ಭಾಗಮಂಡಲ, ಅ. 31: ಜೀವನದಿ ಕಾವೇರಿಯ ಉಗಮಕ್ಕೆ ಸಾಕ್ಷಿಯಾಗಿರುವ ಸಪ್ತರ್ಷಿ ಧಾಮದ ಖ್ಯಾತಿಯ ಬ್ರಹ್ಮಗಿರಿ ಬೆಟ್ಟವನ್ನು ಅರಣ್ಯ ಇಲಾಖೆಯು ವನ ಬೆಳೆಸುವ ನೆಪದಲ್ಲಿ ಪುಡಿಗಟ್ಟುವದರೊಂದಿಗೆ ಬೆಟ್ಟದ ತುತ್ತ ತುದಿಯಲ್ಲಿದ್ದ ಐತಿಹಾಸಿಕ ಸಪ್ತರ್ಷಿಗಳ ತಪೋ ಸ್ಥಳವನ್ನು ನಾಶಗೊಳಿಸಿರುವ ಆರೋಪ ಕೇಳಿಬಂದಿದೆ.ಕೊಡಗಿನ ಧಾರ್ಮಿಕ ಪರಂಪರೆಯಂತೆ ಈ ಬ್ರಹ್ಮಗಿರಿ ಶ್ರೇಣಿಯಲ್ಲಿ ಇಂದಿಗೂ ಸಪ್ತರ್ಷಿಗಳು ನೆಲೆಸುವದರೊಂದಿಗೆ, ನಿತ್ಯ ಬ್ರಹ್ಮಗಿರಿಯಿಂದ ಸಂಧ್ಯಾಕಾಲ ಹಾಗೂ ಮುಂಜಾವಿನ ಬ್ರಾಹ್ಮೀ ಮುಹೂರ್ತದಲ್ಲಿ ಕಾವೇರಿ ಸ್ನಾನಕ್ಕೆ ಬರುವದರೊಂದಿಗೆ ಶಾಶ್ವತ ಉಳಿದುಕೊಂಡಿದ್ದಾರೆ ಎಂಬ ನಂಬಿಕೆ ಇದೆ.ಹೀಗಾಗಿ ಈ ಬ್ರಹ್ಮಗಿರಿಯನ್ನು ಎಳೆಯರು ಅಥವಾ ತಂದೆ- ತಾಯಿ ಇರುವವರು ಏರಲೇಬಾರದೆಂದೂ, ಕೇವಲ ಪಿತೃಕಾರ್ಯ ನೆರವೇರಿಸಿದವರು ಸಪ್ತರ್ಷಿಗಳ ಅಥವಾ ಗುರು ಸ್ಮರಣೆಯೊಂದಿಗೆ ಶಿಖರವೇರಿ ಪ್ರಾರ್ಥನೆ ಸಲ್ಲಿಸುವರೆಂಬದು ಜನತೆಯು ಅನಾದಿ ಕಾಲದಿಂದ ರೂಢಿಸಿಕೊಂಡಿರುವ ನಂಬಿಕೆ.
ಅದೇ ರೀತಿ ಇಂದಿಗೂ ಕೂಡ ಕಾವೇರಿ ನಾಡಿನ ಜನತೆ, ವಿಶೇಷವಾಗಿ ತಲಕಾವೇರಿ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿವರ್ಷ ಮುಂಗಾರು ಕೃಷಿ ಆರಂಭದಲ್ಲಿ ಕುಟುಂಬವಾರು ಬ್ರಹ್ಮಗಿರಿಗೆ ಬಲಿವಾಡು ಸೇವೆಯೊಂದಿಗೆ ತೆರಳಿ ಕಾವೇರಿ ಮಾತೆ ಹಾಗೂ ಸಪ್ತರ್ಷಿಗಳ ಸಹಿತ ವರುಣ ದೇವನಿಗೆ ಪ್ರಾರ್ಥಿಸಿ, ಉತ್ತಮ ಮಳೆ ಬೆಳೆಗಾಗಿ ಅನುಗ್ರಹ ಬೇಡುತ್ತಾರೆ. ಅನಂತರದಲ್ಲಿ ತುಲಾ ಸಂಕ್ರಮಣ ಜಾತ್ರೆಯ ಸಂದರ್ಭ ಕಾವೇರಿ ಮಾತೆಯ ಆರಾಧನೆಯೊಂದಿಗೆ ಮತ್ತೊಮ್ಮೆ ಕುಟುಂಬವಾರು ಬ್ರಹ್ಮಗಿರಿ ಏರಿ ಅಲ್ಲಿ ಪ್ರಾರ್ಥಿಸುವದರೊಂದಿಗೆ, ವರುಣ ಶಾಂತಗೊಂಡು ಜನಕೋಟಿಯನ್ನು ಉದ್ಧರಿಸುವಂತೆ ಬೇಡಿಕೊಂಡು ಬರುತ್ತಿದ್ದಾರೆ.
ಆ ಮಾತ್ರದಿಂದಲೇ ಬ್ರಹ್ಮಗಿರಿ ಬೆಟ್ಟಸಾಲಿನ ಉದ್ದಗಲಕ್ಕೂ ಗ್ರಾಮ ವಾಸಿಗಳ ಸಾವಿರಾರು ದನಗಳು ನಿತ್ಯ ಮೇಯುವದರೊಂದಿಗೆ ಸಗಣಿ, ಗಂಜಳ ಹಾಕುವ ಮೂಲಕ ವನ ಸಂಪತ್ತು ಸಮೃದ್ಧಿಗೊಂಡು ಜೀವ ಸಂಕುಲದೊಂದಿಗೆ ಇಡೀ ಪರಿಸರ ಪಾವಿತ್ರ್ಯ ಕಂಡುಕೊಳ್ಳುತ್ತಿದ್ದುದಾಗಿ ಗ್ರಾಮಸ್ಥರು ನಂಬಿಕೊಂಡು ಬಂದಿದ್ದಾರೆ.
ಇಲಾಖೆಯೇ ಮುಳುವು: ಪ್ರಸಕ್ತ ಇಡೀ ಬ್ರಹ್ಮಗಿರಿ ತಾಣ ಬದಲಾಗಿದ್ದು, ಯಾವ ಪರಿಸರ ಹಾಗೂ ಪ್ರಕೃತಿಯನ್ನು ರಕ್ಷಿಸಬೇಕಾದ ಕರ್ತವ್ಯ ಮಾಡಬೇಕಾಗಿದೆಯೋ ಅದೇ ಅರಣ್ಯ ಇಲಾಖೆ ಈ
(ಮೊದಲ ಪುಟದಿಂದ) ದೈವಿಕ ಪರಿಸರಕ್ಕೆ ಮುಳುವಾಗಿ ಗಿರಿ ಸೌಂದರ್ಯದ ನಾಶಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಗೊಂಡಿದೆ.
ಗ್ರಾಮಸ್ಥರ ಪ್ರಕಾರ ಬ್ರಹ್ಮಗಿರಿ ಶ್ರೇಣಿಯಲ್ಲಿ ಗಿಡಗಳನ್ನು ಬೆಳೆಸುವ ನೆಪದಲ್ಲಿ ಇಲಾಖೆಯ ಮಂದಿ ಸರಕಾರದ ಹಣ ಲೂಟಿಯೊಂದಿಗೆ ಜೆ.ಸಿ.ಬಿ. ಯಂತ್ರ ಬಳಸಿಕೊಂಡು ಬೆಟ್ಟಗಳನ್ನು ಕೊರೆದು ರಸ್ತೆಗಳನ್ನು ನಿರ್ಮಿಸಿ, ಬ್ರಹ್ಮಗಿರಿ ಶಿಖರದ ತುತ್ತ ತುದಿಯ ಸಪ್ತರ್ಷಿ ನೆಲೆಯ ಕುರುಹು ಸಿಗದಂತೆ ನಾಶಮಾಡಿ ಬಿಟ್ಟಿದೆ ಎಂಬ ಆಕ್ರೋಶ ವ್ಯಕ್ತಗೊಂಡಿದೆ.
ಹಿಂದೆ ತುಲಾ ಸಂಕ್ರಮಣ ಜಾತ್ರೆ ಬಳಿಕ ಬ್ರಹ್ಮಗಿರಿಗೆ ತೆರಳುತ್ತಿದ್ದ ಹಿರಿಯರು, ಅಲ್ಲಿ ಸಪ್ತರ್ಷಿಗಳ ಕುರುಹುವಿನ ಪವಿತ್ರ ಕುಂಡಿಕೆಗಳ ತೀರ್ಥ ಪ್ರೋಕ್ಷಣೆ ಮಾಡಿಕೊಂಡು ಅದನ್ನು ಸೇವಿಸುತ್ತಿದ್ದುದಾಗಿಯೂ, ಪ್ರಸಕ್ತ ಅಂತಹ ಯಾವ ಕುರುಹು ಇಲ್ಲದಂತೆ ಅರಣ್ಯ ಇಲಾಖೆ ಹಾಳುಗೆಡವಿದೆ ಎಂದು ‘ಶಕ್ತಿ’ಯೊಂದಿಗೆ ಕುದುಕುಳಿ ಭರತ್ ಕುಮಾರ್, ಕಾಳನ ರವಿ, ಕುದುಪಜೆ ಪುರುಷೋತ್ತಮ ಮೊದಲಾದವರು ಆರೋಪಿಸಿದ್ದಾರೆ.
ದೈವವನ ನಿರ್ಮಾಣ: ಅರಣ್ಯ ಇಲಾಖೆಯ ಮೂಲಗಳ ಪ್ರಕಾರ ಕಳೆದ ವರ್ಷಗಳಲ್ಲಿ ಬ್ರಹ್ಮಗಿರಿಯಲ್ಲಿ, ಇಲಾಖೆಯು ಸುಮಾರು 15 ಎಕರೆ ಪ್ರದೇಶದಲ್ಲಿ ಗಿಡಗಳನ್ನು ಬೆಳೆಸುವದರೊಂದಿಗೆ ಮಳೆ ನೀರಿನ ಇಂಗು ಗುಂಡಿಗಳನ್ನು ನಿರ್ಮಿಸಿದೆಯಂತೆ. ಈ ಬಾಬ್ತು ಖರ್ಚು ಮಾಡಿದ ಹಣವೆಷ್ಟು ಅಥವಾ ಸರಕಾರ ಬಿಡುಗಡೆಗೊಳಿಸಿದ ಅನುದಾನವೆಷ್ಟು? ಎಂಬ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಗ್ರಾಮಸ್ಥರ ಆರೋಪ ಮೇರೆಗೆ ‘ಶಕ್ತಿ’ ಬ್ರಹ್ಮಗಿರಿ ಶಿಖರದಲ್ಲಿ ಸಪ್ತರ್ಷಿ ನೆಲೆ ಬಗ್ಗೆ ವೀಕ್ಷಣೆ ಮಾಡಿದಾಗ ಹಿಂದಿನ ಹಿರಿಯರು ತೋರಿಸಿಕೊಟ್ಟಿದ್ದ ಅಂತಹ ಯಾವ ಕುರುಹುಗಳು ಗೋಚರಿಸದೆ ಕಲ್ಲು ಮಣ್ಣು ಹರಡಿರುವ ಚಿತ್ರಣ ಎದುರಾಯಿತು. ಬಹುತೇಕ ಶ್ರೀ ಅಗಸ್ತ್ಯೇಶ್ವರ ದೇವಾಲಯ ಪರಿಸರದ ಆಸುಪಾಸಿನಲ್ಲಿಯೂ ಅರಣ್ಯ ಇಲಾಖೆಯ ದೈವೀವನ ಯೋಜನೆ ವಿಸ್ತಾರಗೊಂಡು ಅಲ್ಲಲ್ಲಿ ದನಗಳು ಮೇಯದಂತೆ ತಡೆಬೇಲಿ ನಿರ್ಮಿಸಿರುವದು ಗೋಚರಿಸಿತು. ಹೀಗಾಗಿ ಹಿರಿಯರ ಶ್ರದ್ಧೆಯ ಪವಿತ್ರ ಸಪ್ತರ್ಷಿ ತಾಣ ಸಹಿತ ಬ್ರಹ್ಮಗಿರಿ ಬೆಟ್ಟವನ್ನೇ ಅಭಿವೃದ್ಧಿಯ ನೆಪದಲ್ಲಿ ಪುಡಿಗಟ್ಟಿರುವಂತೆ ಭಾಸವಾಯಿತು.
ತನಿಖೆಗೆ ಆಗ್ರಹ: ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು, ಬ್ರಹ್ಮಗಿರಿಯಲ್ಲಿ ಕೊಡಗಿನ ಪೂರ್ವಜರು ನಂಬಿಕೊಂಡು ಬಂದಿರುವ ಕುರುಹುಗಳ ನಾಶಕ್ಕೆ ಕಾರಣರಾಗಿರುವ ಅರಣ್ಯ ಇಲಾಖೆ ವಿರುದ್ಧ ತನಿಖೆಗೆ ಆಗ್ರಹಿಸಿದ್ದಾರೆ. ಅಲ್ಲದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕೊಡಗಿನ ಕುಲಮಾತೆ ಶ್ರೀ ಕಾವೇರಿಯ ಉಗಮಸ್ಥಳ ತಲಕಾವೇರಿಗೆ ರಕ್ಷಾ ಕವಚದಂತಿರುವ ಸಪ್ತರ್ಷಿ ನೆಲೆ ಬ್ರಹ್ಮಗಿರಿಯಲ್ಲಿ ಜೆ.ಸಿ.ಬಿ. ಯಂತ್ರ ಬಳಕೆಯೊಂದಿಗೆ ಮನಸೋ ಇಚ್ಛೆ ಹಾಳುಗೆಡವಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಜರುಗಿಸುವಂತೆ ಸಂಬಂಧಪಟ್ಟವರನ್ನು ಆಗ್ರಹಪಡಿಸಿದ್ದಾರೆ.