ಮಡಿಕೇರಿ, ಅ. 29: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ನೆಹರು ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ ಹಾಗೂ ಗ್ರಾಮ ಪಂಚಾಯಿತಿ, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಾರ್ನರ್ ಫ್ರೆಂಡ್ಸ್ ಕಡಗದಾಳು ಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಕಡಗದಾಳು ಬೊಟ್ಲಪ್ಪ ಯುವ ಸಂಘ ಇದರ ಬೆಳ್ಳಿ ಮಹೋತ್ಸವದ ಅಂಗವಾಗಿ ಸ್ವಚ್ಛತಾ ಆಂದೋಲನ, ಗುರುಸ್ಮರಣೆ ಮತ್ತು ಕಾನೂನು ಮಾಹಿತಿ ಕಾರ್ಯಕ್ರಮ ಕಡಗದಾಳು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆಯಿತು.

ಕಡಗದಾಳು ಗ್ರಾ.ಪಂ. ಉಪಾಧ್ಯಕ್ಷರಾದ ಎಂ.ಪಿ. ತಿಮ್ಮಯ್ಯ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಶಿಕ್ಷಕ, ರೈತ, ಯೋಧ ಈ ಮೂರು ಅಂಗಗಳು ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಅಂಗಗಳು. ಒಬ್ಬ ಶಿಕ್ಷಕ ದೇಶಕ್ಕೆ ಸತ್ಪ್ರಜೆಯನ್ನು ನೀಡಬಲ್ಲರು. ರೈತರು ಅನ್ನದಾತನಾಗಿ ಸೇವೆ ಸಲ್ಲಿಸಿದರೆ ಒಬ್ಬ ಯೋಧ ನಾವೆಲ್ಲರೂ ಸಂತೋಷ ದಿಂದ ಇರಲು ಕಾರಣ ಕರ್ತರಾ ಗಿರುತ್ತಾರೆ. ಶಿಕ್ಷಕರ ಮಾರ್ಗದರ್ಶನ ದಿಂದ ನಾವೆಲ್ಲರೂ ಇಂದು ಈ ಸ್ಥಾನದಲ್ಲಿ ನಿಲ್ಲಲು ಸಾಧ್ಯ ಎಂದರು.

ಅತಿಥಿಯಾಗಿದ್ದ ಮುಖ್ಯೋಪಾ ಧ್ಯಾಯರಾದ ಗಂಗಮ್ಮ, ಟಿ.ಆರ್. ವಾಸುದೇವ ಅವರು ಮಾತನಾಡಿದರು.

ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕರಾದ ಎಂ.ಬಿ. ಈರಪ್ಪ, ಹೆಚ್.ಆರ್. ಮುತ್ತಪ್ಪ, ಬಿ.ಜಿ. ವಸಂತ ಕುಮಾರಿ, ಲೀಲಾವತಿ ಶೆಡ್ತಿ, ಗೌರಿ, ಜೂಲಿಯನ್ ರೊಜಾರಿಯೊ, ಪದ್ಮವೇಣಿ ಮತ್ತು ಅಂಗನವಾಡಿ ವಿಭಾಗದಿಂದ ಉಮ್ಮಕ್ಕ, ವೆಂಕಮ್ಮ, ಕೆ. ಕಮಲ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಬಿ.ಎಸ್. ಜಯಪ್ಪ ಅವರು ‘ಭ್ರಷ್ಟಾಚಾರ ನಿರ್ಮೂಲನಾ ಪ್ರತಿಜ್ಞಾ ವಿಧಿ ಬೋಧಿಸಿದರು. ಮಧ್ಯಸ್ಥಿಕೆ, ಲೋಕ ಅದಲಾತ್‍ನ ಬಗ್ಗೆ ಮಾಹಿತಿ ನೀಡಿ ಕರಪತ್ರ ಹಂಚಲಾಯಿತು. ಶಾಲೆಯ ಆವರಣ ಮತ್ತು ಮುಖ್ಯ ಬೀದಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸ ಲಾಗಿತ್ತು. ವಿದ್ಯಾರ್ಥಿನೀಯರು ಪ್ರಾರ್ಥಿಸಿದರು. ಭಾರತಿ ಸ್ವಾಗತಿಸಿದರು. ಬಿ.ಎಸ್. ಜಯಪ್ಪ ನಿರೂಪಿಸಿ, ಹೆಚ್.ಎಂ. ಲಕ್ಷ್ಮಣ ವಂದಿಸಿದರು.