ಗೋಣಿಕೊಪ್ಪಲು, ಅ. 31: ಪೊನ್ನಂಪೇಟೆ ತಾಲೂಕು ರಚನೆ ಘೋಷಣೆವರೆಗೆ ನಿರಂತರ ಹೋರಾಟ ಹಮ್ಮಿಕೊಳ್ಳಲು ಪೊನ್ನಂಪೇಟೆಯಲ್ಲಿ ಸಾಂಕೇತಿಕ ಪ್ರತಿಭಟನೆ ಮೂಲಕ ಚಾಲನೆ ನೀಡಲು ನಿರ್ಧರಿಸಲಾಗಿದೆ.ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಪೊನ್ನಂಪೇಟೆ ಕೊಡವ ಸಮಾಜ ಮಾಜಿ ಅಧ್ಯಕ್ಷ ಚೆಪ್ಪುಡೀರ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆದ ಪೊನ್ನಂಪೇಟೆ ತಾಲೂಕು ರಚನಾ ಹೋರಾಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಮಹತ್ವದ ಚರ್ಚೆ ನಡೆದು, ತಾ.1ರಂದು (ಇಂದು) ರಾಜ್ಯೋತ್ಸವ ದಂದು ಸಾಂಕೇತಿಕ ಪ್ರತಿಭಟನೆ ಮೂಲಕ ಚಾಲನೆ ನೀಡುವ ಬಗ್ಗೆ ನಿರ್ಧರಿಸಲಾಯಿತು.ಬೆಳಗ್ಗೆ 9 ಗಂಟೆಗೆ ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಹೋರಾಟಕ್ಕೆ ಚಾಲನೆ ನೀಡುವದು, ನಂತರ ಅಲ್ಲಿನ ಗಾಂಧಿ ಪ್ರತಿಮೆ
(ಮೊದಲ ಪುಟದಿಂದ) ಎದುರು 1 ಗಂಟೆಗಳ ಕಾಲ ಧರಣಿ ನಡೆಸಿ ಸರ್ಕಾರಕ್ಕೆ ಹೋರಾಟದ ಆರಂಭವನ್ನು ತಿಳಿಸುವ ಮೂಲಕ ಎಚ್ಚರಿಸಲು ನಿರ್ಧರಿಸಲಾಯಿತು. ಚಾಲನೆ ಸಂದರ್ಭ ಸ್ಥಳೀಯ ಸಂಘ-ಸಂಸ್ಥೆ, ಆಟೋ ಚಾಲಕರು, ವಾಹನ ಚಾಲಕರ ಸಂಘ, ಸ್ತ್ರೀಶಕ್ತಿ, ಪೊನ್ನಂಪೇಟೆ ಸುತ್ತಮುತ್ತಲಿನ ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರುಗಳು ಪಾಲ್ಗೊಳ್ಳುವಂತೆ ಮನವಿ ಮಾಡಲು ನಿರ್ಧರಿಸಲಾಯಿತು.
ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ, ಸಾಂಕೇತಿಕ ಪ್ರತಿಭಟನೆ ಆರಂಭಿಸುವ ಮೂಲಕ ನಾವು ಸಂಘಟಿತರಾಗಲು ಮುಂದಾಗಬೇಕಿದೆ. ಪಕ್ಷಾತೀತವಾಗಿ ಹೋರಾಟ ನಡೆಸಬೇಕಿದೆ ಎಂದರು.
ವೀರಾಜಪೇಟೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮಿನಿ ವಿಧಾನಸೌಧ ಕಾಮಗಾರಿ ಮುಗಿದ ನಂತರ ಪೊನ್ನಂಪೇಟೆಯಲ್ಲಿರುವ ಎಲ್ಲಾ ತಾಲೂಕು ಕಚೇರಿಗಳನ್ನು ಸ್ಥಳಾಂತರ ಮಾಡುವದರಿಂದ ಸಾರ್ವಜನಿಕರು ಕಚೇರಿ ಕೆಲಸಕ್ಕೆ ಇನ್ನಷ್ಟು ಅಲೆದಾಡುವ ಸಾಧ್ಯತೆ ಹೆಚ್ಚಿರುವದರಿಂದ ಪೊನ್ನಂಪೇಟೆ ತಾಲೂಕು ಘೋಷಣೆ ಮಾಡದಿದ್ದರೆ ಕುಟ್ಟ, ಬಿರುನಾಣಿ ಹಾಗೂ ಬಾಳೆಲೆ ಭಾಗದ ಜನತೆ ಹೆಚ್ಚು ತೊಂದರೆಗೆ ಸಿಲುಕುವ ಸಾಧ್ಯತೆ ಬಗ್ಗೆ ತಾ.ಪಂ. ಮಾಜಿ ಸದಸ್ಯ ದಯಾ ಚೆಂಗಪ್ಪ ಆತಂಕ ವ್ಯಕ್ತಪಡಿಸಿದರು. ಶೀಘ್ರದಲ್ಲಿಯೇ ತಾಲೂಕು ಘೋಷಣೆಯಾಗಬೇಕು, ಇದಕ್ಕೆ ನಿರಂತರ ಹೋರಾಟ ಅಗತ್ಯ ಎಂದರು.
ಶಾಸಕ ಕೆ. ಜಿ. ಬೋಪಯ್ಯ ಸಭೆಗೆ ಪಾಲ್ಗೊಳ್ಳದ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಕೆಡಿಪಿ ಸಭೆ ಇರುವದರಿಂದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದರು ಎಂದು ಆಯೋಜಕರು ಮಾಹಿತಿ ನೀಡಿದ ನಂತರ ಅವರ ಸಹಕಾರದಲ್ಲಿ ಸರ್ಕಾರದ ಮಟ್ಟದ ಹೋರಾಟ ನಡೆಸುವಂತೆ ನಿರ್ಧರಿಸಲಾಯಿತು.
ರಾಜ್ಯ ಸರ್ಕಾರ ಬೇಡಿಕೆ ಇಲ್ಲದ 9 ಹೊಸ ತಾಲೂಕನ್ನು ಸ್ವತಃ ಘೋಷಣೆ ಮಾಡಿದೆ. ಆದರೆ ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಕಡೆಗಣಿಸಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಯಿತು.
ಪೊನ್ನಂಪೇಟೆ ತಾಲೂಕು ವ್ಯಾಪ್ತಿಗೆ ಬರುವ ಬಾಳೆಲೆ, ಹುದಿಕೇರಿ, ಶ್ರೀಮಂಗಲ ಹೋಬಳಿಗಳಲ್ಲಿ ಪ್ರತ್ಯೇಕ ಜನಜಾಗೃತಿ ಸಭೆ ನಡೆಸಿ ಹೋರಾಟವನ್ನು ಮತ್ತಷ್ಟು ಬಲಗೊಳಿಸುವಂತೆ ನಿರ್ಧರಿಸಲಾಯಿತು. ಪೊನ್ನಂಪೇಟೆ ವಕೀಲರ ಸಂಘದ ಪ್ರಮುಖ ಎಂ. ಟಿ. ಕಾರ್ಯಪ್ಪ ಮಾತನಾಡಿ, ಹೋರಾಟಕ್ಕೆ ವಕೀಲರ ಸಂಘ ಬೆಂಬಲ ನೀಡಲಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ತಾಲೂಕು ರಚನೆಯಾಗುವವರೆಗೂ ಹೋರಾಟದಲ್ಲಿ ಪಾಲ್ಗೊಳ್ಳಲು ಸಂಘದ ಸಭೆ ನಡೆಸಿ ನಿರ್ಧರಿಸಲಾಗುವದು ಎಂದರು.
ಸಭೆಯಲ್ಲಿ ಪ್ರಮುಖರುಗಳಾದ ಮತ್ರಂಡ ಅಪ್ಪಚ್ಚು, ಸೋಮಯ್ಯ, ಸರಾ ಚೆಂಗಪ್ಪ, ಮೂಕಳೇರ ಕುಶಾಲಪ್ಪ, ಡಾಲಿ ಚೆಂಗಪ್ಪ, ಪೆಮ್ಮಂಡ ಪೊನ್ನಪ್ಪ ಮುಂತಾದವರು ಹೋರಾಟ ನಡೆಸಲು ಸಲಹೆಗಳನ್ನು ನೀಡಿದರು.
ಈ ಸಂದರ್ಭ ಸಂಚಾಲಕ ಮಾಚಿಮಾಡ ರವೀಂದ್ರ, ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಪೂಣಚ್ಚ ಉಪಸ್ಥಿತರಿದ್ದರು.