ಮಡಿಕೇರಿ, ಅ.29: ಕರ್ನಾಟಕ ನೈಋತ್ಯ ಪದವೀಧರರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ಹೊಸದಾಗಿ ತಯಾರಿಸಬೇಕಿದ್ದು, ಹಾಲಿ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿರುವ ಎಲ್ಲಾ ವ್ಯಕ್ತಿಗಳು ಸಹ ನಿಗಧಿತ ನಮೂನೆಯಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ.

ಆಯಾಯ ಮತ ಕ್ಷೇತ್ರದೊಳಗೆ ವಾಸಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯು ಸಂಬಂಧಪಟ್ಟ ಸಹಾಯಕ ನೋಂದಣಾಧಿಕಾರಿಗಳಿಗೆ ಮತ್ತು ನಿಯೋಜಿತ ಅಧಿಕಾರಿಗಳಿಗೆ ನೈಋತ್ಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ನಮೂನೆ-18 ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಯಿಸಲು ನಮೂನೆ-19ರ ಅರ್ಜಿಗಳನ್ನು ಭರ್ತಿಮಾಡಿ ಸಲ್ಲಿಸಬಹುದಾಗಿದೆ.

ಕರ್ನಾಟಕ ನೈಋತ್ಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ನಮೂನೆ-18ರ ಅರ್ಜಿಯ ಎಲ್ಲಾ ಕಲಂಗಳನ್ನು ಭರ್ತಿ ಮಾಡಿರಬೇಕು ಮತ್ತು ಅರ್ಜಿಯೊಂದಿಗೆ ಪಾಸ್‍ಪೋರ್ಟ್ ಸೈಜ್‍ನ ಒಂದು ಫೋಟೊ ಮತ್ತು ವಿಶ್ವವಿದ್ಯಾಲಯ ಅಥವಾ ಸಂಬಂಧಪಟ್ಟ ಸಂಸ್ಥೆಯಿಂದ ನೀಡಲಾದ ಪದವಿ, ಡಿಪ್ಲೋಮಾ ಅಥವಾ ಪ್ರಮಾಣ ಪತ್ರ, ಕೋರ್ಸ್‍ಗಳ ಮೂಲ ಪ್ರತಿ ಅಥವಾ ನಕಲು ಪ್ರತಿಯ ದೃಢೀಕೃತ ಪ್ರತಿ.

ನಮೂನೆ ಪಡೆಯಲು ನವೆಂಬರ್ 7 ಕೊನೆ ದಿನವಾಗಿದೆ. ನಮೂನೆಯನ್ನು ನವೆಂಬರ್ 21 ರಿಂದ ಡಿಸೆಂಬರ್ 21 ರ ವರೆಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ತಹಶೀಲ್ದಾರರ ಕಚೇರಿ, ಉಪ ವಿಭಾಗಾಧಿಕಾರಿಯವರ ಕಚೇರಿ ಅಥವಾ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಮಾಹಿತಿ ಪಡೆಯಬಹುದಾಗಿದೆ.