ಕೇಂದ್ರದ ಜನರ ಬಗ್ಗೆ ಕನಿಷ್ಟ ಕಾಳಜಿ ವಹಿಸದೆ ಅಸಹಕಾರ ಧೋರಣೆ ತಾಳುವದರೊಂದಿಗೆ ನಿರಾಶ್ರಿತರಿಗೆ ಸಮರ್ಪಕ ಪಡಿತರ ಪೂರೈಸದೆ ಭಾರೀ ಸಮಸ್ಯೆಗಳು ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.

ಸರಕಾರ ಪ್ರಕಾಶ್ ಅವರನ್ನು ಹಾವೇರಿ ಜಿಲ್ಲೆಗೆ ವರ್ಗಾಯಿಸಿದ್ದು ತೆರವಾಗುವ ಹುದ್ದೆಗೆ ಹಾವೇರಿಯಿಂದ ಅಧಿಕಾರಿಯೊಬ್ಬರನ್ನು ವರ್ಗಾಯಿಸಿ ಆದೇಶ ಹೊರಡಿಸಿದ್ದರೂ ಕೇವಲ 1 ದಿನದಲ್ಲಿ ಆದೇಶವನ್ನು ತಡೆಹಿಡಿಯು ವಲ್ಲಿ ಈ ಅಧಿಕಾರಿ ಯಶಸ್ವಿಯಾಗಿದ್ದು, ಹಲವು ಸಂಶಯಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಯೋಜನಾ ಸಮನ್ವಯಾಧಿ ಕಾರಿ ಪ್ರಕಾಶ್ ಅವರ ಮೇಲೆ ತನಿಖೆ ನಡೆÀಸಿ ಕ್ರಮಕೈಗೊಳ್ಳಬೇಕೆಂದು ಲ್ಯಾಂಪ್ಸ್ ಸೊಸೈಟಿ ನಿರ್ದೇಶಕ ಬಿ.ಕೆ.ಮೋಹನ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಸಂದರ್ಭ ಪುನರ್ವಸತಿ ಕೇಂದ್ರÀದ ಪ್ರಮುಖರಾದ ಸ್ವಾಮಿಯಪ್ಪ, ಸುಬ್ರಮಣಿ, ಕೃಷ್ಣ, ರಾಜಮಣಿ ಮತ್ತಿತರರು ಇದ್ದರು.

- ಟಿ.ಜಿ. ಸತೀಶ್, ನಾಗರಾಜ ಶೆಟ್ಟಿ, ರಾಜು ರೈ, ಸಿಂಚು.