ಮಡಿಕೇರಿ, ಅ. 29: ರಾಜ್ಯ ಬಾಲಭವನ ಸೊಸೈಟಿ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಮಕ್ಕಳ ಕಲಾಉತ್ಸವ ಹಾಗೂ ಜಿಲ್ಲಾ ಮಟ್ಟದ ಕಲಾಶ್ರೀ ಆಯ್ಕೆ ಶಿಬಿರವು ತಾ.31 ರಂದು ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ನಡೆಯಲಿದೆ.

ಆಯ್ಕೆ ಶಿಬಿರದಲ್ಲಿ ಈಗಾಗಲೇ ತಾಲೂಕು ಮಟ್ಟದಿಂದ ಆಯ್ಕೆಯಾದ ಸೃಜನಾತ್ಮಕ ಕಲೆ, ಸೃಜನಾತ್ಮಕ ಬರವಣಿಗೆ, ಸೃಜನಾತ್ಮಕ ಪ್ರದರ್ಶನ ಕಲೆ, ವಿಜ್ಞಾನದಲ್ಲಿ ನೂತನ ಅವಿಷ್ಕಾರ ಈ 4 ಚಟುವಟಿಕೆಗಳಲ್ಲಿ ತಲಾ 2 ರಂತೆ ಒಟ್ಟು 8 ಮಕ್ಕಳನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಿಕೊಡಬೇಕಾಗಿದೆ. ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ ಒಟ್ಟು 24 ಮಕ್ಕಳಲ್ಲಿ 8 ಮಕ್ಕಳನ್ನು ಮಾತ್ರ ಆಯ್ಕೆ ಮಾಡಿ ರಾಜ್ಯ ಮಟ್ಟಕ್ಕೆ ಕಳುಹಿಸಿಕೊಡಬೇಕಾಗಿದೆ. ರಾಜ್ಯ ಮಟ್ಟದಲ್ಲಿ ನಡೆಯುವ ಕಲಾಶ್ರೀ ಉತ್ಸವದಲ್ಲಿ ಪ್ರತಿ ಜಿಲ್ಲೆಯಿಂದ ತಲಾ 8 ಮಕ್ಕಳಂತೆ ಭಾಗವಹಿಸಲಿದ್ದಾರೆ.

ಈ ಕಲಾಶ್ರೀ ಉತ್ಸವಕ್ಕೆ ಆಯ್ಕೆ ಮಾಡುವ ಮಗು ಜಿಲ್ಲಾ ಮಟ್ಟದ ಆಯ್ಕೆ ಶಿಬಿರಕ್ಕೆ ಭಾಗವಹಿಸುವ ಸಂದರ್ಭದಲ್ಲಿ ಪೋಷಕರಿಂದ ಹಾಗೂ ಓದುತ್ತಿರುವ ಶಾಲೆಗಳ ಮುಖ್ಯಸ್ಥರಿಂದ ರಾಜ್ಯ ಮಟ್ಟದಲ್ಲಿ ನಡೆಯುವ ಕನಿಷ್ಟ 5 ರಿಂದ 8 ದಿನಗಳ ಕಲಾಶ್ರೀ ಉತ್ಸವದಲ್ಲಿ ಭಾಗವಹಿಸಲು ಅನುಮತಿ ಪತ್ರ, 4 ಪಾಸ್‍ಪೋರ್ಟ್ ಸೈಸ್ ಭಾವಚಿತ್ರಗಳು, ಜನ್ಮದಿನಾಂಕದ ದೃಢೀಕರಣಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಇಲ್ಲವಾದಲ್ಲಿ ಸ್ಪರ್ಧೆಗಳಿಗೆ ಭಾಗವಹಿಸಲು ಅವಕಾಶವಿರುವದಿಲ್ಲ.