ಟಿಪ್ಪು ಸುಲ್ತಾನ ಮೊಟ್ಟಮೊದಲ ಸ್ವಾತಂತ್ರ್ಯ ಯೋಧ, ಮಹಾನ್ ರಾಷ್ಟ್ರೀಯವಾದಿ, ಮಾನವತಾವಾದಿ, ಜಾತ್ಯತೀತವಾದಿ ಆಡಳಿತಗಾರ ಎಂದು ಸರಕಾರ ಚರಿತ್ರೆ ನಿರ್ಮಾಣ ಮಾಡುತ್ತಿದೆ. ನಮ್ಮ ಜ್ಞಾನಪೀಠ ನಾಟಕಕಾರ ಗಿರೀಶ್ ಕಾರ್ನಾಡ್‍ರವರು ‘ಟಿಪ್ಪು ಸುಲ್ತಾನ ಕಂಡ ಕನಸು’ ಎಂದು ಕಪೊಕಲ್ಪಿತ ನಾಟಕವನ್ನೇ ಬರೆದು ಶ್ರೀರಾಮಚಂದ್ರನಿಗಿಂತ ಶ್ರೇಷ್ಠ ಆದರ್ಶ ಪುರುಷನಾಗಿ ಮಾಡಿಬಿಟ್ಟರು.

ಟಿಪ್ಪುವಿನ ಮತಾಂಧತೆಯಿಂದ ಆದ ಬಲಾತ್ಕಾರದ ಮತಾಂತರ, ದೇವಾಲಯ ವಿದ್ವಂಸ, ಕೊಲೆ ಸುಲಿಗೆ, ಅತ್ಯಾಚಾರಗಳಿಂದ ಕೊಡಗಿನ ಕೊಡವರು, ಮಂಗಳೂರಿನ ಕ್ರಿಶ್ಚಿಯನ್ನರು, ಮಲಬಾರಿನ ನಾಯರ್‍ಗಳು, ದುರ್ಗದ ವಾಲ್ಮೀಕಿ ಜನಾಂಗದವರು, ಮೇಲುಕೋಟೆ ಐಯ್ಯಂಗಾರ್ ಬ್ರಾಹ್ಮಣರು, ಬೇಡಜನಾಂಗದವರು ಹೀಗೆ ಈ ಎಲ್ಲಾ ಜನಾಂಗದವರು ತಮ್ಮ ತಾತ-ಮುತ್ತಾಂತಂದಿರನ್ನು ಕೊಂದ ಕೊಲೆಗಾರನ ಜಯಂತಿಯನ್ನು-ಹುಟ್ಟು ಹಬ್ಬವನ್ನು ಹೇಗೆ ಆಚರಿಸುತ್ತಾರೆ? ಸರಕಾರ ಘೋಷಿಸಿರುವ ನವೆಂಬರ್ 10 ಇವರಿಗೆಲ್ಲಾ ಸೂತಕದ ದಿನ, ಈ ಮನೆಗಳೆಲ್ಲಾ ಸೂತಕದ ಮನೆಗಳು. ಈ ಸೂತಕದ ಮನೆಯಲ್ಲಿ ಹಬ್ಬದ ಸಂಭ್ರಮ ಆಚರಿಸಿ ಎಂದು ಈ ನಾಡಿನ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಅದೂ ಟಿಪ್ಪುವಿನಂತೆ ಬಲಾತ್ಕಾರವಾಗಿ.

ಬ್ರಿಟಿಷ್‍ಲಂಡನ್ ಲೈಬ್ರರಿಯಲ್ಲಿ ಟಿಪ್ಪುವಿನ ನಿಜವಾದ ಕನಸಿನ ದಾಖಲೆಗಳಿವೆ. ಡಾ. ಕೆ. ಎಂ. ಫಣಿಕ್ಕರ್ ಎಂಬ ಖ್ಯಾತ ಇತಿಹಾಸಕಾರ (ಭಾರತ ಚೀನಾ ರಾಯಭಾರಿಯಾಗಿದ್ದರು) 1923ರಲ್ಲಿ ‘ಭಾಷಾ ಪೋಷಿಣಿ’ ಎಂಬ ಮಲೆಯಾಳಂ ಪತ್ರಿಕೆಯಲ್ಲಿ ಟಿಪ್ಪು ತನ್ನ ಆಡಳಿತದಲ್ಲಿ ಪ್ರಮುಖರಿಗೆ ವಿದೇಶಿ ದೊರೆಗಳಿಗೆ, ಬರೆದ ಪತ್ರಗಳನ್ನು ಭಾಷಾಂತರಿಸಿ ಪ್ರಕಟಿಸಿದ್ದಾರೆ. ಕಲ್ಲಿಕೋಟೆ ಸೇನಾಧಿಕಾರಿಗೆ 14.12.1788ರಲ್ಲಿ, ಶೇಷ್‍ಕುತು ಬುದೀನ್‍ಗೆ 21.12.1788ರಲ್ಲಿ, ಕೊಡಂಗೇರಿ ಅಬ್ದುಲ್ ಖಾದಿಗೆ 22.03.1784ರಲ್ಲಿ, ಸೈಯದ್ ಅಬ್ದುಲ್ ಮಲ್‍ಮಲಕ್‍ಗೆ 18.01.1790ರಲ್ಲಿ, ಬದ್ರು ಸುಸ್ಕಾನ್‍ಗೆ 19.01.1790ರಲ್ಲಿ ಹೀಗೆ ಇವರಿಗೆಲ್ಲಾ ಬರೆದ ಪತ್ರದಲ್ಲಿ ‘ದೇವರಲ್ಲಿ ನಂಬಿಕೆ ಇಲ್ಲದ ನಾಸ್ತಿಕರನ್ನು ಬಂಧಿಸಿ ಕೊಲ್ಲಬೇಕು, ಕಾಡುಮೇಡು ಬೆಟ್ಟಗುಡ್ಡಗಳಲ್ಲಿ ಅಡಗಿರುವ ಇವರನ್ನು ಹಿಡಿದು ತಂದು ಮತಾಂತರಿಸಬೇಕು, ಇದನ್ನು ‘ಜಿಹಾದ್ ಯುದ್ಧ’ ಎಂದು ಪರಿಗಣಿಸಬೇಕು. ಮತಾಂತರಕ್ಕೆ ಒಪ್ಪದವರನ್ನು ಮರಕ್ಕೆ ಜೀವಂತ ನೇಣುಹಾಕಬೇಕು, ಅವರ ದೇವಸ್ಥಾನಗಳನ್ನು ಲೂಟಿ ಮಾಡಬೇಕು, ನಿಮ್ಮ ಗೆಲುವಿನ ಕೊಂಕುಕತ್ತಿ ನಾಸ್ತಿಕರ (ಹಿಂದು, ಕ್ರಿಶ್ಚಿಯನ್) ವಿನಾಶಕ್ಕೆ ಇರುವ ಸಿಡಿಲೇ ಆಗಬೇಕು, ಬಂಧಿತ ನಾಸ್ತಿಕ ಗಂಡಸರನ್ನು ಖಡ್ಗಕ್ಕೆ ಆಹುತಿ ಮಾಡಿ, ಹೀಗೆ ಬರೆದ ನೂರಾರು ಪತ್ರಗಳಿವೆ.

ನೆಪೋಲಿಯನ್ ಬೋನಾಪಾರ್ಟ್‍ಗೆ ಮತ್ತು ತುರ್ಕಿಯ ಖಲೀಫರಿಗೆ, ಅಫಘಾನಿಸ್ತಾನದ ದೊರೆ ಜಮಾನ್‍ಶಾಹನಿಗೆ “ಭಾರತದ ಮೇಲೆ ದಂಡೆತ್ತಿ ಬನ್ನಿ, ಬ್ರಿಟಿಷರನ್ನು ಓಡಿಸಿ ಈ ದೇಶವನ್ನು ಹಂಚಿಕೊಳ್ಳೋಣ” ಎಂದು ಬರೆದ ಪತ್ರಗಳು ಸಾಕ್ಷಿಯಾಗಿದೆ. ಇದು ಟಿಪ್ಪುವಿನ ನಿಜವಾದ ಕನಸು. ಈ ಕನಸು ಕಾರ್ನಾಡರಿಗೆ, ಆಧುನಿಕ ಇತಿಹಾಸಕಾರರಿಗೆ, ಕಾಣಿಸಲೇ ಇಲ್ಲ. ಇದು ಕಾಣುವದು ಅವರಿಗೆ ಬೇಕಿಲ್ಲ.

ಹೈದರಾಲಿ ಮರಣ ನಂತರ 1783 ರಿಂದ 1791ರವರೆಗೆ ಟಿಪ್ಪು ನಡೆಸಿರುವ ಘೋರ ಕೃತ್ಯಗಳನ್ನು ಪ್ರಗತಿಪರ ಎಂಬ ಇತಿಹಾಸಕಾರರು ಉಲ್ಲೇಖಿಸುವದೇ ಇಲ್ಲ. 1784 ಮಾರ್ಚ್ 11ರಂದು 2ನೇ ಮೈಸೂರು ಯುದ್ಧದಲ್ಲಿ ಟಿಪ್ಪು ಬ್ರಿಟೀಷರೊಂದಿಗೆ ‘ಮಂಗಳೂರು ಒಪ್ಪಂದ’ ಮಾಡಿಕೊಂಡ ನಂತರ ಯುದ್ಧ ಗೆದ್ದ ಭ್ರಮೆಯಲ್ಲಿ ಅತಿಕ್ರಮಣ, ಲೂಟಿ, ಮತಾಂತರಕ್ಕೆ ಇಳಿದ. ಈ ಅವಧಿಯಲ್ಲೇ ನಡೆದದ್ದು ಕೊಡಗಿನ ದಾಳಿ ಕೊಡವರ ಹತ್ಯಾಕಾಂಡ, ಮಂಗಳೂರು ಕ್ರಿಶ್ಚಿಯನ್ನರನ್ನು ಮತಾಂತರಿಸಿ ಚರ್ಚ್‍ಗಳ ನಾಶ, ಮಲಬಾರಿನ ನಾಯರ್‍ಗಳ ಕೊಲೆ, ಮತಾಂತರ, ಮೇಲುಕೋಟೆ ಅಯ್ಯಂಗಾರ್‍ರ ಸಾಮೂಹಿಕ ಹತ್ಯೆ, ಈ ಎಲ್ಲವೂ ನಡೆದದ್ದು ದಕ್ಷಿಣ ಭಾರತವನ್ನು ಇಸ್ಲಾಂ ಪ್ರಾಂತ್ಯವಾಗಿಸಿ ತಾನು ‘ಬಾದ್‍ಶಾಹ್’ ಆಗಬೇಕೆಂಬ ಕನಸು ಕಂಡ ಸುಲ್ತಾನನಿಂದ.

1792 ಮಾರ್ಚ್ 19ರಂದು 3ನೇ ಮೈಸೂರು ಯುದ್ಧ ಕೊನೆಗೊಂಡು ‘ಶ್ರೀರಂಗಪಟ್ಟಣ ಒಪ್ಪಂದ’ದ ನಂತರ ಟಿಪ್ಪು ಸಂಪೂರ್ಣ ಸೋತು ತನ್ನ ಖಜಾನೆ ಖಾಲಿಯಾಗಿ ಮಕ್ಕಳನ್ನು ಒತ್ತೆ ಇಟ್ಟು ಕುಳಿತ. 1792 ರಿಂದ 1799ರ (ಸಾಯುವ ತನಕ) ಹಿಂದೂಗಳನ್ನು ಓಲೈಸಲು ದಾನ ದತ್ತಿ ಎಂದು ಶುರು ಹಚ್ಚಿಕೊಂಡ. ತಾನು ಮಾಡಿದ ಪಾಪಕೃತ್ಯಕ್ಕಾಗಿ ಜೋತಿಷಿಗಳ ಮೊರೆಹೋದ. ಶೃಂಗೇರಿ ಮಠಕ್ಕೆ ದಾನ ಕೊಡುತ್ತಾ ಪತ್ರದ ಮೇಲೆ ಪತ್ರ ಬರೆಯತೊಡÀಗಿದ. ಭಗ್ನೋತ್ಸಾಹಿ ಯಾಗಿ ಶ್ರೀರಂಗಪಟ್ಟಣದಲ್ಲೇ ಅಡಗಿ ಕುಳಿತ. ಈ ಅವಧಿಯನ್ನು ಜಾತ್ಯತೀತ ಲೇಖಕರು ಅತಿ ರಂಜಿತವಾಗಿ ಬರೆದರು. ಮೊದಲ ಕ್ರೌರ್ಯದ ಅವಧಿಯನ್ನು ಜಾಣತನದಿಂದ ಮುಚ್ಚಿಟ್ಟರು.

ಜಿ. ರಿಕ್ಟರ್‍ರ ‘ಗೆಝೆಟಿಯರ್ ಆಫ್ ಕೂರ್ಗ್’, ನಡಿಕೇರಿಯಂಡ ಚಿಣ್ಣಪ್ಪರ ‘ಪಟ್ಟೋಲೆ ಪಳಮೆ’, ಮಾರ್ಕ್ ವಿಲ್ಕ್‍ಸ್‍ರ ‘ಹಿಸ್ಟರಿ ಆಫ್ ಮೈಸೂರ್’, ಜಿ. ರಾಜಶೇಖರಪ್ಪರ ‘ದಕ್ಷಿಣ ಕರ್ನಾಟಕದ ಅರಸು ಮನೆತನಗಳು’, ಡಾ. ಕೆ. ಫಣಿಕರ್‍ರ ‘ಭಾಷಾ ಪೋಷಿಣಿ’, ಹಯವದನರಾವ್‍ರ ‘ದ ಹಿಸ್ಟರಿ ಆಫ್ ಮೈಸೂರು’, ಎಸ್. ಖ. ಶರ್ಮರ ‘ಟಿಪ್ಪುವಿನ ನಿಜ ಸ್ವರೂಪ’, ಕರ್ನಲ್ ಪಲ್ಸೋಕರ್‍ರ ‘ಟಿಪ್ಪು ಸುಲ್ತಾನ್’, ಫಾದರ್ ದಯಾನಂದ ಪ್ರಭುರ ‘ಮೈಸೂರು ಸಂಸ್ಥಾನದ ಕ್ರೈಸ್ತರು’, ಹೆಚ್. ಎಲ್. ನಾಗೇಗೌಡರ ‘ಟಿಪ್ಪುವಿನ ಕೈದಿಗಳು’ ಈ ಎಲ್ಲಾ ಇತಿಹಾಸ ಗ್ರಂಥಗಳಲ್ಲಿ ಟಿಪ್ಪುವಿನ ಕ್ರೌರ್ಯದ ದಾಖಲೆಗಳಿವೆ. ಇವರು ಯಾರು ಬಲಪಂಥೀಯ ಅಥವಾ ಸಂಘ ಪರಿವಾರದ ಲೇಖಕರು, ಇತಿಹಾಸಕಾರರಲ್ಲ. ಹಾಗಾದರೆ ಈ ಎಲ್ಲಾ ದಾಖಲೆ ಗಳು ಸುಳ್ಳಿನ ಕಂತೆಗಳೇನು ?

ಅಡ್ಡಂಡ ಸಿ. ಕಾರ್ಯಪ್ಪ

ಇತಿಹಾಸಕಾರರು - ಕೊಡಗು

e-mಚಿiಟ : ಚಿಜಜಚಿಟಿಜಚಿಛಿಚಿಡಿiಚಿಠಿಠಿಚಿ @gmಚಿiಟ.ಛಿom