ಶ್ರೀಮಂಗಲ, ಅ. 31: ಕೊಡವ ಜನಾಂಗದವರ ಹತ್ಯಾಕಾಂಡ ಮತ್ತು ಮತಾಂತರ ಮಾಡಿರುವ ಟಿಪ್ಪು ಸುಲ್ತಾನನನ್ನು ವೈಭವೀಕರಿಸುವ ಟಿಪ್ಪು ಜಯಂತಿಯನ್ನು ಆಚರಿಸುವದು ಕೊಡವ ಜನಾಂಗ ತೀವ್ರವಾಗಿ ವಿರೋಧಿಸಿ ಪೊನ್ನಂಪೇಟೆಯಿಂದ 5 ಕೊಡವ ಸಮಾಜಗಳು ಮಡಿಕೇರಿವರೆಗೆ ತಾ. 10 ರಂದು ವಾಹನ ಜಾಥವನ್ನು ಹಮ್ಮಿಕೊಳ್ಳುವ ಮೂಲಕ ಪ್ರತಿಭಟನೆ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ. ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕ್‍ಮಾಡ ರಾಜೀವ್ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹುದಿಕೇರಿ, ಬಾಳೆಲೆ,

(ಮೊದಲ ಪುಟದಿಂದ) ಪೊನ್ನಂಪೇಟೆ, ಕಾನೂರು, ಬಿರುನಾಣಿ ಕೊಡವ ಸಮಾಜಗಳ ಪದಾಧಿಕಾರಿಗಳು ಪಾಲ್ಗೊಂಡು ಈ ನಿರ್ಣಯ ಕೈಗೊಳ್ಳಲಾಯಿತು.

ಟಿಪ್ಪು ಜಯಂತಿ ದಿನ ಪೊನ್ನಂಪೇಟೆ ಕೊಡವ ಸಮಾಜದಿಂದ ಪೂರ್ವಾಹ್ನ 10 ಗಂಟೆಗೆ ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಜನರು ವಾಹನ ಜಾಥದ ಮೂಲಕ ಮಡಿಕೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.

ಕೊಡವ ಜನಾಂಗದ ಈ ಪ್ರತಿಭಟನೆಗೆ ಇತರ ಜನಾಂಗಗಳು ನೈತಿಕ ಬೆಂಬಲ ನೀಡಬೇಕೆಂದು ಸಭೆಯಲ್ಲಿ ಮನವಿ ಮಾಡಲಾಯಿತು.

ಕಾನೂನು ಘಟಕ ಸ್ಥಾಪನೆ : ಕೊಡವ ಸಮುದಾಯದ ಹಾಗೂ ಕೊಡಗಿನ ಹಿತಾಸಕ್ತಿಗೆ ದಕ್ಕೆಯಾಗುವ ಪ್ರಕರಣದ ಬಗ್ಗೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲು ಈ ಬಗ್ಗೆ ಕಾಳಜಿ ಹಾಗೂ ಇಚ್ಚಾಶಕ್ತಿ ಇರುವ ವಕೀಲರ ತಂಡವನ್ನು ರಚನೆ ಮಾಡಿ ಕಾನೂನು ಘಟಕ ಸ್ಥಾಪಿಸಲು ಸಭೆಯಲ್ಲಿ ಪ್ರಸ್ತಾಪವಾಯಿತು. ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಯಿತು.

ಸಭೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ಪದಾಧಿಕಾರಿಗಳಾದ ಮೂಕಳಮಾಡ ಪಿ. ಲಕ್ಷ್ಮಣ, ಹುದಿಕೇರಿ ಕೊಡವ ಸಮಾಜದ ಅದ್ಯಕ್ಷ ಕೋದಂಡ ಸಣ್ಣು ಉತ್ತಪ್ಪ, ಕಾರ್ಯದರ್ಶಿ ಚಕ್ಕೇರ ಹರೀಶ್ ನಂಜಪ್ಪ, ಖಜಾಂಚಿ ಮಂಡಂಗಡ ಅಶೋಕ್, ನಿರ್ದೇಶಕ ಹೊಟ್ಟೇಂಗಡ ರಮೇಶ್, ಕಾನೂರು ಕೊಡವ ಸಮಾಜದ ಚಿರಿಯಪಂಡ ಈಶ್ ಬೆಳ್ಯಪ್ಪ, ಅಳಮೇಂಗಡ ವಿವೇಕ್, ಬಾಳೆಲೆ ಕೊಡವ ಸಮಾಜದ ಆದೇಂಗಡ ಕೆ. ಶೇಖರ್, ಆಲೆಮಾಡ ನಂಜಪ್ಪ, ಕಾಂಡೇರ ಯು. ದೇವಯ್ಯ, ಬಿರುನಾಣಿ ಕೊಡವ ಸಮಾಜದ ಉಪಾಧ್ಯಕ್ಷ ಕರ್ತಮಾಡ ಮಿಲನ್ ಮಾದಪ್ಪ ಮತ್ತಿತರರು ಭಾಗವಹಿಸಿದ್ದರು.

ಕೊಡವ ಸಮಾಜ ಒಕ್ಕೂಟ ವಿರೋಧ

ಕೊಡಗಿನಲ್ಲಿ ಟಿಪ್ಪು ಜಯಂತಿಯನ್ನು ವಿರೋಧಿಸಿ ಪ್ರತಿಭಟನೆಯನ್ನು ಈಗಾಗಲೇ ಹಮ್ಮಿಕೊಂಡಿದ್ದು, ಸಾರ್ವಜನಿಕರಿಗೆ ತೊಂದರೆ ಮಾಡಿ ಆಚರಿಸುವ ಜಯಂತಿಗೆ ಏನು ಅನ್ನಬೇಕು ಎನ್ನುವದು ತಿಳಿಯುತ್ತಿಲ್ಲವಾದರಿಂದ ಜಯಂತಿಯನ್ನು ಕೊಡಗಿನಲ್ಲಿ ಆಚರಿಸಲು ಸಂಪೂರ್ಣ ವಿರೋಧವಿದೆ ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಡಗಿನಲ್ಲಿ ಕೊಡವರನ್ನು ಕೊಂದು ನರಮೇಧ ಮಾಡಿದ ಟಿಪ್ಪುವಿನ ಜಯಂತಿಯನ್ನು ಯಾವದೇ ಕಾರಣಕ್ಕೂ ಆಚರಿಸಲು ಬಿಡುವದಿಲ್ಲ. ಜಯಂತಿಯನ್ನು ಆಚರಣೆ ಮಾಡಿದರೆ ಅದರಿಂದ ನಡೆಯುವ ಕಷ್ಟ ನಷ್ಟಗಳಿಗೆ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.