ಕುಶಾಲನಗರ, ಅ. 30: ಪಕ್ಷಬೇಧ, ರಾಜಕೀಯ ರಹಿತವಾಗಿ ಹೋರಾಟ ಮಾಡುವ ಮೂಲಕ ಪ್ರಸ್ತಾವಿತ ಕಾವೇರಿ ತಾಲೂಕು ರಚನೆಗೆ ಎಲ್ಲಾ ರೀತಿಯ ಸಹಕಾರ ನೀಡುವದಾಗಿ ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ. ಕುಶಾಲನಗರವನ್ನು ಕೇಂದ್ರವಾಗಿಸಿ ಕೊಂಡು ನೂತನ ಕಾವೇರಿ ತಾಲೂಕು ರಚನೆಯ ಸಂಬಂಧ ನಡೆದ ಬೃಹತ್ ರ್ಯಾಲಿ ನಂತರ ಸಭೆಯಲ್ಲಿ ಪಾಲ್ಗೊಂಡ ಜನಪ್ರತಿನಿಧಿಗಳು ಬೇಡಿಕೆಯ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲು ಕ್ರಮಕೈಗೊಳ್ಳಲಾಗುವದು ಎಂದಿದ್ದಾರೆ.ಕುಶಾಲನಗರ ಕಾರು ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಭಿವೃದ್ಧಿ ಯನ್ನು ಗಮನದಲ್ಲಿಟ್ಟು ಕೊಂಡು ತಾಲೂಕು ರಚನೆಗೆ ಸರಕಾರದ ಸ್ಪಂದನೆ ದೊರೆಯಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಇನ್ನೋರ್ವ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತ ನಾಡಿ, ಕಳೆದ ಎರಡು ದಶಕಗಳಿಂದ ತಾಲೂಕಿಗಾಗಿ ನಡೆಯುತ್ತಿರುವ ಹೋರಾಟದ ವೇಗ ಕ್ಷೀಣಗೊಂಡು ಇದೀಗ ಮತ್ತೆ ಕೂಗು ಕೇಳಿಬಂದಿದೆ.
(ಮೊದಲ ಪುಟದಿಂದ) ಪುನಃ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿದ್ದು ಈ ಸಂದರ್ಭ ಪಕ್ಷಾತೀತವಾಗಿ ಶ್ರಮಿಸಿ ಕಾವೇರಿ ತಾಲೂಕು ರಚನೆಗೆ ಬದ್ಧರಾಗೋಣ ಎಂದರು.
ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಮುಖ್ಯಮಂತ್ರಿಗಳು ಮನಸು ಮಾಡುವಂತೆ ಆಗ್ರಹ ಮಾಡಬೇಕಾಗಿದೆ. ಆಡಳಿತ ಪಕ್ಷದ ಜನಪ್ರತಿನಿಧಿಗಳು ಹೆಚ್ಚಿನ ಒತ್ತಡ ಹಾಕುವದರೊಂದಿಗೆ ನೂತನ ತಾಲೂಕು ರಚನೆ ಮೂಲಕ ಜನತೆಗೆ ಸಹಾಯ ಕಲ್ಪಿಸುವದು, ಇದರೊಂದಿಗೆ ವಿರೋಧ ಪಕ್ಷದ ಜನಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು. ಮುಂಬರುವ ಬೆಳಗಾಂ ಅಧಿವೇಶನದಲ್ಲಿ ವಿಷಯ ಪ್ರಸ್ತಾವನೆ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಯಲಿದೆ ಎಂದರು.
ನೂತನ ತಾಲೂಕು ರಚನೆ ಯಾದರೆ ಜನರಿಗೆ ಉಂಟಾಗುತ್ತಿರುವ ಸಂಕಷ್ಟ ದೂರವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೋರಾಟ ಸಮಿತಿ ಸಂಚಾಲಕ ವಿ.ಪಿ. ಶಶಿಧರ್ ಮಾತನಾಡಿ, ಆರ್. ಗುಂಡೂರಾಯರ ಕನಸಿನ ಕಲ್ಪನೆ ನನಸಾಗುವ ತನಕ ಹೋರಾಟ ಮುಂದುವರೆಯಲಿದೆ. ಎಲ್ಲಾ ಮಾನದಂಡಗಳನ್ನು ಹೊಂದಿರುವ ಪ್ರಸ್ತಾವಿತ ಕಾವೇರಿ ತಾಲೂಕಿಗೆ ಜನತೆಯ ಬೇಡಿಕೆಯ ನಿರ್ಲಕ್ಷ್ಯ ಸಲ್ಲದು ಎಂದರು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಕೆ.ಪಿ.ಚಂದ್ರಕಲಾ, ಕುಮುದ ಧರ್ಮಪ್ಪ, ಸುನಿತಾ, ಲತೀಫ್, ಮಂಜುಳಾ, ಶ್ರೀನಿವಾಸ್ ಸೇರಿದಂತೆ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರಮುಖರು ಹಾಗೂ 19 ಸ್ಥಾಯಿ ಸಮಿತಿಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ನಾಗರೀಕರು ಇದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಪಿ.ಚಂದ್ರಕಲಾ ನಿರ್ಣಯ ಮಂಡಿಸಿದರು.
ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಕೆ.ನಾಗೇಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಕುಶಾಲನಗರ ಸ್ಥಾಯಿ ಸಮಿತಿ ಅಧ್ಯಕ್ಷÀ ಜಿ.ಎಲ್.ನಾಗರಾಜ್ ಸ್ವಾಗತಿಸಿದರು, ರಮಾ ವಿಜಯೇಂದ್ರ ತಂಡದ ಸದಸ್ಯರು ಪ್ರಾರ್ಥಿಸಿದರು, ನೆಲ್ಲಿಹುದಿಕೇರಿ ಭರತ್ ನಿರೂಪಿಸಿದರು, ಚಂದ್ರಶೇಖರ್ ವಂದಿಸಿದರು.