ಕುಶಾಲನಗರ, ಅ. 30: ಪತ್ರಿಕೆ ಮತ್ತು ಮಾಧ್ಯಮ ವರದಿಗಾರ ತಾನೆಂದು ಮರಳು ಸಾಗಾಣೆ ವಾಹನವೊಂದನ್ನು ತಡೆಗಟ್ಟಿ ಬೆದರಿಸಿ ಬಲವಂತವಾಗಿ ಹಣ ವಸೂಲಿ ಮಾಡಿದ ಘಟನೆಯೊಂದು ಶಿರಂಗಾಲದ ಬಳಿ ಇತ್ತೀಚೆಗೆ ನಡೆದಿರುವದಾಗಿ ವರದಿಯಾಗಿದೆ.
ತಾ. 26 ರಂದು ತಡರಾತ್ರಿಯಲ್ಲಿ ಶಿರಂಗಾಲದ ಬಳಿ ಮರಳು ತುಂಬಿದ ಟ್ರಾಕ್ಟರ್ ಒಂದನ್ನು ಅಡ್ಡ ಹಾಕಿದ ಮೂರು ಮಂದಿ ತಾವು ಪತ್ರಿಕಾ ಮಾಧ್ಯಮದವರೆಂದು ಪರಿಚಯಿಸಿಕೊಂಡು ಟ್ರಾಕ್ಟರ್ನಲ್ಲಿದ್ದ ವ್ಯಕ್ತಿಯೊಬ್ಬನನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಹಾಸನದ ಕಡೆಗೆ ಕರೆದೊಯ್ದಿದ್ದಾರೆ ಎನ್ನುವ ಆರೋಪ ಕೇಳಿಬಂದಿವೆ.
ಈ ಸಂದರ್ಭ ಕ್ಯಾಮೆರಾ ಮೂಲಕ ಚಿತ್ರೀಕರಿಸಿಕೊಂಡು ಬೆದರಿಸಿದ ತಂಡ ಮರಳು ದಂಧೆಗೆ ಸೇರಿದ ಕಿರಣ್ ಎಂಬಾತನಿಂದ 1 ಲಕ್ಷ ರೂಗಳಿಗೆ ಬೇಡಿಕೆಯಿಟ್ಟು ಕೊನೆಗೆ 10 ಸಾವಿರ ರೂ. ಗಳನ್ನು ಪಡೆದಿರುವದಾಗಿ ಕೇಳಿಬಂದಿವೆ. ಅಲ್ಲಿನ ಪೆಟ್ರೋಲ್ ಬಂಕ್ ಒಂದರ ಆವರಣದಲ್ಲಿ ಈ ಘಟನೆ ನಡೆದಿದ್ದು ಈ ಸಂದರ್ಭ ಮರಳು ಸಾಗಿಸುತ್ತಿದ್ದ ಇನ್ನಿತರ ವ್ಯಕ್ತಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಉಳಿದ ಹಣವನ್ನು ಕೊಡದಿದ್ದಲ್ಲಿ ತಮ್ಮ ಇಡೀ ದಂಧೆಯನ್ನು ಜಾಲಾಡುವದಾಗಿ ಬೆದರಿಸಿದ ತಂಡ ರಾತ್ರಿ ಎರಡು ಗಂಟೆ ತನಕ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ. ಕುಶಾಲನಗರ ಪ್ರವಾಸಿ ಮಂದಿರದ ಬಳಿ ತಮಗೆ ಉಳಿದ ಹಣ ಹಸ್ತಾಂತರಿಸಬೇಕು ಎನ್ನುವ ಬೇಡಿಕೆಯಿಟ್ಟು ನಂತರ ತಮ್ಮೊಂದಿಗಿದ್ದ ದಂಧೆಕೋರನನ್ನು ಬಿಡುಗಡೆ ಗೊಳಿಸಿದ್ದಾರೆ. ಟಿವಿ ಚಾನಲ್ಗಳ ಹೆಸರು ಬಳಸಿಕೊಂಡು ಕೆಲವರು ಮರಳು ದಂಧೆಕೋರರಿಂದ ಮಾಮೂಲಿ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಈ ಸಂದರ್ಭ ಹೊರಬಿದ್ದಿದೆ. -ಸಿಂಚು