ಸೋಮವಾರಪೇಟೆ, ಅ. 29: ಇಲ್ಲಿನ ಬೇಳೂರು ಕ್ಲಬ್‍ನ ಆಶ್ರಯದಲ್ಲಿ ಬೇಳೂರು ಮೈದಾನದಲ್ಲಿ ರಾಜ್ಯಮಟ್ಟದ 111ನೇ ಓಪನ್ ಮತ್ತು ಹ್ಯಾಂಡಿಕ್ಯಾಪ್ ಗಾಲ್ಫ್ ಕ್ರೀಡಾಕೂಟ ನಡೆಯಿತು.

ಜಿಲ್ಲೆ ಮಾತ್ರವಲ್ಲದೇ ಬೆಂಗಳೂರು, ಚಿಕ್ಕಮಗಳೂರು, ಹಾಸನ, ಮೈಸೂರು ಸೇರಿದಂತೆ ದುಬೈ ನಿಂದಲೂ ಆಟ ಗಾರರು ಆಗಮಿಸಿದ್ದು, ಹಚ್ಚ ಹಸಿರಿನ ಮೈದಾನ ದಲ್ಲಿ ಗಾಲ್ಫ್ ಕ್ರೀಡಾ ಕೂಟ ಸಂಭ್ರಮ ದಿಂದ ನಡೆಯಿತು. ವಿವಿಧೆಡೆಯಿಂದ 41 ಮಂದಿ ಗಾಲ್ಫ್ ಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕ್ಲಬ್ ಅಧ್ಯಕ್ಷ ಆನಂದ್ ಬಸಪ್ಪ ಮಾತನಾಡಿ, 1904ರಲ್ಲಿ ಪ್ರಾರಂಭವಾದ ಬೇಳೂರು ಕ್ಲಬ್ 1906ರಲ್ಲಿ ಮೊದಲ ಕ್ರೀಡಾಕೂಟವನ್ನು ಆಯೋಜನೆ ಮಾಡಿತ್ತು. ಅಂದಿನಿಂದ ಈವರೆಗೆ ನಿರಂತರವಾಗಿ ಕ್ರೀಡಾಕೂಟವನ್ನು ನಡೆಸಿಕೊಂಡು ಬರುತ್ತಿದೆ. ಕ್ರೀಡಾಕೂಟದಲ್ಲಿ ದೇಶದ ಹಲವೆಡೆಗಳಲ್ಲಿರುವ ಕ್ಲಬ್ ಸದಸ್ಯರು ಸೇರಿದಂತೆ ವಿದೇಶಿ ಕ್ರೀಡಾಪಟುಗಳೂ ಸಹ ಪಾಲ್ಗೊಂಡಿದ್ದಾರೆ ಎಂದರು.

ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ದುಬೈನ ವಿನಿತಾ ಬಾಟಿಯಾ, ಆದಿತ್ಯ ದಾಸಪ್ಪ ಮಾತನಾಡಿ, ಉತ್ತಮ ಪರಿಸರದಲ್ಲಿ ಕ್ರೀಡಾಕೂಟವನ್ನು ಆಯೋಜಿಸಿದ್ದು, ಇಲ್ಲಿ 111 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಓಪನ್ ಗಾಲ್ಫ್ ಕ್ರೀಡಾಕೂಟ ದೇಶದ ಎರಡನೇ ಹಳೆಯ ಕ್ರೀಡಾಕೂಟವಾಗಿದೆ ಎಂದರು. ಕ್ರೀಡಾಕೂಟಕ್ಕೆ ಕೆ.ಪಿ. ರಂಜಿತ್ ಚಾಲನೆ ನೀಡಿದರು. ಈ ಸಂದರ್ಭ ಮಹೇಶ್ ಶಿವಾನಂದ, ಸಿ.ಎಂ. ಅಪ್ಪಣ್ಣ, ಅವಿನಾಶ್ ಆರತಿ, ಬಿ.ಜಿ. ಗುರುಮಲ್ಲಯ್ಯ ಮತ್ತು ಐ.ಕೆ. ಅನಿಲ್ ಹಾಗೂ ಕ್ಲಬ್‍ನ ಪದಾಧಿಕಾರಿಗಳು ಪಾಲ್ಗೊಂಡಿದ್ದರು.