ಮಡಿಕೇರಿ, ಅ.31: ದಿಟ್ಟ ಮಹಿಳೆ, ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರ ಆದರ್ಶ ಹಾಗೂ ಧೈರ್ಯ ಇಂದಿನ ಮಹಿಳಾ ರಾಜಕಾರಣಿಗಳಿಗೆ ಮಾದರಿಯಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಕರೆ ನೀಡಿದ್ದಾರೆ.

ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಇಂದಿರಾ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. ದಿ.ಇಂದಿರಾಗಾಂಧಿ ಅವರ ರಾಜಕೀಯ ಜೀವನದ ಬಗ್ಗೆ ವಿವರಿಸಿದ ಅವರು ದೇಶ ಕಂಡ ಅಪ್ರತಿಮ ನಾಯಕಿಯ ಗುಣವನ್ನು ಇಂದಿನ ಮಹಿಳೆಯರು ಮೈಗೂಡಿಸಿಕೊಳ್ಳಬೇಕೆಂದರು.

ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಮತ್ತಷ್ಟು ಪ್ರಯತ್ನಗಳು ನಡೆಯಬೇಕಾಗಿದ್ದು, ರಾಜ್ಯ ಮಾತ್ರವಲ್ಲದೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಕಾರ್ಯಕರ್ತರು ಶ್ರಮವಹಿಸಬೇಕಾಗಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರನ್ನು ಮತ್ತು ಪಕ್ಷದ ಅಭ್ಯರ್ಥಿಗಳ ಸೋಲಿಗೆ ಪರೋಕ್ಷವಾಗಿ ಕಾರಣರಾಗುವವರನ್ನು ಪಕ್ಷದಿಂದ ದೂರ ಇಡುವಂತೆ ಸಚಿವ ಸೀತಾರಾಂ ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ದಿ.ಇಂದಿರಾ ಗಾಂಧಿಯವರ ತತ್ವ, ಸಿದ್ಧಾಂತಗಳನ್ನು ಇಂದಿನ ರಾಜಕಾರಣಿಗಳು ಪಾಲಿಸುವಂತಾಗಬೇಕೆಂದರು. ಕೊಡಗು ಜಿಲ್ಲೆಯಲ್ಲಿ ಇಂದು ಕಾಂಗ್ರೆಸ್ ಪಕ್ಷ ಚೇತರಿಕೆ ಕಾಣಲು ಮಹಿಳಾ ಕಾಂಗ್ರೆಸ್ ಘಟಕವೂ ಮುಖ್ಯ ಕಾರಣವಾಗಿದೆ. ಮಹಿಳಾ ಕಾಂಗ್ರೆಸ್ಸಿಗರು ಪಕ್ಷದ ಬೆಳವಣಿಗೆಗಾಗಿ ಮತ್ತಷ್ಟು ಕಾರ್ಯೋನ್ಮುಖರಾಗಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕೆÀ್ಷ ಜಿ.ಆರ್. ಪುಷ್ಪಲತಾ, ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಪುರುಷ ಸಮಾನವಾಗಿ ಸಾಧನೆಯನ್ನು ಮಾಡುತ್ತಿದ್ದಾಳೆ ಎಂದರು.

ರಾಜ್ಯ ಮಹಿಳಾ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಹಿಳಾ ಕಾಂಗ್ರೆಸ್‍ನ ಜಿಲ್ಲಾ ಉಸ್ತುವಾರಿ ಶುಭದಾಯಿನಿ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ, ಜಿ.ಪಂ. ಸದಸ್ಯರುಗಳಾದ ಕೆ.ಪಿ.ಚಂದ್ರಕಲಾ, ಕುಮುದಾ ಧರ್ಮಪ್ಪ, ಸುನೀತ, ಲೀಲಾವತಿ, ತಾ.ಪಂ. ಸದಸ್ಯರಾದ ಆಶಾ ಜೇಮ್ಸ್, ನಗರಸಭಾ ಸದಸ್ಯರಾದ ಜುಲೆಕಾಬಿ, ತಜುಸುಂ, ಕೆಪಿಸಿಸಿ ಯ ಪ್ರಧಾನ ಕಾರ್ಯದರ್ಶಿ ಹುಸೇನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಕೆ.ಎ.ಯಾಕೂಬ್, ನಗರ ಕಾಂಗ್ರೆಸ್‍ನ ಅಧ್ಯಕ್ಷರಾದ ಕೆ.ಯು.ಅಬ್ದುಲ್ ರಜಾóಕ್ ಮತ್ತು ಮಹಿಳಾಧ್ಯಕೆÀ್ಷ ಪಾರ್ವತಿ, ಮೂಡಾ ಅಧ್ಯಕ್ಷ ಚುಮ್ಮಿದೇವಯ್ಯ, ಮಾಜಿ ಅಧ್ಯಕ್ಷರಾದ ಸುರಯ್ಯಾ ಅಬ್ರಾರ್, ಐದು ಬ್ಲಾಕ್ ಕಾಂಗ್ರೆಸ್‍ನ ಮಹಿಳಾ ಅಧ್ಯಕ್ಷರುಗಳಾದ ಮಂಜುಳಾ, ಕುಸುಮ ಜೋಯಪ್ಪ, ಕಾವೇರಮ್ಮ, ಅಮೀನ, ರಾಜೀವ್ ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಸಂಯೋಜಕರಾದ ತೆನ್ನಿರ ಮೈನಾ, ಪ್ರಮುಖರಾದ ಕೆ.ಎಂ.ಲೋಕೇಶ್, ರಾಜಮ್ಮ ರುದ್ರಯ್ಯ ಮತ್ತಿತರರು ಇಂದಿರಾ ನಮನದಲ್ಲಿ ಪಾಲ್ಗೊಂಡಿದ್ದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಪ್ರಮುಖರು ಮುಂಬತ್ತಿ ಬೆಳಗಿ ಮೌನಾಚರಣೆ ಮಾಡಿದರು.