ಮಡಿಕೇರಿ, ಅ. 31: ಮಡಿಕೇರಿ ಕೊಡವ ಸಮಾಜ ಹಾಗೂ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಇಂದು ನಗರದ ಕೊಡವ ಸಮಾಜದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ಕೊಡವ ಸಮಾಜದ ಅಧ್ಯಕ್ಷ ಕೊಂಗಾಂಡ ಎಸ್. ದೇವಯ್ಯ ಅವರು, ಪೊಮ್ಮಕ್ಕಡ ಒಕ್ಕೂಟದಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಏರ್ಪಡಿಸಿರುವ ಈ ಶಿಬಿರ ಶ್ಲಾಘನೀಯ. ಇದು ಉತ್ತಮ ಸೇವಾ ಕಾರ್ಯವಾಗಿದೆ, ಕೇವಲ ಸಂಪತ್ತು ಇದ್ದರೆ ಸಾಲದು. ಆರೋಗ್ಯ ಇಲ್ಲದಿದ್ದರೆ ಬದುಕಿನಲ್ಲಿ ಏನೂ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಿಬಿರದಲ್ಲಿ ಹೃದಯ ಸಂಬಂಧಿ ರೋಗ, ಉಸಿರಾಟದ ತೊಂದರೆ, ರಕ್ತದೊತ್ತಡ, ಮಧುಮೇಹ, ಇ.ಸಿ.ಜಿ. ಪರೀಕ್ಷೆಯೊಂದಿಗೆ ವಿಶೇಷವಾಗಿ ಸ್ತ್ರೀರೋಗಕ್ಕೆ ಸಂಬಂಧಿಸಿದ ಸಮಸ್ಯೆ, ಸ್ತನಕ್ಯಾನ್ಸರ್ ಬಗ್ಗೆ ತಪಾಸಣೆ ನಡೆಸಲಾಯಿತು. ನಾರಾಯಣ ಆಸ್ಪತ್ರೆಯ ವೈದ್ಯರ ತಂಡದವರು ಆಧುನಿಕ ಯಂತ್ರೋಪಕರಣದೊಂದಿಗೆ (ಮೊಬೈಲ್ ವಾಹನ) ಆಗಮಿಸಿ ತಪಾಸಣೆ ನಡೆಸಿಕೊಟ್ಟರು. ತಜ್ಞ ವೈದ್ಯರುಗಳಾದ ಶಿವಕುಮಾರ್, ಗುಲ್ಜರ್, ಅನಿತಾ, ಸ್ವರ್ಣಲತಾ ಸೇರಿದಂತೆ ಸಿಬ್ಬಂದಿಗಳು ಶಿಬಿರವನ್ನು ಯಶಸ್ವಿಗೊಳಿಸಿದರು. ಉದ್ಘಾಟನಾ ಸಂದರ್ಭ ವೇದಿಕೆಯಲ್ಲಿ ಕೊಡವ ಸಮಾಜದ ಕಾರ್ಯದರ್ಶಿ ಅರೆಯಡ ರಮೇಶ್, ನಿರ್ದೇಶಕಿ ಐಮುಡಿಯಂಡ ರಾಣಿ ಮಾಚಯ್ಯ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಹಾಗೂ ವೈದ್ಯರುಗಳು ಉಪಸ್ಥಿತರಿದ್ದರು. ಕೊಡವ ಸಮಾಜದ ನಿರ್ದೇಶಕಿ ಉಳ್ಳಿಯಡ ಸಚಿತಾ ಪ್ರಾರ್ಥಿಸಿ, ಪೊಮ್ಮಕ್ಕಡ ಕೂಟದ ಕೂಪದಿರ ಜೂನಾ ವಿಜಯ್ ಸ್ವಾಗತಿಸಿದರು. ಬೊಳ್ಳಜೀರ ಯಮುನಾ ಅಯ್ಯಪ್ಪ ನಿರೂಪಿಸಿ, ಕನ್ನಂಡ ಕವಿತಾ ವಂದಿಸಿದರು.