ಒಂದು ಕಾಲದಲ್ಲಿ ನದಿಗಳು ವರ್ಷ ಪೂರ್ತಿ ಹರಿಯುವದರ ಜೊತೆಗೆ ನದಿಯ ಎರಡು ಬದಿಯಲ್ಲಿ ಅಲ್ಲಲ್ಲಿ ಸಣ್ಣಸಣ್ಣ ಗುಡ್ಡಗಳಂತೆ ಮರಳು ರಾಶಿಗಳು ಕಾಣುತ್ತಿತ್ತು. ಮರಳು ರಾಶಿಯ ಮೇಲೆ ಓಡುವಾಗ ಆಗುವ ಅನುಭವವೇ ಬೇರೆ. ನಾವುಗಳು ಹುಡುಗರಾಗಿದ್ದಾಗ ರಜೆಯ ದಿನಗಳಲ್ಲಿ ಅಂದರೆ ಬೇಸಿಗೆಯಲ್ಲಿ ಮಧ್ಯಾಹ್ನ ಹೊಳೆಯಲ್ಲಿ ಈಜಿ ಅಲ್ಲಲ್ಲಿ ಇರುವ ರಾಶಿಗಳ ಮೇಲೆ ಎದ್ದುಬಿದ್ದು ಆಡುವದೇ ಒಂದು ಸಂಭ್ರ್ರಮವಾಗಿತ್ತು. ಕೈಯಲ್ಲಿ ಮರಳನ್ನು ತೋಡಿದರೆ ನೀರು ಬರುತ್ತಿತ್ತು. ಹೊಳೆಯಲ್ಲಿ ಮುಳುಗಿದಾಗ ತಳಪಾಯದಲ್ಲಿ ಮರಳು ನೀರಿನಲ್ಲಿ ಅಕ್ಕಿಯನ್ನು ತೊಳೆದು ಬಿಸಿಲಿನಲ್ಲಿ ಒಣಗಲು ಹಾಕಿದಂತೆ ಕಾಣುತಿತ್ತು. ಹೊಳೆಯ ಯಾವ ಬದಿಯಲ್ಲಾದರೂ ಬೇಕಾದಷ್ಟು ಪ್ರಮಾಣದಲ್ಲಿ ಶುದ್ಧ ಮರಳು ದೊರೆಯುತಿತ್ತು.
ಆದರೆ ಕೆಲವು ವರ್ಷದಿಂದ ಮರಳಿನ ಬೇಡಿಕೆ ಆಕಾಶ ಮಟ್ಟಕ್ಕೆ ಏರಿ ದಿನದಿಂದ ದಿನಕೆÀ್ಕ ಬೇಡಿಕೆ ಜಾಸ್ತಿಯಾದಂತೆ ಹೊಳೆಯ ಬದಿಯಲ್ಲಿ ರಾಶಿರಾಶಿ ಬಿದ್ದಿದ್ದ ಮರಳು ಹಗಲು-ರಾತ್ರಿ ಎನ್ನದೆ ಖಾಲಿಯಾಗಲು ಆರಂಭವಾಯಿತು. ವರ್ಷ ವರ್ಷ ಮಳೆಗಾಲದಲ್ಲಿ ಬರುತ್ತಿದ್ದ ಮರಳನ್ನು ಮಳೆ ಕಡಿಮೆಯಾದ ಕೂಡಲೇ ಪತ್ತೆಮಾಡಿ ಅವಸರ ಅವಸರವಾಗಿ ಸಾಗಿಸಿ ಅಲ್ಲಲ್ಲಿ ಶೇಖರಣೆ ಮಾಡುತ್ತಿದ್ದು, ಇದನ್ನು ಮರಳು ದಂಧೆಯಾಗಿ ಪರಿಗಣಿಸಲಾಯಿತು. ಹಾಗೆ ದಿನದಿಂದ ದಿನಕ್ಕೆ ಮರಳಿನ ಬೆಲೆ ಜಾಸ್ತಿಯಾಗುತ್ತಾ ಹೋಯಿತು.
ಆ ಸಮಯದಲ್ಲಿ ಮರಳಿಗಾಗಿ ವಿಪರೀತ ಗಲಾಟೆ ಆರಂಭವಾಯಿತು. ಇದಕ್ಕಾಗಿ ಮರಳು ಸಾಗಿಸುವ ಕೆಲಸದಲ್ಲಿ ಗುಂಪುಗಳನ್ನು ಕಟ್ಟಿಕೊಂಡು, ಇತಿಮಿತಿಯಿಲ್ಲದೆ ಹೊಳೆಯ ದಂಡೆಯಲ್ಲಿರುವ ಮರಳನ್ನು ಸಾಗಿಸುವ ಜೊತೆಗೆ ಹೊಳೆಯ ಮಧ್ಯದಲ್ಲಿರುವ ಮರಳನ್ನು ತೆಪ್ಪದ ಸಹಾಯದಿಂದ ನೀರಿನಿಂದ ಹೊರಗೆ ತೆಗೆದು ದಡಕ್ಕೆ ಸಾಗಿಸಿ ಲಾರಿ, ಪಿಕಪ್ಗಳಲ್ಲಿ ಸಾಗಿಸಿ ಹಣ ಸಂಪಾದನೆ ಮಾಡಲು ಹಿಂದು-ಮುಂದು ನೋಡದೆ ತೊಡಗಿಸಿಕೊಂಡರು. ಹಣ ಮಾಡುವ ಏಕೈಕ ಉದ್ದೇಶದಿಂದ ಹೊಳೆಯ ದಡಕ್ಕೆ ಜೆ.ಸಿ.ಬಿ. ಹಾಗೂ ಇತರ ಯಂತ್ರೋಪಕರಣಗಳನ್ನು ಬಳಸಿ ಅಡ್ಡರಸ್ತೆ ಮಾಡಿಕೊಂಡು ಕಣ್ಣು ಮುಚ್ಚಿಕೊಂಡು ನೋಡುತ್ತಿದ್ದ ಸರ್ಕಾರ, ಕೆಲವು ಸಂಘಟನೆಗಳು ದಿನಪತ್ರಿಕೆಗಳಲ್ಲಿ ಮತ್ತು ಮಾಧ್ಯಮದಲ್ಲಿ ಬಿಂಬಿಸಿದಾಗ ಕಣ್ಣು ತೆರೆದು ನಂತರ ಸಂಬಂಧಪಟ್ಟ ಇಲಾಖೆಗಳಿಗೆ ಕ್ರಮಬದ್ಧವಾಗಿ ಮರಳನ್ನು ಶೇಖರಿಸಿ ಸಾಗಿಸಲು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳ್ಳ ಬೇಕೆಂದು ತಿಳಿಸಿದ ಮೇಲೆ ಇಲಾಖೆಯ ಮೇಲಾಧಿಕಾರಿಗಳು ರಾಜಕಾರಣಿಗಳ ಜೊತೆಯಲ್ಲಿ ಸಭೆಯನ್ನು ನಡೆಸಿ ಮಾರ್ಗಸೂಚಿ ಯನ್ನು ರಚಿಸಿದರು. ಆದರೆ ಇದಕ್ಕೆ ಮರಳು ದಂಧÉಯವರು ಕಿಂಚಿತ್ತೂ ಬೆಲೆಕೊಡದೆ ಅಲ್ಲಲ್ಲಿರುವ ಸಂಬಂಧ ಪಟ್ಟ ಸಿಬ್ಬಂದಿಯವರಿಗೆ ಮಾಮೂಲು ಮಾಡಿಕೊಂಡು ಮರಳು ಸಾಗಿಸುವದು ಇನ್ನೂ ಕಡಿಮೆಯಾಗಿಲ್ಲ. ಬೆಲೆಯು ಏರುತ್ತಾ ಹೋಗುವದರಿಂದ ಕಳ್ಳ ಸಾಗಾಣಿಕೆ ನಿಲ್ಲಿಸುವದು ಇವತ್ತಿನವರೆಗೂ ಸಾಧ್ಯವಾಗುತ್ತಿಲ್ಲ.
ಇದರಿಂದ ಇವತ್ತು ಎಲ್ಲಿ ಹೊಳೆಯ ಬದಿಗೆ ಹೋದರು ಅಲ್ಲಲ್ಲಿ ತೆಪ್ಪದಿಂದ ಮರಳು ಎತ್ತುವವರನ್ನು ಕಾಣಬಹುದು. ಲೈಸನ್ಸ್ ಇಲಾಖೆಯಿಂದ ಪಡೆದರೂ ನಿಯಮದಂತೆ ಮರಳು ಸಂಗ್ರಹಿಸುವದಾಗಲಿ ಸಾಗಿಸುವದಾಗಲಿ ಇಲ್ಲವೇ ಇಲ್ಲ.
ಇದರಿಂದ ಪರಿಸರಕ್ಕೆ ಎಷ್ಟು ಧಕ್ಕೆಯಾಗುತ್ತದೆ ಎಂಬದನ್ನು ಯಾರು ಪರಿಗಣಿಸುವದಿಲ್ಲ. ಇಲಾಖೆಯವರು ಎಷ್ಟೇ ಕಾನೂನು ಕ್ರಮ ಅಥವಾ ಇದನ್ನು ತಡೆಯುವವರನ್ನು ಕಂಡರೆ ಕೊಲೆ ಮಾಡುವದಕ್ಕೂ ಹೇಸದ ಪ್ರಕರಣಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ನದಿಯು ಈಗಾಗಲೇ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಅಂಗವಿಕಲರಂತೆ ಕಾಣಿಸುತ್ತದೆ. ವರ್ಷದ ಪೂರ್ತಿ ದಿನಗಳಲ್ಲಿ ಹೊಳೆಯನ್ನು ಹಿಂಡಿ ಮರಳನ್ನು ತೆಗೆದು ನದಿಯ ಹೊಟ್ಟೆಯನ್ನು ಬರಿದು ಮಾಡಿ ನದಿಯ ಸೌಂದರ್ಯವನ್ನು ಹಾಳು ಮಾಡುವದಲ್ಲದೇ ಜೀವನದಿಯನ್ನು ಕೊಲ್ಲುವಂತಾಗಿದೆ.
ಕೊಡಗಿನಲ್ಲಿ ಹೊರಗಡೆಯ ಜನರು ಇಲ್ಲಿ ಸ್ಥಳವನ್ನು ಖರೀದಿಸಿ ಅಲ್ಲಿ ವಾಣಿಜ್ಯ ಕಟ್ಟಡಗಳನ್ನು ಕಟ್ಟಿಸಿ ಅದರಲ್ಲಿ ದೊಡ್ಡದೊಡ್ಡ ಹೋಂಸ್ಟೇ ಗಳನ್ನು ನಿರ್ಮಿಸಿ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡಲು ತೊಡಗಿರುವದೇ ಇದಕ್ಕೆ ಕಾರಣ. ಕೊಡಗಿನ ಯಾವ ಮೂಲೆಯಲ್ಲಿ ಬೇಕಾದರೂ ಜಾಗವನ್ನು ಖರೀದಿಸಿ ಆ ಮೂಲಕ ಮರಳು ದಂಧೆಗೆ ಪ್ರವಾಸೋದ್ಯಮವನ್ನು ವಿಪರೀತ ಬೆಳೆಸಿರುವದೇ ಮರಳು ದಂಧೆಗೆ ಕಾರಣವಾಯಿತು.
ಹೊಳೆಯಲ್ಲಿ ಮರಳು ದಂಧೆ ನಡೆಯುತ್ತಾ ಹೋದರೆ ಕ್ರಮೇಣ ನದಿಗಳಲ್ಲಿ ನೀರಿನ ಕೊರತೆಯಾಗಿ ಕೊಡಗಿನಲ್ಲಿ ನೀರಿನ ಸಮಸ್ಯೆ ಹಾಗೂ ಕೊಡಗಿನಲ್ಲಿ ಬೆಳೆಯುವ ವಾಣಿಜ್ಯ ಬೆಳೆಗಳಿಗೆ ಧಕ್ಕೆಯಾಗುವದರಲ್ಲಿ ಯಾವ ಸಂದೇಹವೂ ಇಲ್ಲ. ಇದಕ್ಕೆ ಕಡಿ ವಾಣ ಹಾಕದಿದ್ದರೆ ಮುಂಬರುವ ದಿವಸಗಳಲ್ಲಿ ಬಾರಿ ಅನಾಹುತಗಳಿಗೆ ದಾರಿ ಆಗಬಹುದು.
- ಪಾಡೆಯಂಡ ಜಿ. ಮುತ್ತಪ್ಪ, ಮೂರ್ನಾಡು