ಸೋಮವಾರಪೇಟೆ, ಅ. 30: ಜಿಲ್ಲೆಯಲ್ಲಿರುವ ನಿರ್ಗತಿಕರಿಗೆ ನಿವೇಶನ ನೀಡುವಲ್ಲಿ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ ಎಐಟಿಯುಸಿ, ನಿವೇಶನಕ್ಕಾಗಿ ಆಗ್ರಹಿಸಿ ಉಗ್ರ ಹೋರಾಟ ಹಮ್ಮಿಕೊಳ್ಳ ಲಾಗುವದು ಎಂದು ಎಚ್ಚರಿಸಿದೆ.
ಇಲ್ಲಿನ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ, ಕಳೆದ 15 ವರ್ಷಗಳಿಂದ ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಎಐಟಿಯುಸಿ ವತಿಯಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಈವರೆಗೆ ಸಮಸ್ಯೆ ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆಯೇ ಪೈಸಾರಿ ಜಾಗವನ್ನು 5 ಏಕರೆಗೂ ಹೆಚ್ಚು ಒತ್ತುವರಿ ಮಾಡಿಕೊಂಡಿರುವವರಿಂದ ಹಿಂದಕ್ಕೆ ಪಡೆದು ನಿವೇಶನ ರಹಿತರಿಗೆ ನೀಡುವಂತೆ ಆದೇಶ ನೀಡಿದ್ದರು. ಇದರೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಏಕರೆ ಭೂಮಿಯನ್ನು ಖರೀದಿಸಿ ಅದರಲ್ಲಿ ನಿವೇಶನವನ್ನು ಮಾಡಿ ಹಂಚುವಂತೆ ಸೂಚಿಸಿದ್ದರು. ಆದರೆ, ಜಿಲ್ಲಾಧಿಕಾರಿ ಗಳು ಹಾಗೂ ತಹಶೀಲ್ದಾರ್ ಸೇರಿದಂತೆ ಯಾವದೇ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಮುಂದಿನ 15 ದಿನಗಳ ಒಳಗೆ ಸಮಸ್ಯೆ ಬಗೆಹರಿಸ ದಿದ್ದಲ್ಲಿ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿರುವ ಪೈಸಾರಿ ಕೃಷಿ ಭೂಮಿ ಉಳ್ಳವರ ಪಾಲಾಗಿದೆ. ಕುಂಬೂರು ಗ್ರಾಮದಲ್ಲಿ ನವಗ್ರಾಮಕ್ಕೆ 30 ಏಕರೆ ಭೂಮಿಯನ್ನು ಜಿಲ್ಲಾಧಿಕಾರಿ ಹೆಸರಿನಲ್ಲಿ ಮೀಸಲಿರಿಸಲಾಗಿತ್ತು. ಆದರೆ, ಇಂದು ಮೀಸಲು ಜಾಗ ಕಾಣೆ ಯಾಗಿದ್ದು, ಒತ್ತುವರಿ ಮಾಡಲಾಗಿದೆ. ಕುಂಬೂರು ಬಳಿ ವಿಜಯ್ ಮಲ್ಯಾಗೆ ಸೇರಿದ ಕಾಫಿ ತೋಟದಲ್ಲಿ 75 ಏಕರೆ ಪೈಸಾರಿ ಜಾಗವಿದ್ದು, ಅದನ್ನು ಬೇರೊಬ್ಬರಿಗೆ ಕಂದಾಯ ಇಲಾಖಾಧಿಕಾರಿಗಳ ಸಹಕಾರದಿಂದ ಪರಭಾರೆ ಮಾಡಲಾ ಗಿದೆ. ಮಾದಾಪುರ ಗ್ರಾಮ ಪಂಚಾಯಿತಿ ಯಲ್ಲಿ ಈವರೆಗೆ 400 ನಿವೇಶನ ರಹಿತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಕೂಡಲೇ ಪೈಸಾರಿ ಒತ್ತುವರಿ ತೆರವುಗೊಳಿಸಿ ಅದನ್ನು ನಿವೇಶನ ರಹಿತರಿಗೆ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲೆಗೆ ಅಸ್ಸಾಂನಿಂದ ಕಾರ್ಮಿಕರು ಬಂದಿದ್ದು, ಹಲವು ಕಾಫಿ ತೋಟಗಳಲ್ಲಿ ನೆಲೆ ನಿಂತಿದ್ದಾರೆ. ಇವರಿಗೆ ಯಾವದೇ ದಾಖಲಾತಿಗಳಿಲ್ಲ. ಇವರಿಂದ ಸ್ಥಳೀಯ ಕಾರ್ಮಿಕರಿಗೆ ಕೆಲಸವಿಲ್ಲ ದಂತಾಗಿದೆ. ಅಲ್ಲದೆ, ಇವರಿಗೆ ಕೆಲವು ಅಧಿಕಾರಿಗಳು ಹಾಗೂ ಏಜೆಂಟರ ಮೂಲಕ ಆಧಾರ್ ಕಾರ್ಡ್ ತಕ್ಷಣ ಸಿಗುತ್ತಿದೆ. ಸ್ಥಳೀಯ ಕಾರ್ಮಿಕರು ನೋಂದಣಿಯಾಗದೆ ಪರಿತಪಿಸುತ್ತಿ ದ್ದಾರೆ. ಇದನ್ನು ಕೂಡಲೇ ಸಿಓಡಿ ತನಿಖೆಗೊಳಪಡಿಸಿ ತಪ್ಪಿತಸ್ಥರನ್ನು ಜೈಲಿಗಟ್ಟಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಸಂಘಟನೆಯ ಉಪಾಧ್ಯಕ್ಷ ಎನ್.ಮಣಿ, ತಾಲೂಕು ಘಟಕದ ಖಜಾಂಚಿ ಪಿ.ಟಿ. ಸುಂದರ, ಸೋಮವಾರಪೇಟೆ ಹೋಬಳಿ ಘಟಕದ ಅಧ್ಯಕ್ಷ ಗಣೇಶ್, ಸುಂಟಿಕೊಪ್ಪ ಹೋಬಳಿ ಘಟಕದ ಅಧ್ಯಕ್ಷ ಎ. ಸುರೇಶ್ ಹಾಗೂ ಸಲಹೆಗಾರ ಶೇಷಪ್ಪ ಉಪಸ್ಥಿತರಿದ್ದರು.