ಮಡಿಕೇರಿ, ಅ. 30: ನವೆಂಬರ್ 1ರಂದು ನಡೆಯಲಿರುವ ರಾಜ್ಯೋತ್ಸವ ಸಂದರ್ಭ ರಾಜ್ಯದ 62 ಮಂದಿಗೆ ವಿವಿಧ ಕ್ಷೇತ್ರಗಳಲ್ಲಿನ ಗಣನೀಯ ಸೇವೆಗಾಗಿ ಕನ್ನಡ ರಾಜ್ಯೊತ್ಸವ ಪ್ರಶಸ್ತಿಗಳನ್ನು ನೀಡಲು ಸರಕಾರ ಪರಿಗಣಿಸಿದೆ. ಆ ದಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.ಪ್ರಸಕ್ತ ಸಾಲಿನಲ್ಲಿ ಕೊಡಗಿನ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಕೊಡಗಿನ ಖ್ಯಾತ ಅಂತರ್ರಾಷ್ಟ್ರೀಯ ಕ್ರೀಡಾಪಟು ವಿ.ಆರ್. ರಘುನಾಥ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ. ಅದೇ ರೀತಿ ಮಾಧ್ಯಮ ವಿಭಾಗದಲ್ಲಿ ಕುಸುಮಾ ಶ್ಯಾನ್‍ಬಾಗ್ ಅವರಿಗೆ ಪ್ರಶಸ್ತಿ ಲಭ್ಯವಾಗಿದೆ.
ಹಾಕಿಯಲ್ಲಿ ಮಿಂಚಿದ ರಘುನಾಥ್: ಹಾಕಿಯಲ್ಲಿ ಮಿಂಚಿರುವ ರಘುನಾಥ್ ಅವರು, ಮೂಲತಃ ಕೊಡಗಿನವರು. 31 ವರ್ಷದ ಯುವಕರಾದ ರಘುನಾಥ್ ಜಿಲ್ಲೆಯ ಹಾತೂರುವಿನಲ್ಲಿ ಒಕ್ಕಲಿಗರ ರಾಮಚಂದ್ರ ಮತ್ತು ದೊಡ್ಡಮನೆ ಬೋಜಮ್ಮ ದಂಪತಿಯ ಪುತ್ರರಾಗಿದ್ದಾರೆ. ನಿವೇದಿತಾ ಸಂಕೇತ್ ಮತ್ತು ಕವನ ಯತೀಶ್ ಇವರ ಸಹೋದರಿಯರಾಗಿದ್ದಾರೆ. ಹಾಕಿಯಲ್ಲಿ ‘ಫುಲ್‍ಬ್ಯಾಕ್’ ಆಟದಲ್ಲಿ ಪರಿಣತರಾಗಿರುವ ಇವರು, 2003ರಲ್ಲಿ ಡಾಕಾದಲ್ಲಿ ನಡೆದ ಸಬ್ ಜೂನಿಯರ್ ಏಷ್ಯಾ ಕಪ್‍ನಲ್ಲಿ ಪಾಲ್ಗೊಂಡು ವಿಜೇತ ಭಾರತ ತಂಡದಲ್ಲಿ ಆಟವಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2005ರಲ್ಲಿ ಹಾಕಿ ವಿಶ್ವಕಪ್‍ನಲ್ಲಿ ಭಾರತ ತಂಡಕ್ಕೆ ಆಯ್ಕೆಗೊಂಡಿದ್ದರು. 2007ರಲ್ಲಿ ಮತ್ತು 2013ರಲ್ಲಿ ಏಷ್ಯಾಕಪ್‍ನಲ್ಲಿ ಭಾಗವಹಿಸಿದ್ದರು. 2014ರಲ್ಲಿ ಕಾಮನ್‍ವೆಲ್ತ್ ಗೇಮ್ಸ್ ಹಾಗೂ 2016ರಲ್ಲಿ ಲಂಡನ್‍ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಂಡಿದ್ದರು.
(ಮೊದಲ ಪುಟದಿಂದ) ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಭಾರತ ಹಾಕಿ ತಂಡದ ನಾಯಕರಾಗಿ ಮಿಂಚಿದ್ದರು.
ಕುಸುಮಾ ಶಾನ್‍ಭಾಗ್
ಮಾಧ್ಯಮ ಕ್ಷೇತ್ರದಲ್ಲಿನ ಸೇವೆಗಾಗಿ ಪ್ರಶಸ್ತಿಗೆ ಭಾಜನರಾಗಿರುವ ಕುಸುಮಾ ಶಾನ್‍ಭಾಗ್ (69) ಅವರು ಜಿಲ್ಲೆಯ ಹಿರಿಯ ಸಾಹಿತಿ ಭಾರತೀಸುತ ಎಂದು ಖ್ಯಾತಿಯಾಗಿದ್ದ ಎಸ್.ಆರ್. ನಾರಾಯಣರಾವ್ ಅವರ ಪುತ್ರಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಪ್ರಜಾವಾಣಿ ಪತ್ರಿಕೆಯಲ್ಲಿ 21 ವರ್ಷಗಳ ಕಾಲ ವರದಿಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಈ ಪೈಕಿ ಎರಡು ವರ್ಷಗಳ ಕಾಲ ಮಂಡ್ಯ ಜಿಲ್ಲಾ ವರದಿಗಾರ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಹಿಳೆಯರಿಗೆ ನೆÉರವಾಗುವ ವಿವೇಚನಾ ಎಂಬ ಸಂಸ್ಥೆ ಹಾಗೂ ಲೈಂಗಿಕ ಕಾರ್ಯಕರ್ತೆಯರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಿರುವ ಇವರ ಲೇಖನಗಳು ಹಿಂದೆ ಬೆಂಗಳೂರಿನಲ್ಲಿ ‘ಶಕ್ತಿ’ ಸಂಪಾದಕರಾಗಿದ್ದ ಜಿ. ಯದುಮಣಿ ಅವರು ಹೊರತರುತ್ತಿದ್ದ ‘ಶಕ್ತಿ’ ವಾರಪತ್ರಿಕೆಯಲ್ಲಿ, ಉದಯವಾಣಿ ಯಲ್ಲಿ ಪ್ರಕಟವಾಗುತ್ತಿದ್ದವು. ‘ನೆನಪುಗಳ ಬೆನ್ನೇರಿ’ ಕಥಾ ಸಂಕಲನ, ಲೈಂಗಿಕ ಕಾರ್ಯಕರ್ತೆಯರ ಕುರಿತಾದ ‘ಕಾಯದ ಕಾರ್ಪಣ್ಯ’, ಲೇಖನಗಳ ‘ಪುಟಗಳ ನಡುವಿನ ನವಿಲುಗರಿ’, ‘ಮಣ್ಣಿನಿಂದ ಎದ್ದವರು’ ಎಂಬ ಕಾದಂಬರಿ ಪ್ರಕಟಗೊಂಡಿವೆ. ಅವಿವಾಹಿತವಾಗಿರುವ ಕುಸುಮ ಅವರು ಈಗ ವಿಶ್ರಾಂತಿಯ ಜೀವನ ಸಾಗಿಸುತ್ತಿದ್ದಾರೆ.