ಮಡಿಕೇರಿ, ಅ. 29: ಇತಿಹಾಸ ಪ್ರಸಿದ್ಧ ಎಮ್ಮೆಮಾಡಿನ ಹಝ್ರತ್ ಸೂಫಿ ಶಹೀದ್ ವಲಿಯುಲ್ಲಾ ಹಾಗೂ ಹಸನ್ ಸಖಾಫಿ ಅಲ್ ಅಲರಮಿಯವರ ವಾರ್ಷಿಕ ಉರೂಸ್ ಸಮಾರಂಭ ಮುಂದಿನ ಸಾಲಿನ ಮಾರ್ಚ್ 2 ರಿಂದ 9 ರವರೆಗೆ ನಡೆಸಲು ದಿನ ನಿಗದಿಪಡಿಸಲಾಗಿದೆಯೆಂದು ಎಮ್ಮೆಮಾಡಿನ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಸಮಿತಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಮೊಹಮ್ಮದ್ ಮುಸ್ಲಿಯಾರ್ ಮಾತನಾಡಿ, ವರ್ಷಂಪ್ರತಿ ಆಚರಿಸಿಕೊಂಡು ಬರಲಾಗುತ್ತಿರುವ ಉರೂಸ್‍ಗೆ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದಲೂ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಎಮ್ಮೆಮಾಡು ಉರೂಸ್ ಸಂದರ್ಭ ಜಿಲ್ಲೆಯ ಇತರೆಡೆಗಳಲ್ಲಿನ ಜಮಾಅತ್‍ಗಳಿಂದ ಏಕಕಾಲಕ್ಕೆ ಉರೂಸ್ ನಿಗದಿಯಾಗಿ ತೊಂದರೆಯಾಗುವದು ಬೇಡವೆನ್ನುವ ಕಾರಣಕ್ಕೆ ಎಮ್ಮೆಮಾಡು ಉರೂಸ್ ದಿನಾಂಕವನ್ನು ಪ್ರಕಟಿಸುತ್ತಿರುವದಾಗಿ ಮಾಹಿತಿ ನೀಡಿದರು.
ಎಮ್ಮೆಮಾಡು ಉರೂಸ್ ಸಮಾರಂಭದಲ್ಲಿ ಸಾದಾತುಗಳು, ಉಲಮಾಗಳು, ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮೊಹಮ್ಮದ್ ಮುಸ್ಲಿಯಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಮಾಅತ್ ಅಧ್ಯಕ್ಷ ಉಸ್ಮಾನ್ ಹಾಜಿ, ಸದಸ್ಯರುಗಳಾದ ಶಾದಲಿ ಸಿ.ಎಂ., ಮಾಹಿನ್ ಸಿ.ಎಂ., ಹಂಸ ಪಿ.ಎಂ., ಮತ್ತು ಇಬ್ರಾಹಿಂ ಸಿ.ಎಸ್. ಉಪಸ್ಥಿತರಿದ್ದರು.