ಮಡಿಕೇರಿ, ಅ. 31: ಕೊಡಗಿನ ಕುಲದೇವಿ ಕಾವೇರಿ ತೀರ್ಥೋದ್ಭವ ಪ್ರಯುಕ್ತ ಭಗಂಡೇಶ್ವರ ದೇವಾಲಯದಿಂದ ತಲಕಾವೇರಿಗೆ ಭಂಡಾರ ಕೊಂಡೊಯ್ಯುವ ವಿಚಾರದಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರು ನೀಡಿರುವ ಹೇಳಿಕೆ ಖಂಡನೀಯ ಎಂದು ಫೆಡರೇಷನ್ ಆಫ್ ಕೊಡಗು ಗೌಡ ಸಮಾಜದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಂಡಾರ ಕೊಂಡೊಯ್ಯುವ ವೇಳೆ ಬಿಳಿ ಕುಪ್ಪಸ ಧಿರಿಸು ಧರಿಸಿದ ಗೌಡ ಜನಾಂಗದ ನಡೆಯ ಬಗ್ಗೆ ಹಾಗೂ ಶುದ್ಧತೆ ಬಗ್ಗೆ ಮಾತಂಡ ಮೊಣ್ಣಪ್ಪ ಅವರು ಸಂಶಯ ವ್ಯಕ್ತಪಡಿಸಿರುದು ಅವರಿಗೆ ಶೋಭೆ ತರುವಂತದ್ದಲ್ಲ. ಗೌಡ ಜನಾಂಗ ಸ್ಥಳೀಯ ತಕ್ಕ ಮುಖ್ಯಸ್ಥರಾದಿಯಾಗಿ ಸಾಂಪ್ರದಾಯಿಕ ಚಂಡೆ ವಾದ್ಯದೊಂದಿಗೆ ಕಾವೇರಿ ಮಾತೆಯ ನಾಮಸ್ಮರಣೆ ಘೋಷಣೆ ಯೊಂದಿಗೆ ಮೆರವಣಿಗೆಯಲ್ಲಿ ಸಾಗಲು ಯಾರ ಅಪ್ಪಣೆಯ ಅಗತ್ಯತೆ ಇಲ್ಲ. ಒಂದು ವೇಳೆ ಗೌಡ ಜನಾಂಗದ ನಡತೆ ಶುದ್ಧತೆಯ ಬಗ್ಗೆ ಮೊಣ್ಣಪ್ಪ ಅವರಿಗೆ ಸಂಶಯವಿರುವದೇ ಆದರೆ ಅದು ಅವರ ವೈಯಕ್ತಿಕ ದುರಾಸಕ್ತಿಯನ್ನು ತೋರಿಸುತ್ತದೆ. ಇನ್ನಾದರೂ ಇಂತಹ ಹೇಳಿಕೆಗಳನ್ನು ನೀಡುವದನ್ನು ನಿಲ್ಲಿಸಬೇಕು. ಇಂತಹ ಹೇಳಿಕೆಗಳಿಂದ ಜಿಲ್ಲೆಯಲ್ಲಿ ಜಾತಿ-ಜಾತಿಗಳ ಮಧ್ಯೆ ಸಾಮರಸ್ಯ ಕೆಡುತ್ತದೆ ಎಂಬದನ್ನು ಮೊಣ್ಣಪ್ಪ ಅವರು ಅರಿತುಕೊಳ್ಳಬೇಕು ಎಂದು ಸೂರ್ತಲೆ ಸೋಮಣ್ಣ ಅಭಿಪ್ರಾಯಿಸಿದ್ದಾರೆ.