ಗೋಣಿಕೊಪ್ಪಲು, ಅ. 30: ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಹಲವು ರಾಜಕಾರಿಣಿಗಳ ಹಗರಣಗಳ ಪುನರಾವರ್ತನೆ ಹೆಚ್ಚಾಗುತ್ತಿರುವದರಿಂದ ರೈತ ಹತಾಶನಾಗಿದ್ದಾನೆ ಎಂದು ರೈತ ಮುಖಂಡ ನಂಜುಂಡೇಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೊಡಗು ರೈತ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಅನ್ನ ನೀಡುವ ರೈತರಿಗೆ ವಂಚನೆಯಾಗದಂತೆ ನೋಡಿಕೊಳ್ಳಬೇಕಾಗಿರುವದು ರಾಜಕಾರಣಿಗಳ ಮೂಲ ಉದ್ದೇಶವಾಗಬೇಕು ಎಂದರು.
ರೈತ ಮುಖಂಡ ಮೈಸೂರಿನ ಅಶ್ವಥನಾರಾಯಣ ಅರಸ್ ಮಾತನಾಡಿ, ಪ್ರಸ್ತುತ ರಾಜಕೀಯ ಪರಿಸ್ಥಿತಿ ರೈತರ ದಾರಿ ತಪ್ಪಿಸುತ್ತಿದೆ. ದೇಶಕ್ಕೆ ಅನ್ನ ಕೊಡುವ ರೈತ ಅರಮನೆಯಲ್ಲಿ ಜೀವನ ನಡೆಸಬೇಕಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಬಡತನದಿಂದ ಸಾಲ ಮಾಡಿ ವಿಷ ಕುಡಿದು ಸಾಯುವ ಪರಿಸ್ಥಿತಿ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮಂಗಳೂರು ಜಿಲ್ಲಾಧ್ಯಕ್ಷ ರವಿಕಿರಣ್ ಮಾತನಾಡಿ, ಸಾಲ ಮಾಡಿದ ರೈತರ ಆಸ್ತಿ ಜಪ್ತಿಯಾಗುವದನ್ನು ತಡೆಯುವಲ್ಲಿ ರಾಜ್ಯ ರೈತ ಸಂಘವು ಯಶಸ್ವಿಯಾಗುತ್ತಿದೆ ಎಂದರು.
ಈ ಸಂಧರ್ಭ ನೂತನವಾಗಿ ಸೇರ್ಪಡೆಗೊಂಡ ಸಂಘದ ಸದಸ್ಯರಿಗೆ ಹಸಿರು ಶಾಲು ಹೊದಿಸಿ ಪ್ರಮಾಣ ವಚನ ಬೋಧಿಸುವ ಮೂಲಕ ಸ್ವಾಗತಿಸಲಾಯಿತು.
ಕೃಷಿಯಲ್ಲಿ ಸಾಧನೆ ಮಾಡಿದ ಸಾಧಕರುಗಳಾದ ನಲ್ಲೂರು ಗ್ರಾಮದ ಮಾದರಿ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ, ಅರೆಕಾಡು ಗ್ರಾಮದ ಕೆ.ಎ. ತಿಮ್ಮಯ್ಯ, ಮೈತಾಡಿ ಗ್ರಾಮದ ಹಂಸ, ಗರ್ವಾಲೆ ಗ್ರಾಮದ ನಾಪಂಡ ಪೂಣಚ್ಚ ಹಾಗೂ ರೈತ ಮಹಿಳೆ ಪಟ್ರಂಗಡ ಗಂಗಮ್ಮ ಅವರುಗಳನ್ನು ಸನ್ಮಾನಿಸಲಾಯಿತು.
ವಾರ್ಷಿಕ ವರದಿಯನ್ನು ಪ್ರ. ಕಾರ್ಯದರ್ಶಿ ಸುಜಯ್ ಬೋಪಯ್ಯ ವಾಚಿಸಿದರು. ಚಿಮ್ಮಂಗಡ ಗಣೇಶ್ ಸ್ವಾಗತಿಸಿ. ಚೆಟ್ರುಮಾಡ ಶಂಕರು ಚಂಗಪ್ಪ ಪ್ರಾರ್ಥಿಸಿದರು.
ಜಿಲ್ಲಾಧ್ಯಕ್ಷ ಕಡೇಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಖಜಾಂಚಿ ಚೇಂದಂಡ ಸಬಿತಾ, ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ಕುಮಾರಪ್ಪ, ರೈತ ಮುಖಂಡರುಗಳಾದ ಸೋಮಪ್ಪ, ಕಳ್ಳಿಚಂಡ ಧನು, ಚಿಮ್ಮಂಗಡ ಪೂವಣ್ಣ, ಅಶೋಕ್ ನಾರಾಯಣ್ ಉಪಸ್ಥಿತರಿದ್ದರು.