ಮಡಿಕೇರಿ, ಅ.31 : ಶ್ರೀಸಾಮಾನ್ಯರ ಅಪೇಕ್ಷೆ, ಆಕಾಂಕ್ಷೆ ಮತ್ತು ನಿರೀಕ್ಷೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ನವ ಕರ್ನಾಟಕ 2025 ತಯಾರಿಸಲಾಗುತ್ತಿದ್ದು, ಈ ದಾಖಲೆ ಮುಂದಿನ ಏಳು ವರ್ಷದಲ್ಲಿ ಇಡೀ ರಾಜ್ಯದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿ ಒಳಗೊಂಡಿದೆ ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರೇಣುಕಾ ಚಿದಂಬರಂ ಅವರು ಹೇಳಿದರು. ನಗರದ ಸಂತ ಜೋಸೆಫರ ಶಾಲೆಯಲ್ಲಿ ಮಂಗಳವಾರ ನಡೆದ ನವ ಕರ್ನಾಟಕ 2025 ಜಿಲ್ಲಾ ಮಟ್ಟದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯ ಮತ್ತು ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಸಾರ್ವಜನಿಕರ ಸಲಹೆ, ಅಭಿಪ್ರಾಯ ಪಡೆಯಲಾಗುತ್ತಿದೆ. ಜನರ ಅಪೇಕ್ಷೆ ಮತ್ತು ನಿರೀಕ್ಷೆಯನ್ನು ಈಡೇರಿಸುವದು ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಆ ನಿಟ್ಟಿನಲ್ಲಿ ನವ ಕರ್ನಾಟಕ 2025 ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಈಗಾಗಲೇ ಆಂಧ್ರಪ್ರದೇಶ, ಮಧ್ಯ ಪ್ರದೇಶಗಳಲ್ಲಿ ವಿಷನ್ ಯೋಜನೆ ತಯಾರಿಸಲಾಗುತ್ತದೆ. ಜನರೇ ಮುಂದೆ ಬಂದು ಜಿಲ್ಲೆಯ ಮತ್ತು ರಾಜ್ಯದ ಸಮಗ್ರ ದೂರದೃಷ್ಟಿಯನ್ನು ಹೊಂದಿ ಸಲಹೆ ಅಭಿಪ್ರಾಯ ನೀಡಬೇಕಿದೆ. ನವ ಕರ್ನಾಟಕ 2025 ಜನರ ಅಭಿಪ್ರಾಯ ಎಂದರೆ ತಪ್ಪಾಗಲಾರದು ಎಂದು ರೇಣುಕಾ ಚಿದಂಬರಂ ಅವರು ಅಭಿಪ್ರಾಯಪಟ್ಟರು.

ವಿಷನ್ ಡಾಕ್ಯುಮೆಂಟ್‍ನಲ್ಲಿ ಗುರಿಗಿಂತ ಸಾಧನೆ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಮುಂದಿನ ಏಳು ವರ್ಷಗಳಲ್ಲಿ ಸಾಧಿಸಬೇಕಿರುವ ಪ್ರಗತಿ ಬಗ್ಗೆ ಸಲಹೆ ಅಭಿಪ್ರಾಯ ನೀಡಬೇಕಿದೆ. ಈಗಾಗಲೇ 28 ಜಿಲ್ಲೆಗಳಲ್ಲಿ ಸಾರ್ವಜನಿಕರಿಂದ ಸಲಹೆ, ಅಭಿಪ್ರಾಯ ಪಡೆಯಲಾಗಿದೆ ಎಂದರು.

ಜಿಲ್ಲಾಧಿಕಾರಿ

(ಮೊದಲ ಪುಟದಿಂದ) ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸ್ವಾಗತಿಸಿ ಮಾತನಾಡಿ ಜನರ ನಿರೀಕ್ಷೆ, ಆಶಯ ಮತ್ತು ಉದ್ದೇಶವನ್ನು ಈಡೇರಿಸುವದರ ಜೊತೆಗೆ, ಕೊಡಗು ಜಿಲ್ಲೆ ಯಾವ ರೀತಿ ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ 2025 ತಯಾರಿಸಲಾಗುತ್ತಿದೆ ಎಂದು ಹೇಳಿದರು.

ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಇದ್ದರು. ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಕೆ.ವಿ.ಸುರೇಶ್ ನಿರೂಪಿಸಿ, ವಂದಿಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇಣುಕಾ ಚಿದಂಬರಂ ಅವರು ನವ ಕರ್ನಾಟಕ 2025ರ ವರದಿಯನ್ನು ಸರ್ಕಾರಕ್ಕೆ ಡಿಸೆಂಬರ್ ತಿಂಗಳಲ್ಲಿ ಮಂಡಿಸಲಾಗುವದು ಎಂದು ಅವರು ಮಾಹಿತಿ ನೀಡಿದರು.

ಪ್ರತೀ ಜಿಲ್ಲೆಯ ನಾಗರಿಕರಿಂದ ಮಾಹಿತಿ ಸಂಗ್ರಹಿಸಿ ದಾಖಲೆ ಮಾಡಲಾಗುತ್ತಿದೆ. 13 ವಿಷಯಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರೊಂದಿಗೆ ಎರಡು ಹಂತದಲ್ಲಿ ಚರ್ಚೆ ನಡೆಸಿ ಬಳಿಕ ಎಲ್ಲಾ ಇಲಾಖೆಯ ಮುಖ್ಯಸ್ಥರು ಮತ್ತು ಮುಖ್ಯಕಾರ್ಯದರ್ಶಿಯವರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ. ನಂತರ ಮುಖ್ಯಮಂತ್ರಿಯವರು ಹಾಗೂ ಸಚಿವರು ಚರ್ಚಿಸಿ ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ ಎಂದು ರೇಣುಕಾ ಚಿದಂಬರಂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕೊಡಗಿನ ಅಭಿವೃದ್ಧಿ ಸಂಬಂಧಿಸಿದಂತೆ ರಾಜ್ಯದ ಜೊತೆಗೆ ಕೇಂದ್ರ ಸರ್ಕಾರದ ಸಹಕಾರವು ಅತ್ಯಗತ್ಯವಾಗಿದ್ದು, ಆ ನಿಟ್ಟಿನಲ್ಲಿ ರೈಲ್ವೆ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ಕೇಂದ್ರದ ಗಮನ ಸೆಳೆಯಬೇಕಿದೆ ಎಂದು ಪತ್ರಕರ್ತರು ಸಲಹೆ ಮಾಡಿದರು.

ಸಾರ್ವಜನಿಕರ ಅಭಿಪ್ರಾಯ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳ ಅನುಷ್ಠಾನ ಆಗಬೇಕಿದೆ ಎಂದೂ ಅಧಿಕಾರಿಯ ಗಮನವನ್ನು ಪತ್ರಕರ್ತರು ಸೆಳೆದರು. ಅರಣ್ಯ ಜಿಲ್ಲೆ: ಗೋಷ್ಠಿ ಬಳಿಕ ಚರ್ಚಾ ಸ್ಥಳಕ್ಕೆ ಆಗಮಿಸಿದ ರೇಣುಕಾ ಅವರು ಕರ್ನಾಟಕದಲ್ಲಿ ಹಲವು ಜಿಲ್ಲೆಗಳನ್ನು ‘ಅರಣ್ಯ ಜಿಲ್ಲೆ’ ಎಂದರು. ಪರಿಗಣಸಲಾಗುವದು ಎಂದು ಅಂತಹಾ ಜಿಲ್ಲೆಗಳಲ್ಲಿ ಪರಿಸರ ಪೂರಕ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡು ಅರಣ್ಯ ಸಂರಕ್ಷಿಸುವ ನಿಟ್ಟಿನಲ್ಲೇ ಯೋಜನೆ ರೂಪಿಸಲಾಗುವದು ಎಂದು ಮಾಹಿತಿಯಿತ್ತರು.