ಗೋಣಿಕೊಪ್ಪಲು, ಅ. 31: ಕೊಡವ ಸಮುದಾಯದ ಸಮಗ್ರ ಅಸ್ತಿತ್ವ ಮತ್ತು ಅದರ ಸಾಂಸ್ಕøತಿಕ, ಪಾರಂಪರಿಕ ಹಾಗೂ ಸಾಮಾಜಿಕ ಹಿನ್ನೆಲೆಯೊಂದಿಗೆ ಸಂರಕ್ಷಿಸುವ ಆವಶ್ಯಕತೆಯ ಕುರಿತು ಯುನೈಟೆಡ್ ಕೊಡವ ಆರ್ಗನೈಶೇಷನ್ ಸಂಘಟನೆಯ ಪದಾಧಿಕಾರಿಗಳು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆವರನ್ನು ಭೇಟಿಮಾಡಿ ಮನವಿ ಸಲ್ಲಿಸಿದರು.
ಪ್ರಸ್ತುತ ಸನ್ನಿವೇಶದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಒತ್ತಡಗಳಿಂದ ಅಲ್ಪಸಂಖ್ಯಾತರಾಗಿರುವ ಕೊಡವರ ಅಸ್ತಿತ್ವವು ತನ್ನ ಮೂಲ ನೆಲೆಯಲ್ಲೇ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ. ಇದನ್ನು ಉಳಿಸಿ ಬೆಳೆಸಬೇಕಾದರೆ ಜನಾಂಗದ ಸಂಸ್ಕøತಿ, ಪರಂಪರೆ ಹಾಗೂ ಆಚರಣೆಗಳು ತನ್ನ ಮೂಲ ವೈಭವದೊಂದಿಗೆ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಬೇಕಾಗಿದೆ. ಇದರಿಂದ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ತನ್ನ ಮೂಲ ಸ್ವರೂಪದೊಂದಿಗೆ ಹಸ್ತಾಂತರಿಸಲು ಸಾಧ್ಯವಿರುವ ಬಗ್ಗೆ ಅವರಲ್ಲಿ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮನವಿ ಮಾಡಿಕೊಂಡರು.
ನಿಯೋಗದಲ್ಲಿ ಯೂಕೋ ಸದಸ್ಯರುಗಳಾದ ಕಳ್ಳಿಚಂಡ ರಾಬಿನ್, ನೆಲ್ಲಮಕ್ಕಡ ಮಾದಯ್ಯ. ಉಳುವಂಗಡ ಲೋಹಿತ್ ಭೀಮಯ್ಯ, ಅರೆಯಡ ಲೋಕೇಶ್, ಗುಡಿಯಂಗಡ ಬೋಪಣ್ಣ, ಕೊಪ್ಪೀರ ವಿನು ಅಯ್ಯಪ್ಪ, ನೆಲ್ಲಮಕ್ಕಡ ಅಯ್ಯಣ್ಣ ಹಾಗೂ ಬಿಜೆಪಿ ಯುವ ಮುಖಂಡ ತೇಲಪಂಡ ಶಿವಕುಮಾರ್ ಪಾಲ್ಗೊಂಡಿದ್ದರು.