ಗೋಣಿಕೊಪ್ಪಲು, ಅ. 31: ಸತತ 4 ಬಾರಿ ಫೈನಲ್‍ಗೆ ಪ್ರವೇಶ ಪಡೆಯುವ ಮೂಲಕ ಹಾತೂರು ಸ್ಪೋಟ್ರ್ಸ್ ಕ್ಲಬ್ ತಂಡವು ದಾಖಲೆ ಸೃಷ್ಟಿಸಿದೆ. ತಾ. 1 ರಂದು (ಇಂದು) ನಡೆಯುವ ಅಂತಿಮ ಹಣಾಹಣಿಯಲ್ಲಿ ಬೇಗೂರು ತಂಡವನ್ನು ಎದುರಿಸುವ ಮೂಲಕ ಚಾಂಪಿಯನ್ ಪಟ್ಟ ಉಳಿಸಿಕೊಳ್ಳು ವದೇ ಎಂಬ ಪ್ರಶ್ನೆ ಕ್ರೀಡಾಭಿಮಾನಿ ಗಳಲ್ಲಿ ಮೂಡುವಂತಾಗಿದೆ.

ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಎ. ಡಿವಿಜನ್ ಹಾಕಿ ಲೀಗ್‍ನ ಸೆಮಿಫೈನಲ್‍ನಲ್ಲಿ ಚಾಂಪಿಯನ್ ಹಾತೂರು ಸ್ಪೋಟ್ರ್ಸ್ ಕ್ಲಬ್ ಹಾಗೂ ಬೇಗೂರು ತಂಡಗಳು ಫೈನಲ್‍ಗೆ ಪ್ರವೇಶ ಪಡೆದಿವೆ. ಟೂರ್ನಿಯಲ್ಲಿ ಗೆಲುವಿನಲ್ಲೇ ತೇಲುತ್ತಾ ಸಾಗಿದ್ದ ಮಡಿಕೇರಿ ಚಾರ್ಮರ್ಸ್ ಹಾಗೂ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಸೋಲನುಭವಿಸಿ ಟೂರ್ನಿಯಿಂದ ಹೊರ ಬಿದ್ದಿವೆ.

ಬೇಗೂರು ತಂಡವು ಮಡಿಕೇರಿ ಚಾರ್ಮರ್ಸ್ ವಿರುದ್ಧ ಶೂಟೌಟ್‍ನಲ್ಲಿ 5-2 ಗೋಲುಗಳಿಂದ ಗೆಲುವು ಪಡೆಯಿತು. ಶೂಟೌಟ್‍ನಲ್ಲಿ ಬೇಗೂರು ಪರ ದೀಪಕ್, ವರುಣ್, ಮಿಲನ್ ತಲಾ ಒಂದೊಂದು ಗೋಲು ಹೊಡೆದು ಗೆಲುವಿನ ರೂವಾರಿಯಾ ದರು. ಪಂದ್ಯದ ಅವಧಿಯಲ್ಲಿ ಬೇಗೂರು ಪರ 8 ನೇ ನಿಮಿಷದಲ್ಲಿ ಮಣಿ, 52 ನೇ ನಿಮಿಷದಲ್ಲಿ ಅಯ್ಯಮ್ಮ, ಚಾರ್ಮರ್ಸ್ ಪರ 42 ರಲ್ಲಿ ಸುಬ್ಬಯ್ಯ, 48 ರಲ್ಲಿ ಕೀರ್ತಿ ತಲಾ ಒಂದೊಂದು ಗೋಲು ಹೊಡೆದರು.

ಹಾತೂರು ತಂಡವು ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡದ ವಿರುದ್ಧ 1-0 ಗೋಲುಗಳ ಅಂತರದಿಂದ ಜಯ ಸಾಧಿಸಿತು. ಹಾತೂರು ತಂಡದ ಪರ 17 ನಿಮಿಷದಲ್ಲಿ ಗಣಪತಿ ಅವರ 1 ಗೋಲು ನಿರ್ಣಾಯಕ ಪಾತ್ರವಹಿಸಿತು.