ಕುಶಾಲನಗರ, ಅ. 29: ಮೈಸೂರಿನಲ್ಲಿ ಇಂದು ನಡೆಯಲಿದ್ದ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಹಿಂದೂ ಸಂಘಟನೆಗಳ 80ಕ್ಕೂ ಅಧಿಕ ಕಾರ್ಯಕರ್ತರನ್ನು ಬಂಧಿಸಿದ ಘಟನೆ ಭಾನುವಾರ ಕುಶಾಲನಗರದಲ್ಲಿ ನಡೆಯಿತು. ಭಾನುವಾರ ಬೆಳಿಗ್ಗೆ ಐಬಿ ರಸ್ತೆಯಲ್ಲಿ ಮೆರವಣಿಗೆ ಮೂಲಕ ಬಂದ ಹಿಂದೂ ಸಂಘಟನೆಗಳ ಸದಸ್ಯರು ಮೈಸೂರು ಕಡೆಗೆ ತೆರಳಲು ಸಿದ್ಧರಾಗುತ್ತಿದ್ದಂತೆಯೇ ಎಲ್ಲರನ್ನೂ ಬಂಧಿಸಲಾಯಿತು. ಈ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಬಂಧಿತರನ್ನೆಲ್ಲಾ ಗ್ರಾಮಾಂತರ ಠಾಣೆಗೆ ಕರೆದೊಯ್ದ ಪೊಲೀಸರು ಸುಮಾರು 3 ಗಂಟೆಯ ನಂತರ ಬಿಡುಗಡೆ ಮಾಡಿದರು.
ಮಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಮೈಸೂರಿಗೆ ತೆರಳಲು ಹಿಂದೂ ಸಂಘಟನೆಗಳ ಕಾರ್ಯಕರ್ತರು ಶನಿವಾರ ರಾತ್ರಿಯ ವೇಳೆಯೇ ಕುಶಾಲನಗರಕ್ಕೆ ಆಗಮಿಸಿದ್ದರು. ಏಕಾಏಕಿ ಸೆಕ್ಷನ್ 144 ಜಾರಿಗೊಳಿಸಿದ ಪೊಲೀಸರು ಕಾರ್ಯಕರ್ತರ ಪೈಕಿ ಹೆಚ್ಚಿನವರನ್ನು ರಾತ್ರೋರಾತ್ರಿ ಬಲವಂತವಾಗಿ ವಾಪಸ್ ಕಳುಹಿಸಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಹಿಂದೂ ಸಂಘಟನೆಗಳ ಮುಖಂಡರಾದ ಉಲ್ಲಾಸ್, ಮಂಜುನಾಥ್, ಅಜಿತ್, ಸುಭಾಶ್, ಮಧು, ಎಂ.ಡಿ. ಕೃಷ್ಣಪ್ಪ, ಭರತ್ ಮಾಚಯ್ಯ, ನಾಣಿ, ರಾಬಿನ್ ದೇವಯ್ಯ ಸೇರಿದಂತೆ 80 ಮಂದಿ ಪೊಲೀಸರಿಂದ ಬಂಧಿತರಾಗಿ ಬಿಡುಗಡೆಗೊಂಡರು.
ಮೈಸೂರು ಹೆಚ್ಚುವರಿ ಎಸ್‍ಪಿ ರುದ್ರಮುನಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ವೃತ್ತ ನಿರೀಕ್ಷಕ ಕ್ಯಾತೇಗೌಡ, ನಗರ ಠಾಣಾಧಿಕಾರಿ ಜಗದೀಶ್, ಗ್ರಾಮಾಂತರ ಠಾಣಾಧಿಕಾರಿ ಮಹೇಶ್ ಸೇರಿದಂತೆ ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ ಪೊಲೀಸರು ಇದ್ದರು. ಜಿಲ್ಲೆಯ ಗಡಿಭಾಗ ಕೊಪ್ಪ ಗೇಟ್‍ನಲ್ಲೂ ಭಾರೀ ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿದ್ದರು.