ಸೋಮವಾರಪೇಟೆ, ಅ.31: ಕುಟುಂಬ ಸದಸ್ಯರ ನಡುವೆ ಆಸ್ತಿ ವಿಚಾರದಲ್ಲಿ ಘರ್ಷಣೆ ಏರ್ಪಟ್ಟು ವಿಕೋಪಕ್ಕೆ ತಿರುಗಿದ ಪರಿಣಾಮ, ತನ್ನ ಸಂಬಂಧಿಯ ಮೇಲೆ ಗುಂಡಿನ ಧಾಳಿ ನಡೆಸಿರುವ ಘಟನೆ ಸೂರ್ಲಬ್ಬಿ ಗ್ರಾಮದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.ಸೂರ್ಲಬ್ಬಿ ಗ್ರಾಮದ ನಿವಾಸಿ ಅಪ್ಪುಡ ಗಣಪತಿ ಅವರ ಪುತ್ರ ಸತೀಶ್ ಎಂಬಾತನ ಮೇಲೆ ಆತನ ಸಂಬಂಧಿ ಪೊನ್ನಪ್ಪ ಎಂಬವರ ಪುತ್ರ ಎ.ಪಿ. ಭೀಮಯ್ಯ ಅಲಿಯಾಸ್ ವಿಜು ಎಂಬಾತ ಗುಂಡು ಹಾರಿಸಿದ್ದಾನೆ. ತನ್ನ ಮನೆಯಲ್ಲಿದ್ದ ಕೋವಿಯಿಂದ ಸತೀಶ್‍ನ ಸೊಂಟದ ಕೆಳಗೆ ತೊಡೆ ಭಾಗಕ್ಕೆ ಗುಂಡು ಹಾರಿಸಿದ್ದು, ನಾಲ್ಕು ಗುಂಡುಗಳು ಹೊಕ್ಕಿದ್ದು, ವೃಷಣ ಅಪಾಯದ ಅಂಚಿನಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸತೀಶ್ ಮತ್ತು ಭೀಮಯ್ಯ ಅವರುಗಳ ನಡುವೆ ದಾರಿ ವಿಚಾರದಲ್ಲಿ ಆಗಾಗ್ಗೆ ಘರ್ಷಣೆಗಳು ನಡೆಯುತ್ತಿತ್ತು ಎನ್ನಲಾಗಿದ್ದು, ಇತ್ತೀಚೆಗಷ್ಟೇ ಜೆಸಿಬಿ ಯಂತ್ರದ ಮೂಲಕ ಗ್ರಾ.ಪಂ.ನಿಂದ ದಾರಿ ನಿರ್ಮಿಸಲಾಗಿತ್ತು. ಇದೇ ವಿಷಯಕ್ಕೆ ನಿನ್ನೆಯೂ ಜಗಳ ಏರ್ಪಟ್ಟಿದ್ದು, ಸತೀಶ್ ದನಗಳನ್ನು ಹೊಡೆದುಕೊಂಡು ಹೋಗುವಾಗ ಭೀಮಯ್ಯ ಅಡ್ಡಿಪಡಿಸಿದ್ದಾನೆ. ಈ ಸಂದರ್ಭ ಪರಸ್ಪರ ಹೊಡೆದಾಟ ನಡೆದಿದೆ. ಬಳಿಕ ಆರೋಪಿ ಭೀಮಯ್ಯ ತನ್ನ ಮನೆಯಿಂದ ಕೋವಿ ತಂದು ಸತೀಶ್ ಮೇಲೆ ಗುಂಡು ಹಾರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಗಾಯಾಳು ಸತೀಶ್ ಅವರನ್ನು ತಕ್ಷಣ ಮಾದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಸತೀಶ್ ತಾಯಿ ಸುಶೀಲ ನೀಡಿದ ದೂರಿನ ಮೇರೆ ಆರೋಪಿ ಭೀಮಯ್ಯ ವಿರುದ್ಧ ಸೋಮವಾರಪೇಟೆ ಠಾಣೆಯಲ್ಲಿ ಕಲಂ 307 ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅನ್ವಯ ದೂರು ದಾಖಲಿಸಲಾಗಿದೆ. ಸತೀಶ್ ಮೇಲೆ ಗುಂಡು ಹಾರಿಸಿದ ಬೆನ್ನಲ್ಲೇ ಆರೋಪಿ ಭೀಮಯ್ಯ ಬೈಕೊಂದರಲ್ಲಿ ಮುಂಚಿತವಾಗಿ ಮಾದಾಪುರಕ್ಕೆ ತೆರಳಿ ತನ್ನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿರುವದಾಗಿ ಮಾದಾಪುರ ಆಸ್ಪತ್ರೆಯಲ್ಲಿ ದಾಖಲಾಗಿ ದೂರು ನೀಡಿರುವದು ಬೆಳಕಿಗೆ ಬಂದಿದೆ. ಈ ಆಧಾರದ ಮೇಲೆ ಪೊಲೀಸರು ಗಾಯಾಳು ಹಾಗೂ ಸತೀಶ್, ಗಣಪತಿ, ಗಂಗವ್ವ, ಚೋಂದಮ್ಮ ಅವರುಗಳ ವಿರುದ್ಧವೂ ಪ್ರತ್ಯೇಕ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಗುಂಡು ಹಾರಿಸಿದ ಆರೋಪದ ಮೇರೆ ವಿಜು ಭೀಮಯ್ಯನನ್ನು ಮಾದಾಪುರ ಆಸ್ಪತ್ರೆಯಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದು, ಕೃತ್ಯಕ್ಕೆ ಬಳಸಿದ ಕೋವಿಯನ್ನು ಮುಟ್ಟುಗೋಲು ಹಾಕಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸೋಮವಾರಪೇಟೆ ಠಾಣಾಧಿಕಾರಿ ಎಂ. ಶಿವಣ್ಣ, ಎಎಸ್‍ಐ ಸುಂದರ್ ಸುವರ್ಣ, ಸಿಬ್ಬಂದಿಗಳಾದ ಜಗದೀಶ್, ಮಹೇಂದ್ರ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.