ಮಡಿಕೇರಿ, ಅ. 31: ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಕೊಡಗು ಜಿಲ್ಲಾ ಘಟಕ ಇವರ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಪ್ರತಿ ವರ್ಷ ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ತರಲು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಶ್ರಮಿಸಬೇಕು ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಟಿ.ಸ್ವಾಮಿ ಮಾತನಾಡಿ ಕೊಡಗು ಜಿಲ್ಲೆಯಲ್ಲಿ 5 ವರ್ಷ, 3 ತಿಂಗಳ ಕಾಲ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿರುವದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪದವಿ ಪೂರ್ವ ಶಿಕ್ಷಣದಲ್ಲಿ ವಿಜ್ಞಾನ ವಿಭಾಗ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಜಿಲ್ಲೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳಾದ ಸಂತ ಅನ್ನಮ್ಮ ಶಾಲೆಯ ವಿದ್ಯಾರ್ಥಿನಿ ಮುತ್ತಮ್ಮ (ವಿಜ್ಞಾನ) ಗೋಣಿಕೊಪ್ಪದ ಕಾವೇರಿ ಕಾಲೇಜಿನ ಕಾವೇರಮ್ಮ (ವಾಣಿಜ್ಯ), ಮದೆನಾಡು ಕಾಲೇಜಿನ ಚೇತನ್ (ಕಲಾ), ಮದೆ ಮಹದೇಶ್ವರ ಕಾಲೇಜಿನ ಹೇಮಂತ್, ಸಂತ ಮೈಕಲರ ಶಾಲೆಯ ವಿದ್ಯಾರ್ಥಿನಿಗಳಾದ ಹರ್ಷಿತ ಹಾಗೂ ಚಂದನ, ಶನಿವಾರಸಂತೆ ಕಾವೇರಿ ಪಿಯು ಕಾಲೇಜಿನ ಯತೀಶ್ಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನವನ್ನು ನೀಡಿ ಗೌರವಿಸಲಾಯಿತು. ಅಲ್ಲದೆ ಜಿಲ್ಲೆಯಲ್ಲಿ 100% ಫಲಿತಾಂಶ ಪಡೆದ ಸರ್ಕಾರಿ ಪದವಿ ಪೂರ್ವ ಕಾಲೇಜು ಕೂಡಿಗೆ, ಬಾಲಕಿಯರ ಪಿಯು ಕಾಲೇಜು ನಾಪೋಕ್ಲು, ಸಂತ ಅಂಥೋನಿ ಪಿಯು ಕಾಲೇಜ್ನ ಪ್ರಾಂಶುಪಾಲರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ವಯೋನಿವೃತ್ತಿ ಗೊಂಡ ಕೊಡಗು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಟಿ.ಸ್ವಾಮಿಯವರನ್ನು ಎಂ.ಪಿ. ಅಪ್ಪಚ್ಚುರಂಜನ್ ಅವರು ಸನ್ಮಾನಿಸಿದರು.
ಕೊ.ಜಿ.ಪ.ಪೂ. ಕಾಲೇಜುಗಳ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಸಿ.ಎಂ. ಮಹಾಲಿಂಗಯ್ಯ ಕಾರ್ಯಕ್ರಮವನ್ನು ಸ್ವಾಗತಿಸಿ, ಪ್ರಾರ್ಥನೆಯನ್ನು ವಿದ್ಯಾರ್ಥಿನಿಯರಾದ ದೀಪಿಕಾ, ಕೀರ್ತನಾ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊ.ಜಿ.ಪ.ಪೂ. ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಕೆ.ಎಂ.ಭವಾನಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಖಜಾಂಚಿ ಎಸ್.ಟಿ.ಪುರುಷೋತ್ತಮ, ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಬಿ.ಎಂ. ಬೆಳ್ಳಿಯಪ್ಪ, ಕ.ರಾ.ಪ.ಪೂ. ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಸಿ.ಎನ್.ವಿಶ್ವನಾಥ್, ಕೊಡಗು ಜಿಲ್ಲಾ ಘಟಕ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿ ಫಿಲಿಪ್ವಾಸ್, ಖಜಾಂಚಿ ಹೇಮಂತ್ ಕುಮಾರ್, ಉಪನ್ಯಾಸಕರ ಸಂಘದ ಸಂಘಟನಾ ಕಾರ್ಯದರ್ಶಿ ಎಚ್.ಜೆ. ನಾಗರಾಜ್ ಉಪಸ್ಥಿತರಿದ್ದರು.