ಮಡಿಕೇರಿ, ಅ. 29: ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಸಂಶ ಯಾಸ್ಪದ ಸಾವಿಗೆ ಸಂಬಂಧಿಸಿದಂತೆ ಸಿ.ಬಿ.ಐ. ತನಿಖೆಯಿಂದ ನ್ಯಾಯ ಸಿಗುವ ವಿಶ್ವಾಸವಿದ್ದು, ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವದಾಗಿ ಮೃತ ಡಿವೈಎಸ್ಪಿ ಗಣಪತಿ ತಂದೆ ಎಂ.ಕೆ. ಕುಶಾಲಪ್ಪ ಪ್ರತಿಕ್ರಿಯಿಸಿದ್ದಾರೆ. ತಮ್ಮನ್ನು ಭೇಟಿಯಾದ ಮಾಧ್ಯಮ ದೊಂದಿಗೆ ಆಶಾ ಭಾವನೆ ವ್ಯಕ್ತಪಡಿಸಿದ ಕುಶಾಲಪ್ಪ ಅವರು, ಕಾನೂನಿನ ಹೋರಾಟದಿಂದ ನ್ಯಾಯ ಲಭಿಸುವ ನಂಬಿಕೆ ವ್ಯಕ್ತಪಡಿಸಿದರು. ಈಗಾಗಲೇ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಸಿಬಿಐ ತನಿಖೆ ನಡೆಯುತ್ತಿದ್ದು, ತಮ್ಮ ಮಗ ಸಾಯುವ ಮುನ್ನ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯನ್ನು ವಿಚಾರಣೆ ಸಂದರ್ಭ ಸಿಬಿಐ ಗಮನಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಕಾನೂನಿಗಿಂತ ಯಾರೂ ದೊಡ್ಡವರಲ್ಲವೆಂದು ನುಡಿದ ಕುಶಾಲಪ್ಪ, ತಮ್ಮ ಮಗ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಪರಿಣಾಮ ಇಲ್ಲ ಸಲ್ಲದ ಕಿರುಕುಳ ಎದುರಿಸಬೇಕಾಯಿತು ಎಂದು ನೆನಪಿಸಿದರು. ಗಣಪತಿ ಸಹೋದರ ಎಂ.ಕೆ. ಮಾಚಯ್ಯ ಪ್ರತಿಕ್ರಿಯಿಸಿ, ಸಿಬಿಐ ತಮ್ಮನ್ನು ಸಂಪರ್ಕಿಸಿಲ್ಲವೆಂದು ನುಡಿದರಲ್ಲದೆ, ತನಿಖೆಗೆ ಮಾಹಿತಿ ಬಯಸಿದರೆ ಎಲ್ಲಾ ರೀತಿ ಸಹಕಾರ ನೀಡುವದಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸರ್ವೋಚ್ಛ ನ್ಯಾಯಾಲಯ ಹಾಗೂ ಸಿಬಿಐನಿಂದ ತಮ್ಮ ಅಣ್ಣನ ಸಾವಿನ ಕಾರಣ ತಿಳಿಯಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ.

306 ವಿಧಿ ಹೇಳುವದೇನು?

ಪೊಲೀಸ್ ಕಾಯ್ದೆ ಪ್ರಕಾರ ಪ್ರಕರಣ 306 ವಿಧಿ ಹೇಳುವಂತೆ ಪ್ರಥಮ ವರ್ತಮಾನ ವರದಿ ಯಲ್ಲಿಯೇ ಮಾನಸಿಕ ಕಿರುಕುಳದಿಂದ ಮತ್ತು ಬೇರೆಯವರ ಹಿಂಸೆಯಿಂದ ಡಿವೈಎಸ್ಪಿ ಎಂ.ಕೆ. ಗಣಪತಿ ಸಂಶಯಾಸ್ಪದ ರೀತಿ ಸಾವನ್ನಪ್ಪಿ ರುವದು ಖಾತರಿಯಾಗಲಿದೆ. ಮೃತರ ಸಾವಿಗೆ ಸಂಬಂಧಿಸಿದ ಸಾವಿನ ಪ್ರಕರಣ ಭಾರತೀಯ ಪೊಲೀಸ್ ಕಾಯ್ದೆಯ ವಿಧಿ 306ರ ಅಡಿ ದಾಖಲಾಗಿರುವ ಮೊಕದ್ದಮೆ ಎದುರಿಸುವ ಆರೋಪಿಗಳನ್ನು ಜಾಮೀನು ರಹಿತ ಬಂಧನಕ್ಕೆ ಒಳಪಡಿಸಲು ಅವಕಾಶವಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇಲ್ಲಿ ಸೂಕ್ತ ಸಾಕ್ಷ್ಯ ಅಗತ್ಯವಷ್ಟೆ. ಹೀಗಾಗಿ ಸಿಬಿಐ ತನಿಖೆ ಕೈಗೊಂಡಿರುವ ಬೆನ್ನಲ್ಲೇ ಮೃತ ಡಿವೈಎಸ್ಪಿ ಎಂ.ಕೆ. ಗಣಪತಿ ಪುತ್ರ ನಿಹಾಲ್ ಹಾಗೂ ಪೋಷಕರು ಸಲ್ಲಿಸಿರುವ ಪುಕಾರಿನ ಅಡಿಯಲ್ಲಿ ಸಿಬಿಐ ಅಗತ್ಯ ಬಿದ್ದರೆ ಸಚಿವ ಕೆ.ಜೆ. ಜಾರ್ಜ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎ.ಎನ್. ಪ್ರಸಾದ್ ಇವರುಗಳನ್ನು ಬಂಧಿಸಲು ಅವಕಾಶವಿದೆ. ಬಹುಶಃ ಜಾರ್ಜ್ ಸಚಿವ ಸ್ಥಾನದಲ್ಲಿ ಮುಂದುವರಿದಿದ್ದರೆ ಆ ವೇಳೆ ಸರಕಾರ ಅಥವಾ ರಾಜ್ಯ ಪಾಲರ ಒಪ್ಪಿಗೆಯು ಬೇಕಾಗಲಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ. ಈ ಕುತೂಹಲಕಾರಿ ಸನ್ನಿವೇಶ ಯಾವ ಸ್ವರೂಪ ತಳೆಯಲಿದೆ ಎಂದು ಕಾದುನೋಡಬೇಕಿದೆ.