ಕುಶಾಲನಗರ, ಅ. 29: ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿದ್ಯಾರ್ಥಿಗಳು ಕೂಡಿಗೆ ಶಕ್ತಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ವಯೋವೃದ್ಧರಿಗೆ ದಿನಬಳಕೆಯ ವಸ್ತುಗಳನ್ನು ಹಸ್ತಾಂತರಿಸಿದರು. ಕಾಲೇಜಿನ ವಿಭಾಗ ಮುಖ್ಯಸ್ಥರುಗಳು, ವಿದ್ಯಾರ್ಥಿಗಳಿಂದ ಅಕ್ಕಿ, ಬಟ್ಟೆ, ಹಾಗೂ ದಿನಬಳಕೆ ವಸ್ತುಗಳನ್ನು ಈ ಸಂದರ್ಭ ಆಶ್ರಮದಲ್ಲಿ ವಿತರಿಸಲಾಯಿತು.

ಘಟಕದ 50 ಕ್ಕೂ ಅಧಿಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬೆಳಗಿನಿಂದ ಸಂಜೆ ತನಕ ಆಶ್ರಮದಲ್ಲಿ ನೆಲೆಸಿರುವ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸುವದರೊಂದಿಗೆ ಅವರ ಕಷ್ಟಸುಖಗಳ ಬಗ್ಗೆ ಸಾಂತ್ವನ ಹೇಳಿದರು.

ಶಿಬಿರದ ಕಾರ್ಯಕ್ರಮಾಧಿಕಾರಿ ಪ್ರಸಾದ್ ಸಾಲಿಯಾನ್ ನೇತೃತ್ವದಲ್ಲಿ ಘಟಕದ ಸದಸ್ಯರು ಆವರಣವನ್ನು ಸ್ವಚ್ಛಗೊಳಿಸಿದರು. ಈ ಸಂದರ್ಭ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯಕ್ರಮಾಧಿಕಾರಿ ಪ್ರಸಾದ್ ಸಾಲಿಯಾನ್, ಇಂಜಿನಿಯ ರಿಂಗ್ ಕಾಲೇಜಿನ ಎನ್ನೆಸ್ಸೆಸ್ ಘಟಕದ ಮೂಲಕ ಹಲವು ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭ್ರಷ್ಟಾಚಾರದ ವಿರುದ್ಧ ಅರಿವು ಬಗ್ಗೆ ಪ್ರತಿಜ್ಞೆ ಸ್ವೀಕರಿಸಿದರು. ಕಾಲೇಜಿನ ಸಹಾಯಕ ಉಪನ್ಯಾಸಕ ಸತ್ಯನಾರಾಯಣ, ಶಕ್ತಿ ವೃದ್ಧಾಶ್ರಮದ ಮೇಲ್ವಿಚಾರಕ ಚಂದ್ರು, ಘಟಕದ ಪ್ರಮುಖರು ಇದ್ದರು.

ಪ್ರಗತಿ ಸ್ವಾಗತಿಸಿದರು, ಸಂಜನ್ ಮತ್ತು ಉಷಾ ನಿರೂಪಿಸಿದರು, ನವೀನ್ ವಂದಿಸಿದರು.