ಗೋಣಿಕೊಪ್ಪ, ಅ. 29: ಕೃಷಿಯಲ್ಲಿ ಸಮಗ್ರ ಬೆಳೆ ಹಾಗೂ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕೃಷಿಕರನ್ನು ಗುರುತಿಸಿ ಪ್ರತಿ ವರ್ಷ ಕೃಷಿ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ನೀಡುತ್ತಿರುವ ಜಿಲ್ಲಾ ಮಟ್ಟದ ಪ್ರಗತಿ ಪರ ಮಹಿಳೆ ಪ್ರಶಸ್ತಿಯನ್ನು ಬಲ್ಯಮುಂಡೂರು ಗ್ರಾ.ಪಂ ವ್ಯಾಪ್ತಿಯ ತೂಚಮಕೇರಿ ಗ್ರಾಮದ ಪಿ. ರೋಹಿಣಿ ಸುಬ್ಬಯ್ಯ ಅವರಿಗೆ ಶಿವಮೊಗ್ಗ ಕೃಷಿ ಮತ್ತು ತೊಟಗಾರಿಕೆ ವಿಶ್ವವಿದ್ಯಾಲಯ ದಲ್ಲಿ ನಡೆದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಮತ್ತು ನಗದು ಬಹುಮಾನ ವಿಶ್ವ ವಿದ್ಯಾನಿಲಯದ ವೈಸ್ ಚಾನ್ಸಲರ್ ನಾರಾಯಣ ಸ್ವಾಮಿ ನೀಡಿ ಗೌರವಿಸಿದರು. ಈ ವೇಳೆ ಮುಖ್ಯಸ್ಥರಾದ ನಾರಾಯಣಗೌಡ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಚೋಟು ಕಾವೇರಪ್ಪ ಮತ್ತು ವಿವಿಧ ಜಿಲ್ಲೆಗಳ ಕೃಷಿಕ ಸಮಾಜದ ಅಧ್ಯಕ್ಷರುಗಳು ಹಾಜರಿದ್ದರು.

ರೋಹಿಣಿ ನಿವೃತ್ತ ಸೈನಿಕ ಸುಬ್ಬಯ್ಯ 1997ರಿಂದಲೇ ಸಮಗ್ರ ಕೃಷಿಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ತಮ್ಮ ತೋಟದಲ್ಲಿ ಕಾಫಿ, ಕರಿಮೆಣಸು, ಪುನರ್ ಪುಳಿ, ನಿಂಬೆ, ಕಿತ್ತಳೆ, ದಾಲ್ಚೀನಿ, ಬಾಳೆ, ನೆಲ್ಲಿಕಾಯಿ, ಸಪೋಟ ಬೆಳೆಗಳೊಂದಿಗೆ 5 ಏಕರೆಯಲ್ಲಿ ಭತ್ತದ ಕೃಷಿಯೊಂದಿಗೆ ಮೀನು ಸಾಕಾಣೆ, ಹೈನುಗಾರಿಕೆ, ಕೋಳಿ ಸಾಕಾಣೆ, ಜೇನು ಸಹಿತ ಉತ್ತಮ ಗುಣಮಟ್ಟದ ವೈನ್ ತಯಾರಿಕೆಯಲ್ಲಿ ತೊಡಗಿಸಿ ಕೊಂಡಿದ್ದಾರೆ.

ಹೊಲಿಗೆ ತರಬೇತಿಯನ್ನು ಪಡೆದುಕೊಂಡಿರುವ ಇವರು ತಮ್ಮ ಮನೆಯಲ್ಲೆ ಹೊಲಿಗೆ ತರಬೇತಿಯನ್ನು ನೀಡುತ್ತಿದ್ದಾರೆ. ಧರ್ಮಸ್ಥಳ ಸಂಘದ ಕೋಶಾಧಿಕಾರಿಯಾಗಿ, ಜಿಲ್ಲಾ ಸ್ತೀ ಸಂಘದ ಒಕ್ಕೂಟದ ಸಹ ಕಾರ್ಯದರ್ಶಿಯಾಗಿ, ನಗರ ಸ್ತ್ರೀ ಶಕ್ತಿ ಒಕ್ಕೂಟದ ತಾಲೂಕು ಅಧ್ಯಕ್ಷರಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.