ಮಡಿಕೇರಿ, ಅ. 31: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ಇಂದು ಕೊಡಗಿನಲ್ಲಿ ಪ್ರವಾಸದೊಂದಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮೇರೆಗೆ, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ತಾ.ಪಂ. ಪ್ರಗತಿ ಪರಿಶೀಲನಾ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಮುಂದೂಡಲ್ಪಟ್ಟ ಸಭೆಯನ್ನು ಮುಂದಿನ ತಾ. 8 ರಂದು ಬೆಳಿಗ್ಗೆ 10.30 ಗಂಟೆಗೆ ನಡೆಸಲು ನಿರ್ಧರಿಸಲಾಯಿತು.ಸಭೆಯ ಆರಂಭದಲ್ಲಿ ಅಬ್ಕಾರಿ ಇಲಾಖೆಯ ಕಾರ್ಯವೈಖರಿ ಬಗ್ಗೆ ಚರ್ಚೆ ನಡೆದು, ಹೆದ್ದಾರಿ ನೀತಿ ಜಾರಿಗೊಂಡ ಬಳಿಕ ಜಿಲ್ಲೆಯ ಹಲವೆಡೆ ಅಕ್ರಮ ಮದ್ಯಮಾರಾಟ ದಂಧೆ ನಡೆಯುತ್ತಿರುವ ಬಗ್ಗೆ ಶಾಸಕ ಕೆ.ಜಿ. ಬೋಪಯ್ಯ ಪ್ರಸ್ತಾಪಿಸಿದಾಗ, ಇಲಾಖೆಯ ಅಧಿಕಾರಿಗಳು ಉತ್ತರಿಸಿ ಇದುವರೆಗೆ 39 ಪ್ರಕರಣ ದಾಖಲಾಗಿದೆ ಎಂದು ಉತ್ತರಿಸಿದರು.
ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್,
(ಮೊದಲ ಪುಟದಿಂದ) ಅಕ್ರಮ ದಂಧೆ ತಡೆಗೆ ಕಾನೂನು ಕ್ರಮಕ್ಕೆ ಒತ್ತಾಯಿಸಿದರು. ಕರಿಕೆ, ಚೆಂಬೇರಿ, ಚೆತ್ತುಕಾಯ ಮುಂತಾದೆಡೆ ಹಾಗೂ ಮೂರ್ನಾಡು ಕುಂಬಳದಾಳುವಿನಲ್ಲಿ ಇಂತಹ ದಂಧೆ ನಿರಂತರ ನಡೆಯುತ್ತಿರುವ ಆರೋಪ ಕೇಳಿ ಬಂತು. ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡುವಂತೆ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಸಲಹೆ ಮಾಡಿದರು.
ತೋಟಗಾರಿಕಾ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಗಳಿಂದ ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ಲಭ್ಯವಿರುವ ಸೌಲಭ್ಯ ಮತ್ತು ಸಮರ್ಪಕ ವಿತರಣೆ ಕುರಿತು ಮಾಹಿತಿ ಪಡೆಯಲಾಯಿತು. ಅರಣ್ಯ ವನ್ಯಜೀವಿ ವಿಭಾಗದಿಂದಲೂ ಕಾಡಾನೆ ಹಾವಳಿ ಇತ್ಯಾದಿ ಸಮಸ್ಯೆಗೆ ಪರಿಹಾರ ಕಲ್ಪಿಸಿದ ಬಗ್ಗೆ ವಿವರ ಪಡೆಯಲಾಯಿತು. ಆರೋಗ್ಯ ಇಲಾಖೆಯಿಂದ ತಾಲೂಕಿನಲ್ಲಿ ಡೆಂಗ್ಯೂ ಇತ್ಯಾದಿ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಒಂದು ಹಂತದಲ್ಲಿ ತಾಲೂಕು ಮೀನುಗಾರಿಕೆ ಇಲಾಖೆಯ ಕಾರ್ಯವೈಖರಿ ಬಗ್ಗೆ ಆಕ್ರೋಶಗೊಂಡ ಶಾಸಕದ್ವಯರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಸುಬ್ರಮಣಿ ಅಧಿಕಾರಿ ರಾಘವ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಈ ಅಧಿಕಾರಿ ಯೋಜನೆ ಬಗ್ಗೆ ಮಾಹಿತಿ ನೀಡಲು ತಡವರಿಸಿದಾಗ, ತಾನು ಕಚೇರಿಗೆ ಭೇಟಿ ನೀಡಲಿದ್ದು, ದಾಖಲೆಗಳನ್ನು ಸಮರ್ಪಕಗೊಳಿಸಿ ಮಾಹಿತಿ ನೀಡುವಂತೆ ಮೇಲ್ಮನೆ ಸದಸ್ಯರು ತಾಕೀತು ಮಾಡಿದರು.
ಜನೌಷಧ ಮಳಿಗೆಗೆ ಸಲಹೆ
ಜನತೆಯ ಆರೋಗ್ಯದೊಂದಿಗೆ ಕಡಿಮೆ ಮೌಲ್ಯಕ್ಕೆ ದೊರಕಲಿರುವ ಕೇಂದ್ರ ಸರಕಾರದ ಜನೌಷಧಿ ಮಳಿಗೆಗಳನ್ನು ನಾಪೋಕ್ಲು ಹಾಗೂ ಮೂರ್ನಾಡುವಿನಲ್ಲಿ ಶೀಘ್ರವೇ ಪ್ರಾರಂಭಿಸಲು ಕ್ರಮಕೈಗೊಳ್ಳುವಂತೆ ಶಾಸಕರು ಸಲಹೆ ಮಾಡಿದರು. ಇಡೀ ರಾಜ್ಯದಲ್ಲಿ ವೈದ್ಯರ ಕೊರತೆಯಿದ್ದು, ಜಿಲ್ಲೆಯ ಸಮಸ್ಯೆ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸುವದಾಗಿ ಕೆ.ಜಿ. ಬೋಪಯ್ಯ ತಿಳಿಸಿದರು.
ಮಂಗಗಳ ಕಾಟ: ಸಂಪಾಜೆ ಸುತ್ತ ಮುತ್ತ ಮಂಗಗಳ ಕಾಟದಿಂದ ರೈತರಿಗೆ ತೆಂಗಿನ ಫಸಲು ಕೈಗೆಟುಕುತ್ತಿಲ್ಲವೆಂದು ಆ ಭಾಗದ ಸದಸ್ಯರು ಗಮನ ಸೆಳೆದರು. ಇಲಾಖೆಯಿಂದ ಪರಿಹಾರ ಸಿಗದೆಂದು ಅರಣ್ಯಾಧಿಕಾರಿಗಳು ಪ್ರತಿಕ್ರಿಯಿಸಿದಾಗ, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ದೇಶಿಸಲಾಯಿತು. ಕರಿಕೆ-ಭಾಗಮಂಡಲ ಮಾರ್ಗದಲ್ಲಿ ಅಲ್ಲಲ್ಲಿ ಬಿದ್ದಿರುವ ಮರಗಳ ತೆರವಿಗೆ ಪ್ರಸ್ತಾಪವಾದಾಗ, ಅರಣ್ಯ ಹಾಗೂ ಲೋಕೋಪಯೋಗಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನಪ್ರತಿನಿಧಿಗಳು ಹೌಹಾರಿದರು.
ಮಡಿಕೇರಿ ತಾ.ಪಂ. ಉಪಾಧ್ಯಕ್ಷ ಸಂತು ಸುಬ್ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ, ಕಾ.ನಿ. ಅಧಿಕಾರಿ ಜೀವನ್, ಸದಸ್ಯರುಗಳಾದ ಉಮಾಪ್ರಭು, ಕೊಡಪಾಲ ಗಣಪತಿ, ಸುಭಾಷ್ ಸೋಮಯ್ಯ, ಮೊದಲಾ ದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದು, ವಿವಿಧ ಇಲಾಖಾ ಅಧಿಕಾರಿಗಳು, ಅನೇಕ ಗ್ರಾ.ಪಂ. ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.