ಕುಶಾಲನಗರ, ಅ. 31: ಶಿರಂಗಾಲದಲ್ಲಿ ಮರಳು ದಂಧೆ ಪ್ರಕರಣದಲ್ಲಿ ಬೆದರಿಸಿ ಹಣ ವಸೂಲಿ ಮಾಡಿದ ಘಟನೆಯಲ್ಲಿ ಮಡಿಕೇರಿಯ ಮೂವರು ಪತ್ರಕರ್ತರ ಮೇಲೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಡಿಕೇರಿ ಪತ್ರಕರ್ತರಾದ ನಾಸಿರ್, ಸುರ್ಜಿತ್ ಹಾಗೂ ಕುಶಾಲನಗರ ಪತ್ರಕರ್ತ ಷಂಶುದ್ದೀನ್ ಮೂವರ ಮೇಲೆ ಶಿರಂಗಾಲದ ಅಂಬೇಡ್ಕರ್ ಕಾಲನಿಯ ಕಿರಣ್ ಎಂಬಾತ ನೀಡಿದ ದೂರಿನ ಹಿನ್ನೆಲೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಡಿವೈಎಸ್ಪಿ ಸಂಪತ್‍ಕುಮಾರ್ ತಿಳಿಸಿದ್ದಾರೆ.

ಪ್ರಕರಣದ ವಿವರ: ದಿನಾಂಕ 26 ರಂದು ತಡರಾತ್ರಿಯಲ್ಲಿ ಕೆಎ.41.ಎಂ.0523 ಝೆನ್ ಕಾರಿನಲ್ಲಿ ಬಂದ ಮೂವರು ಶಿರಂಗಾಲ ದೇವಾಲಯ ಬಳಿ ತಾವು ಪತ್ರಕರ್ತರೆಂದು ಅಲ್ಲಿ ಮರಳು ತುಂಬಿಸುತ್ತಿದ್ದ ವ್ಯಕ್ತಿಗಳೊಂದಿಗೆ ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭ ವೀಡಿಯೋ ಚಿತ್ರೀಕರಣ ಮಾಡಲು ತೊಡಗಿದ ಸಂದರ್ಭ ಸ್ಥಳದಲ್ಲಿದ್ದ ಹಲವರು ಪರಾರಿಯಾಗಿದ್ದು, ನಂತರ ಗಿರೀಶ್ ಎಂಬಾತನನ್ನು ಕಾರಿನಲ್ಲಿ ಕೂರಿಸಿ ಕಡುವಿನ ಹೊಸಳ್ಳಿ ಕಡೆಗೆ ಕರೆದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ 27 ರ ಬೆಳಗಿನ ಜಾವ 3.15 ಕ್ಕೆ ವಾಪಾಸ್ ಶಿರಂಗಾಲ ಪೆಟ್ರೋಲ್ ಬಂಕ್ ಬಳಿ ಬಂದು ಗಿರೀಶ್ ಸಂಗಡಿಗರನ್ನು ಸ್ಥಳಕ್ಕೆ ಕರೆಸಿ ಎಲ್ಲಾ ಮೊಬೈಲ್‍ಗಳನ್ನು ಆಫ್ ಮಾಡಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದು ರೂ. 1 ಲಕ್ಷ ನೀಡುವಂತೆ ಒತ್ತಾಯಿಸಿದ್ದಾರೆ. ಆ ಸಂದರ್ಭ 10 ಸಾವಿರ ರುಗಳನ್ನು ತಾವುಗಳು ನೀಡಿದ್ದೇವೆ ಎಂದು ಕಿರಣ್ ದೂರಿನಲ್ಲಿ ತಿಳಿಸಿದ್ದಾರೆ. ಮರುದಿನ ಮಡಿಕೇರಿಯಿಂದ ಸ್ಥಳೀಯ ದೂರವಾಣಿ ಮೂಲಕ ಉಳಿದ ಹಣ ನೀಡುವಂತೆ ಕರೆ ಮಾಡಿದ್ದು ಕುಶಾಲನಗರ ಪ್ರವಾಸಿ ಮಂದಿರ ಬಳಿ ತಲುಪಿಸುವಂತೆ ತಿಳಿಸಿದ್ದರು. ಆದರೆ ಈ ಸಂದರ್ಭ ಅವರು ಸ್ಥಳದಲ್ಲಿ ಇರಲಿಲ್ಲ. ನಂತರ ಠಾಣೆಗೆ ಬಂದಿರುವದಾಗಿ ಕಿರಣ್ ದೂರು ನೀಡಿದ ಕಾರಣ ಐಪಿಸಿ 384 ಪ್ರಕಾರ ಮೊಕದ್ದಮೆ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಘಟನೆಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಕಲೆ ಹಾಕಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.