ಸೋಮವಾರಪೇಟೆ, ಅ. 31: ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಟಿಪ್ಪು ಜಯಂತಿ ಆಚರಿಸಲು ಯಾವದೇ ಕಾರಣಕ್ಕೂ ಅವಕಾಶ ನೀಡುವದಿಲ್ಲ. ಇದರೊಂದಿಗೆ ಕೊಡಗು ಹಾಗೂ ಸೋಮವಾರಪೇಟೆಯಲ್ಲೂ ಟಿಪ್ಪು ಜಯಂತಿ ಆಚರಣೆಗೆ ತಾಲೂಕು ಪಂಚಾಯಿತಿಯಿಂದ ವಿರೋಧವಿದೆ ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.ತಾ.ಪಂ. ಅಧ್ಯಕ್ಷೆ ಪುಷ್ಪರಾಜೇಶ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ವಿರೋಧದ ನಡುವೆಯೂ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.ಕಳೆದ ಎರಡು ವರ್ಷದ ಹಿಂದೆ ಆಯೋಜನೆಗೊಂಡಿದ್ದ ಟಿಪ್ಪು ಜಯಂತಿ ಸಂದರ್ಭ ತಾ.ಪಂ. ಸಭಾಂಗಣಕ್ಕೆ ಹಾನಿಯಾಗಿದೆ. ಇದನ್ನು ದುರಸ್ತಿ ಪಡಿಸಲು ಸರ್ಕಾರ ಅನುದಾನ ನೀಡಿಲ್ಲ. ಈ ಹಿನ್ನೆಲೆ ಪ್ರಸಕ್ತ ಸಾಲಿನಲ್ಲಿ ಸಭಾಂಗಣ ನೀಡುವದಿಲ್ಲ. ಆಚರಣೆ ಯನ್ನು

(ಮೊದಲ ಪುಟದಿಂದ) ವಿರೋಧಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಉಪಾಧ್ಯಕ್ಷ ಅಭಿಮನ್ಯುಕುಮಾರ್ ಹೇಳಿದರು.

ಈ ಬಗ್ಗೆ ಕೈಗೊಂಡ ನಿರ್ಣಯಕ್ಕೆ ಕಾಂಗ್ರೆಸ್ ಸದಸ್ಯರುಗಳಾದ ಬಿ.ಬಿ. ಸತೀಶ್, ಅನಂತ್‍ಕುಮಾರ್, ಸುಹಾದಾ ಅಶ್ರಫ್, ಜೆಡಿಎಸ್‍ನ ಪುಷ್ಪಾ ರಾಜೇಶ್ ಅವರುಗಳು ತಮ್ಮ ವಿರೋಧ ದಾಖಲಿಸಿದರು.

ಮುಂದುವರಿದ ಚರ್ಚೆಯಲ್ಲಿ ಸರ್ಕಾರದ ಬಸವ ವಸತಿ ಯೋಜನೆ ಹಣ ಮಾಡುವ ದಂಧೆಯಾಗಿದೆ. ಗ್ರಾಮಸಭೆಗಳಲ್ಲಿ ಫಲಾನುಭವಿಗಳ ಆಯ್ಕೆ ನಡೆಯಬೇಕಿದ್ದರೂ ಬಹುತೇಕ ಗ್ರಾ.ಪಂ.ಗಳಲ್ಲಿ ಇದನ್ನು ಪಾಲಿಸುತ್ತಿಲ್ಲ. ಮಾದಾಪುರ ಗ್ರಾ.ಪಂ.ನಲ್ಲಿ ಕೆಲ ಸದಸ್ಯರು ಮನೆ ನೀಡಲು ಹಣ ಪಡೆದಿದ್ದಾರೆ. ತಾನೇ 6 ಮಂದಿಗೆ ಹಣವನ್ನು ವಾಪಸ್ ಕೊಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ಕಂಡುಬಂದರೆ ಕಟ್ಟುನಿಟ್ಟಿನ ಕ್ರಮಕ್ಕೆ ಇಲಾಖೆಯನ್ನು ಒತ್ತಾಯಿಸಲಾಗುವದು ಎಂದು ಅಭಿಮನ್ಯುಕುಮಾರ್ ಹೇಳಿದರು.

ಕೋರ್ ಕಮಿಟಿಗೆ ಅಧಿಕಾರ: ವಸತಿ ಸೇರಿದಂತೆ ಇತರ ಇಲಾಖೆಗಳಿಂದ ದೊರಕುವ ಸವಲತ್ತುಗಳಿಗೆ ಗ್ರಾಮ ಸಭೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ, ನಂತರ ಕೋರ್ ಕಮಿಟಿ ಸಭೆಯಲ್ಲಿ ಅನುಮೋದನೆ ಪಡೆಯಬೇಕು. ಕಮಿಟಿಯಲ್ಲಿ ಗ್ರಾ.ಪಂ. ಅಧ್ಯಕ್ಷರು, ಜಿ.ಪಂ., ತಾ.ಪಂ. ಸದಸ್ಯರು ಸೇರಿದಂತೆ ಅಧಿಕಾರಿಗಳಿರಲಿದ್ದು ಇಲ್ಲೇ ಅಂತಿಮ ಪಟ್ಟಿ ಸಲ್ಲಿಸಬೇಕು. ಇದನ್ನು ಎಲ್ಲಾ ಗ್ರಾಮ ಪಂಚಾಯಿತಿಗಳೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ನಿರ್ಣಯ ಅಂಗೀಕರಿಸಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಎಲ್ಲಾ ಗ್ರಾ.ಪಂ.ಗಳಿಗೂ ತಿಳುವಳಿಕೆ ಪತ್ರ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿದಂತೆ ತಮಗೆ ಕೆಲವರು ಒತ್ತಡದ ಕರೆ ಮಾಡುತ್ತಿದ್ದಾರೆ ಎಂದು ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಸಭೆಯಲ್ಲಿ ತಿಳಿಸಿದರು. ಇಂತಹ ಒತ್ತಡವನ್ನು ಖಂಡಿಸಿದ ಸದಸ್ಯರುಗಳು, ಅವರುಗಳ ವಿರುದ್ಧ ಪೊಲೀಸ್ ದೂರು ನೀಡಿ ಎಂದು ಸಲಹೆ ನೀಡಿದರು.

ತಾ.ಪಂ.ನಲ್ಲಿ ತೆಗೆದುಕೊಳ್ಳಲಾಗುವ ನಿರ್ಣಯಗಳನ್ನು ಜಿ.ಪಂ.ಗೆ ಸಲ್ಲಿಸಿದರೆ ಅಲ್ಲಿಂದ ಯಾವದೇ ಪ್ರತಿಕ್ರಿಯೆ ಬರುತ್ತಿಲ್ಲ. ಜಿ.ಪಂ.ನ್ನು ಪ್ರತಿನಿಧಿಸುವ ತಾ.ಪಂ. ಅಧ್ಯಕ್ಷರು ಸಭೆಗಳಿಗೆ ಹಾಜರಾಗುತ್ತಿಲ್ಲ ಎಂದು ಸದಸ್ಯೆ ತಂಗಮ್ಮ ಆರೋಪಿಸಿದರು.

ಹಾಡಿಗಳ ವರದಿ ತಯಾರಿಸಲು ಸೂಚನೆ: ಸಮಾಜ ಕಲ್ಯಾಣ ಇಲಾಖೆಯಿಂದ ದಿಡ್ಡಳ್ಳಿ ನಿರಾಶ್ರಿತರಿಗೆ ತಾಲೂಕಿನ ಬಸವನಹಳ್ಳಿಯಲ್ಲಿ 174 ಮತ್ತು ಬ್ಯಾಡಗೊಟ್ಟದಲ್ಲಿ 293 ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಇಲಾಖೆಯ ಅಧಿಕಾರಿ ಲೋಕೇಶ್ ಸಭೆಗೆ ತಿಳಿಸಿದರು. ಮುಂದಿನ ಕೆಡಿಪಿ ಸಭೆಯ ಒಳಗೆ ತಾಲೂಕಿನ ಎಲ್ಲಾ ಹಾಡಿಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳ ಬಗ್ಗೆ ಸಮಗ್ರ ವರದಿ ತಯಾರಿಸುವಂತೆ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಅವರು ಅಧಿಕಾರಿಗೆ ನಿರ್ದೇಶನ ನೀಡಿದರು.

ಅರಣ್ಯಾಧಿಕಾರಿ ತರಾಟೆಗೆ: ಶನಿವಾರಸಂತೆ ಭಾಗದಲ್ಲಿ ಕೃಷಿಕರ ನೆಮ್ಮದಿ ಕೆಡಿಸಿರುವ ಆಫ್ರಿಕನ್ ಶಂಕುಹುಳುಗಳ ನಿಯಂತ್ರಣ ಬಗ್ಗೆ ಕಾಫಿ ಮಂಡಳಿ, ಕೃಷಿ ಮತ್ತು ತೋಟಗಾರಿಕೆ ಹಾಗೂ ಆರೋಗ್ಯ ಇಲಾಖೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದರೂ ಅರಣ್ಯ ಇಲಾಖೆ ಯಾವದೇ ಸ್ಪಂದನೆ ನೀಡುತ್ತಿಲ್ಲ. ಸಭೆಗಳಿಗೂ ಹಾಜರಾಗುತ್ತಿಲ್ಲ. ಅರಣ್ಯದಲ್ಲಿರುವ ಹುಳುಗಳನ್ನು ನಿಯಂತ್ರಿಸಲು ಮುಂದಾಗುತ್ತಿಲ್ಲ. ಈಗಾಗಲೇ 24 ಟನ್ ಹುಳುಗಳನ್ನು ಹಿಡಿದು ಸಾಯಿಸಲಾಗಿದೆ. ಮುಂದಿನ 48 ಗಂಟೆಗಳ ಒಳಗೆ ಇಲಾಖೆಯಿಂದ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಉಪಾಧ್ಯಕ್ಷರು, ವಲಯ ಅರಣ್ಯಾಧಿಕಾರಿ ಕೊಟ್ರೇಶ್ ಅವರನ್ನು ತರಾಟಗೆ ತೆಗೆದುಕೊಂಡರು.

ಕಾಡಾನೆ ಹಾವಳಿ ತಡೆಗೆ ಕ್ರಮ: ಐಗೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಕಂದಕ ಕಾಮಗಾರಿ ಸಮರ್ಪಕವಾಗಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷ ಚಂಗಪ್ಪ, ತಾ.ಪಂ. ಸದಸ್ಯೆ ಸಬಿತಾ ಅವರುಗಳು ಆರ್‍ಎಫ್‍ಓ ಲಕ್ಷ್ಮೀಕಾಂತ್ ಅವರಲ್ಲಿ ದೂರಿದರು. ಆನೆಕಂದಕ ಸಂದರ್ಭ ಕಲ್ಲು ಬಂಡೆ ಸಿಕ್ಕಿದ್ದರಿಂದ ಸಮಸ್ಯೆಯಾಗಿದೆ. ಮುಂದಿನ 15 ದಿನಗಳ ಒಳಗೆ ಕಲ್ಲುಗಳನ್ನು ಒಡೆಯಲಾಗುತ್ತಿದ್ದು, ರೈಲ್ವೇ ಕಂಬಿಗಳನ್ನು ಅಳವಡಿಸಲೂ ಸಹ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದರು.

ಆರೋಗ್ಯ ಇಲಾಖೆ ಬಗ್ಗೆ ಚರ್ಚೆ: ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿರುವ ವೈದ್ಯರ ಕೊರತೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಸೋಮವಾರಪೇಟೆ ಸರ್ಕಾರಿ ಅಸ್ಪತ್ರೆಯಲ್ಲಿ ವೈದ್ಯರ ಕೊರತೆ ಕಾಡುತ್ತಿದೆ. ಮಕ್ಕಳು ತಮ್ಮ ಫಿಟ್‍ನೆಸ್ ಸರ್ಟಿಫಿಕೇಟ್‍ಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸದಸ್ಯೆ ತಂಗಮ್ಮ ದೂರಿದರೆ, ಶನಿವಾರಸಂತೆ, ನಂಜರಾಯಪಟ್ಟಣ, ಸುಂಟಿಕೊಪ್ಪದಲ್ಲೂ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಇಲಾಖೆಗೆ ಪತ್ರ ಬರೆಯುವಂತೆ ಸದಸ್ಯರಾದ ಅನಂತ್‍ಕುಮಾರ್, ಕುಶಾಲಪ್ಪ, ವಿಮಲಾವತಿ, ಸುಹಾದ ಅಶ್ರಫ್ ಅವರುಗಳು ಒತ್ತಾಯಿಸಿದರು.

ಔಷಧಿಗಳು ಎಲ್ಲಿ?: ಸುಂಟಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಹೋಗುವ ಪ್ರತಿ ರೋಗಿಗಳಿಗೂ ಹೊರಭಾಗದ ಮೆಡಿಕಲ್‍ಗಳಿಗೆ ಔಷಧಿ ಬರೆದುಕೊಡುತ್ತಿದ್ದಾರೆ. ಹಾಗಾದರೆ ಆಸ್ಪತ್ರೆಗೆ ಸರಬರಾಜಾಗುವ ಔಷಧಿಗಳು ಎಲ್ಲಿ ಹೋಗುತ್ತಿವೆ? ಎಂದು ಸದಸ್ಯೆ ವಿಮಲಾವತಿ ಪ್ರಶ್ನಿಸಿದರು. ಈ ಬಗ್ಗೆ ಉತ್ತರಿಸಬೇಕಾದ ತಾಲೂಕು ಆರೋಗ್ಯಾಧಿಕಾರಿ ಗೈರಾಗಿದ್ದರಿಂದ ಅವರಿಗೆ ನೋಟೀಸ್ ನೀಡಬೇಕು. ವೈದ್ಯರ ಸಮಸ್ಯೆಗಳ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆಯುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಉಳಿದಂತೆ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ಸದಸ್ಯರುಗಳು, ತಾ.ಪಂ. ಆಹ್ವಾನಿತ ಸದಸ್ಯರುಗಳು ಉಪಸ್ಥಿತರಿದ್ದರು.