ಸೋಮವಾರಪೇಟೆ, ಅ. 31: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ತಾ. 1 ರಂದು (ಇಂದು) 11ನೇ ವರ್ಷದ ಅದ್ಧೂರಿ ಕನ್ನಡ ರಾಜ್ಯೋತ್ಸವ ಸಮಾರಂಭ ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 7.30 ಗಂಟೆಗೆ ಆಟೋ ನಿಲ್ದಾಣದಲ್ಲಿ ಧ್ವಜಾರೋಹಣ, 8 ಗಂಟೆಗೆ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು ವಿತರಣೆ, 9 ಗಂಟೆಗೆ ಕಕ್ಕೆಹೊಳೆ ಜಂಕ್ಷನ್‍ನಿಂದ ಡೊಳ್ಳು ಕುಣಿತದೊಂದಿಗೆ ಆಟೋಗಳ ಮೆರವಣಿಗೆ ಮತ್ತು ಪಟ್ಟಣದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ನಡೆಯಲಿದೆ. ಪೂರ್ವಾಹ್ನ 10.30ಕ್ಕೆ ಸಭಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಬಿ.ಎ. ಜೀವಿಜಯ, ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಕೆ.ಪಿ. ಚಂದ್ರಕಲಾ, ಎಂಬೆಸ್ಸಿ ಗ್ರೂಪ್ ಉಪಾಧ್ಯಕ್ಷ ಹರಪಳ್ಳಿ ರವೀಂದ್ರ, ಡಿವೈಎಸ್‍ಪಿ ಸಂಪತ್‍ಕುಮಾರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಮೋಹನ್ ತಿಳಿಸಿದ್ದಾರೆ.
11.30ಕ್ಕೆ ಶಾಲಾ ಮಕ್ಕಳಿಗೆ ಕುಣಿಯೋಣು ಬಾರಾ ಡ್ಯಾನ್ಸ್ ಡ್ಯಾನ್ಸ್ ಸ್ಪರ್ಧೆ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನದಾನ ಆಯೋಜಿಸಲಾಗಿದೆ. ಸಂಜೆ 6 ಗಂಟೆಗೆ ಕನ್ನಡ ರಾಜ್ಯೋತ್ಸವ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮೋಹನ್ ವಹಿಸಲಿದ್ದಾರೆ. ಐಎನ್‍ಟಿಯುಸಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಕಾರ್ಯದರ್ಶಿ ನಾಪಂಡ ಮುದ್ದಪ್ಪ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಸಂಘದ ಸದಸ್ಯರಿಗೆ ಸಮವಸ್ತ್ರ ನೀಡಿರುವ ಉದ್ಯಮಿ ಆರ್. ಮಲ್ಲೇಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಅಂಗವಾಗಿ ಕನ್ನಡ ನಾಡು, ನುಡಿ, ನೆಲ ಜಲ ಭಾಷೆಗೆ ಸಂಬಂಧಿಸಿದಂತೆ ಅಲಂಕೃತ ಆಟೋಗಳಿಗೆ ಬಹುಮಾನ ನೀಡಲಾಗುವದು. ನಂತರ ಉದಯ ಟಿ.ವಿ. ರೂಪೇಶ್ ಅವರ ಜಾಲಿಬಾಯ್ಸ್ ತಂಡದಿಂದ ಸಂಗೀತ ರಸಮಂಜರಿ, ಝೀ ಕನ್ನಡ ಸರಿಗಮಪ ಖ್ಯಾತಿಯ ಅಂಧ ಗಾಯಕ ಮೆಹಬೂಬ್ ಖಾನ್, ಜ್ಯೂನಿಯರ್ ಕಲಾವಿದರು ಆಗಮಿಸಲಿದ್ದಾರೆ ಎಂದು ಮೋಹನ್ ತಿಳಿಸಿದರು.
ಸಮಾರಂಭದಲ್ಲಿ ಸಂಘದ ಸದಸ್ಯರಾದ ಬಜೆಗುಂಡಿ ಗ್ರಾಮದ ಬಿ.ಪಿ. ಗಣೇಶ್, ಮಾಜಿ ಸೈನಿಕ ಕೆ.ಜಿ. ಬಸಪ್ಪ, ಸಾಮಾಜಿಕ ಸೇವೆಗಾಗಿ ಕೆ. ಪ್ರಕಾಶ್, ಕ್ರೀಡಾಕ್ಷೇತ್ರದಲ್ಲಿ ಕೆ.ಎಂ. ರತನ್ ಮಹೇಶ್ ಅವರುಗಳನ್ನು ಸನ್ಮಾನಿಸಲಾಗುವದು ಎಂದು ಮಾಹಿತಿ ನೀಡಿದರು. ರಾಜ್ಯೋತ್ಸವ ಅಂಗವಾಗಿ ಪಟ್ಟಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದ್ದು, ಖಾಸಗಿ ಬಸ್ ನಿಲ್ದಾಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ.
ಇದರೊಂದಿಗೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ರಾಜ್ಯೋತ್ಸವ ಸಮಾರಂಭ ನಡೆಯಲಿದೆ. ತಹಶೀಲ್ದಾರ್ ಮಹೇಶ್ ಅವರು ಧ್ವಜಾರೋಹಣ ಮಾಡಲಿದ್ದು, ಶಾಸಕ ರಂಜನ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಹಾಕಿ ತರಬೇತುದಾರರಾದ ಎಂ.ಕೆ. ದೇವರಾಜಮ್ಮ ಮತ್ತು ರಾಷ್ಟ್ರೀಯ ಬೇಸ್‍ಬಾಲ್ ಆಟಗಾರ್ತಿ ಭವ್ಯ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವದು ಎಂದು ಪ್ರಕಟಣೆ ತಿಳಿಸಿದೆ.