ಮಡಿಕೇರಿ, ಅ. 30: ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಂಡಿರುವ ಕೊಡಗು ಜಿಲ್ಲಾ ಪಂಚಾಯ್ತಿಯನ್ನು ಸರ್ಕಾರ ‘ಸೂಪರ್ ಸೀಡ್’ ಮಾಡಬೇಕೆಂದು ಏಳ್‍ನಾಡ್ ಕೊಡವ ಸಂಘದ ಸಂಸ್ಥಾಪಕ ಅಧ್ಯಕ್ಷ ಯು.ಎಂ. ಮುದ್ದಯ್ಯ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಪಂ ಸಭೆಗಳಲ್ಲಿ ಅಭಿವೃದ್ಧಿ ಪರ ಚಿಂತನೆ ಮಾಡಬೇಕೇ ಹೊರತು ಜಾತಿವಾದವನ್ನು ಅಲ್ಲವೆಂದು ಅಭಿಪ್ರಾಯಪಟ್ಟರು.

ಕೊಡಗಿನ ನಾಯಿಗಳಿಗೆ ಟಿಪ್ಪುವಿನ ಹೆಸರನ್ನು ಇಡುತ್ತಾರೆಂದು ಕಲಾವಿದ ಅಡ್ಡಂಡ ಸಿ. ಕಾರ್ಯಪ್ಪ ನೀಡಿರುವ ಹೇಳಿಕೆ ಖಂಡನೀಯವೆಂದ ಮುದ್ದಯ್ಯ, ಕೊಡಗಿನಲ್ಲಿ ಹೀರೋ ಆಗಿರುವ ಟಿಪ್ಪುವಿನ ಹೆಸರನ್ನು ಚುರುಕಿನ ನಾಯಿಗಳಿಗೂ ಹಾಗೂ ಮಕ್ಕಳಿಗೂ ಇಡುತ್ತಾರೆ. ಕಾರ್ಯಪ್ಪ ಅವರ ಹೇಳಿಕೆ ಬಾಲಿಶವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಟಿಪ್ಪು ಜಯಂತಿಯನ್ನು ವಿರೋಧಿಸಿ ಕೊಡವ ಸಮಾಜ ತೆಗೆದುಕೊಂಡಿರುವ ನಿರ್ಧಾರ ಸಮರ್ಪಕವಲ್ಲ. ಇದು ಆಡಳಿತ ಮಂಡಳಿಯ ಕೆಲವರ ಅಭಿಪ್ರಾಯವೇ ಹೊರತು ಸರ್ವ ಕೊಡವರ ಧ್ವನಿಯಲ್ಲವೆಂದು ಅವರು ಅಭಿಪ್ರಾಯಪಟ್ಟರು.