ಗೋಣಿಕೊಪ್ಪಲು/ಸಿದ್ದಾಪುರ, ಅ. 29: ತೋಟಗಳಲ್ಲಿ ಕಾಡಾನೆಗಳ ಚಲನ-ವಲನ ಆಧರಿಸಿ ಜನರನ್ನು ಕಾಡಾನೆಗಳಿಂದ ರಕ್ಷಿಸಲು ಅರಣ್ಯ ಇಲಾಖೆಯಿಂದ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಅಮ್ಮತ್ತಿಯ ಪುಲಿಯೇರಿ ಎಂಬಲ್ಲಿ ನಡೆಸಲಾ ಯಿತು. ಅಲ್ಲಿನ ಕಾಫಿ ತೋಟದಲ್ಲಿ ಸೆರೆಯಾದ ಆನೆಗೆ ಕ್ಯಾಮೆರಾ ಅಳವಡಿಸಿ ಹೊಸ ತಂತ್ರಜ್ಞಾನದ ಮೂಲಕ ಅನ್ವೇಷಣೆಗೆ ಮುಂದಾಗಿದೆ. ತಿತಿಮತಿ ಆರ್‍ಆರ್‍ಟಿ ತಂಡ ಕಳೆದೊಂದು ತಿಂಗಳಿನಿಂದ ಆನೆಯ ಶೋಧವನ್ನು ಅಮ್ಮತ್ತಿ, ಪಾಲಿಬೆಟ್ಟ, ಚೆನ್ನಂಗಿ, ಮಾಲ್ದಾರೆ ಭಾಗಗಳಲ್ಲಿ ನಡೆಸಲಾಯಿತು. ನಂತರ ಬಾಡಗ, ಬಾಣಂಗಾಲ, ಚವರಿಬೆಟ್ಟ, ಅಮ್ಮತ್ತಿ ಭಾಗಗಳ ತೋಟದಲ್ಲಿ ಕಾಣಸಿಗುತ್ತಿದ್ದ 31 ಆನೆಗಳ ಹಿಂಡನ್ನು ಪತ್ತೆ ಹಚ್ಚಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಇದರಂತೆ ಅರಣ್ಯ ಇಲಾಖೆ ಶನಿವಾರ ಯಶಸ್ವಿ ಕಾರ್ಯಾಚರಣೆ ನಡೆಸಿತು.

ಸುಮಾರು 35 ವರ್ಷದ ಆನೆಗೆ ಕ್ಯಾಮೆರಾ ಅಳವಡಿಸಲಾಯಿತು. ಹೆಚ್ಚಾಗಿ ಅಡ್ಡಾಡುತ್ತಿದ್ದ ಕಾಡಾನೆ ಹಿಂಡಿನ ನಾಯಕಿಗೆ ಕ್ಯಾಮೆರಾ ಅಳವಡಿಕೆ ಮೂಲಕ ಅದರ ಸಂಪೂರ್ಣ ಮಾಹಿತಿ ಕಂಪ್ಯೂಟರ್ ಪರದೆಯಲ್ಲಿ ಮೂಡುವಂತೆ ಮಾಡಲಾಗಿದೆ. ಈ ಕಾರ್ಯಾಚರಣೆ ಯಶಸ್ವಿ ಸಾಧಿಸಿದರೆ ಮುಂದಿನ ದಿನಗಳಲ್ಲಿ ಇಂತಹ ಯೋಜನೆಗಳು ವಿಸ್ತಾರಗೊಳಿಸುವ ಚಿಂತನೆ ಅರಣ್ಯ ಇಲಾಖೆಯದ್ದಾಗಿದೆ.

ಅಮ್ಮತ್ತಿ ಗ್ರಾಮದ ಪುಲಿಯೇರಿ ಎಂಬಲ್ಲಿ ಬಲ್ಲಚಂಡ ಕುಟುಂಬದ ಕಾಫಿ ತೋಟದಲ್ಲಿ ಶನಿವಾರ ಕಾರ್ಯಾಚರಣೆ ನಡೆಸಲಾಯಿತು. 2-3 ದಿನಗಳಿಂದ ಅದೇ ತೋಟದಲ್ಲಿ ಸುತ್ತಾಡುತ್ತಿದ್ದ ಆನೆಗಳನ್ನು ಪತ್ತೆ ಹಚ್ಚಿ ಬೆಳಗ್ಗೆಯಿಂದಲೇ ಕಾರ್ಯಾಚರಣೆಗೆ ಮುಂದಾಯಿತು. ಸಾಕಾನೆಗಳ ಸಹಾಯದಿಂದ ಆನೆಗೆ ಡಾಟ್ ನೀಡಿ ಕ್ಯಾಮೆರಾ ಅಳವಡಿಸಲಾಯಿತು. ರಾತ್ರಿ 7 ಗಂಟೆಗೆ ಹಿಂಡಿನ ನಾಯಕಿಗೆ ರೇಡಿಯೋ ಕಾಲರ್ ಅಳವಡಿಸುವ ಮೂಲಕ ಕಾರ್ಯಾಚರಣೆ ಯಶಸ್ವಿಗೊಂಡಿತು.

(ಮೊದಲ ಪುಟದಿಂದ)

ಮದ್ದು ನೀಡಿ ಕ್ಯಾಮೆರಾ ಅಳವಡಿಸುತ್ತಿದ್ದಾಗ ಅದೇ ಹಿಂಡಿನ ಮದ ಬಂದಿದ್ದ ಗಜವೊಂದು ಕಾರ್ಯಾಚರಣೆ ತಂಡದ ಮೇಲೆರಗಲು ಮುಂದಾಯಿತು. ಇಡೀ ಕಾರ್ಯಾಚರಣೆ ತಂಡ ಜೀವ ಉಳಿಸಿಕೊಳ್ಳಲು ತೋಟದಲ್ಲಿ ಓಡಿ ಗಾಳಿಗೆ ಗುಂಡು ಹೊಡೆದು ಜೀವ ಉಳಿಸಿಕೊಂಡರು. ನಂತರ ಕಾಡಾನೆಯನ್ನು ಓಡಿಸಿ ಕ್ಯಾಮೆರಾ ಅಳವಡಿಸಲಾಯಿತು.

ಮತ್ತಿಗೊಡು ಶಿಬಿರದ ಸಾಕಾನೆಗಳಾದ ಭೀಮ ಹಾಗೂ ಕೃಷ್ಣ ಮೂಲಕ ಕಾರ್ಯಾಚರಣೆ ನಡೆಸಲಾಯಿತು.

ಡಿಸಿಎಫ್ ಮರಿಯಾ ಕ್ರೈಸ್ತರಾಜ್, ಎಸಿಎಫ್ ಶ್ರೀಪತಿ, ತಿತಿಮತಿ ಆರ್‍ಎಫ್‍ಒ ಅಶೋಕ್, ಡಾ. ಮುಜುಬು ರೆಹಮನ್, ಅಮ್ಮತ್ತಿ ಆರ್‍ಆರ್‍ಟಿ ತಂಡದ ನಾಯಕ ದೇವಯ್ಯ, ತಿತಿಮತಿ ಆರ್‍ಆರ್‍ಟಿ ತಂಡದ ನಾಯಕ ಸಂಜು ಸಂತೋಷ್ ತಂಡ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಕ್ಯಾಮೆರಾದಲ್ಲಿ ಆನೆಯ ಓಡಾಟ ಗಮನಿಸಿ ಸಾರ್ವನಿಕರಿಗೆ ತಕ್ಷಣ ಮಾಹಿತಿ ನೀಡುವುದು ಈ ಯೋಜನೆ ಯಿಂದ ಸಹಕಾರಿ ಯಾಗಲಿದೆ. ಕಾಡಿಗೆ ತೆರಳದೆ ನಾಡಿನಲ್ಲಿಯೇ ಉಳಿಯುವ ಆನೆಗಳಿಗೆ ಇಂತಹ ಕ್ಯಾಮೆರಾ ಅಳವಡಿಸಲು ಮುಂದಾಗಿದೆ. ಆನೆಯ ಕತ್ತಿನ ಮೇಲ್ಭಾಗಕ್ಕೆ ಕ್ಯಾಮೆರಾ ಇಡಲಾಗಿದೆ. ಕಂಪ್ಯೂಟರ್ ಅಥವಾ ಮೊಬೈಲ್‍ನಲ್ಲಿ ಚಲನ ವಲನ ಅರಿತು ಗ್ರಾಮದಲ್ಲಿ ಸಾಧ್ಯವಾದಷ್ಟು ನಷ್ಟ, ಪ್ರಾಣಹಾನಿ ತಪ್ಪಿಸುವ ಚಿಂತನೆ ಇಲಾಖೆಯದ್ದಾಗಿದೆ.