ಮಡಿಕೇರಿ, ಅ. 31: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಇವರ ವತಿಯಿಂದ ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ನಡೆಯಿತು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದ ಬಳಿಯ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆಗೆ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಸುನಿಲ್ ಸುಬ್ರಮಣಿ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಸಾಹಿತಿ ಬಾರಿಯಂಡ ಜೋಯಪ್ಪ, ಅಮೆ ಕೆ. ಪಾಲಾಕ್ಷ, ತುಂತಜೆ ಗಣೇಶ್, ಕೋಡಿ ಚಂದ್ರಶೇಖರ್, ಮನೋಜ್ ಬೋಪಯ್ಯ, ಕೆ.ಡಿ. ದಯಾನಂದ, ಅಂಬೆಕಲ್ ನವೀನ್ ಅವರು ಹುತಾತ್ಮ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆಗೆ ಹೂಗುಚ್ಛ ಅರ್ಪಿಸಿ, ಗೌರವ ನಮನ ಸಲ್ಲಿಸಿದರು.

(ಮೊದಲ ಪುಟದಿಂದ) ಭಾರತ ಸೇವಾದಳದ ರೇವತಿ ರಮೇಶ್ ಮತ್ತು ವಿದ್ಯಾರ್ಥಿಗಳು ನಮನ ಗೀತೆ ಹಾಡಿದರು. ಉಪನ್ಯಾಸಕ ಕೆ.ಸಿ. ದಯಾನಂದ ಸ್ವಾಗತಿಸಿದರು.

ಬಳಿಕ ನಗರದ ಕೋಟೆ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ದೇಶದ ರಕ್ಷಣೆಗಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲುಶಿಕ್ಷೆಗೆ ಒಳಗಾದ ಗುಡ್ಡೆಮನೆ ಅಪ್ಪಯ್ಯಗೌಡರಲ್ಲಿ ಇದ್ದ ದೇಶಪ್ರೇಮ ಪ್ರತಿಯೊಬ್ಬರೂ ಮೆಚ್ಚುವಂತದ್ದು ಎಂದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೆಲ, ಜಲ ರಕ್ಷಣೆ ಮಾಡಿದವರನ್ನು ಸ್ಮರಿಸಿಕೊಳ್ಳುವದರೊಂದಿಗೆ ಅವರುಗಳ ವೀರತ್ವವನ್ನು ಯುವಪೀಳಿಗೆಯಲ್ಲಿ ತುಂಬಬೇಕೆಂದರು. ಸಣ್ಣ ಜನಾಂಗದ ಆಚಾರ - ವಿಚಾರ, ಸಂಸ್ಕøತಿ ಉಳಿಸಿ ಬೆಳೆಸುವ ಕೆಲಸವಾಗಬೇಕು. ಜನಪ್ರತಿನಿಧಿಗಳು ಜನಸೇವಕರೆಂಬ ಚಿಂತನೆಯೊಂದಿಗೆ ಕೆಲಸ ಮಾಡಬೇಕೆಂದ ಅವರು ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಮಾರಕವಾಗಬಾರದೆಂದರು.

ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಬಹುತೇಕ ರಾಜರುಗಳು ತಮ್ಮ ಸಾಮ್ರಾಜ್ಯ ಬಲಪಡಿಸಲು ಹೋರಾಟ ಮಾಡಿದ್ದಾರೆ. ಆದರೆ ಅಪ್ಪಯ್ಯಗೌಡ ವೀರ್ ಸಾರ್ವಕರ್ ಸೇರಿದಂತೆ ಕೆಲವರು ಮಾತ್ರ ಬಾವ ಪ್ರತಿಫಲಾಪೇಕ್ಷೆಯಿಲ್ಲದೆ ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದವರು. ಇಂತಹವರ ಜಯಂತಿ, ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಜಾತ್ಯತೀತವಾಗಿ ಆಚರಿಸುವಂತಾಗಬೇಕೆಂದರು.

ದಾರ್ಶನಿಕರ ಜಯಂತಿ ಆಚರಣೆಯಲ್ಲೂ ಜಾತಿ, ಧ್ವೇಷದ ರಾಜಕೀಯ ಕಂಡುಬರುತ್ತಿರುವದು ವಿಪರ್ಯಾಸ. ಜಾತ್ಯತೀತವಾಗಿ ಆಚರಿಸಿದರೆ ಜಾತಿ, ದ್ವೇಷಗಳ ಹೊರತಾದ ಸಮಾಜ ನಿರ್ಮಾಣವಾಗಲಿದೆ ಎಂದು ಆಶಿಸಿದರು. ಇದೇ ಸಂದರ್ಭ ಚೊಕ್ಕಾಡಿ ಪ್ರೇಮಾ ರಾಘವಯ್ಯ ಅಪ್ಪಯ್ಯಗೌಡರ ಕುರಿತಾದ ಲಾವಣಿ ಗೀತೆ ಹಾಡಿದರು.

ವೇದಿಕೆಯಲ್ಲಿ ಸ್ಮಾರಕ ಸಮಿತಿ ಅಧ್ಯಕ್ಷ ತುಂತಜೆ ಗಣೇಶ್ ವೀರಾಜಪೇಟೆ ಗೌಡ ಸಮಾಜ ಅಧ್ಯಕ್ಷ ಮೂಡಗದ್ದೆ ರಾಮಕೃಷ್ಣ, ಕುಶಾಲನಗರ ಅಧ್ಯಕ್ಷ ಕೇಚಪ್ಪನ ಮೋಹನ್, ಮೈಸೂರು ಸಮಾಜದ ಕಾರ್ಯದರ್ಶಿ ಕುಂಟಿಕಾನ ಗಣಪತಿ ಇದ್ದರು. ಕೇಕಡ ಇಂದುಮತಿ, ಗುತ್ತಿಮಂಡನ ಇಂದಿರಾ ಪ್ರಾರ್ಥಿಸಿದರು. ಸ್ಮಾರಕ ಸಮಿತಿ ಕಾರ್ಯದರ್ಶಿ ಅಮೆ ಕೆ. ಪಾಲಾಕ್ಷ ಸ್ವಾಗತಿಸಿದರು. ಉಪನ್ಯಾಸಕ ಪಟ್ಟಡ ಶಿವಕುಮಾರ್ ನಿರೂಪಿಸಿದರೆ, ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಆನಂದ್ ಕರಂದ್ಲಾಜೆ ವಂದಿಸಿದರು.

ಮುಖ್ಯ ಭಾಷಣಕಾರರಾಗಿ ವಕೀಲ ಮನೋಜ್ ಬೋಪಯ್ಯ ಮಾತನಾಡಿ, ದೇಶದಲ್ಲಿ ಸಿಪಾಯಿ ಧÀಂಗೆಗೂ ಮೊದಲೇ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಸಮರ ಸಾರಿದ ಗುಡ್ಡೆಮನೆ ಅಪ್ಪಯ್ಯಗೌಡರನ್ನು ಬ್ರಿಟೀಷರು ಗಲ್ಲಿಗೇರಿಸಿದರು. ಗುಡ್ಡೆಮನೆ ಅಪ್ಪಯ್ಯಗೌಡರ ಸ್ವಾತಂತ್ರ್ಯ ಹೋರಾಟ ಸ್ಮರಣೀಯವೆಂದರು. ಅಪ್ಪಯ್ಯಗೌಡರು ಈ ದೇಶದ ಸಂಪತ್ತು. ಜಾತೀಯ ಸಂಕೇತವಾಗಬಾರದು ಎಂದು ಪ್ರತಿಪಾದಿಸಿದರು.

ಮತ್ತೋರ್ವ ಭಾಷಣಕಾರ ಸಾಹಿತಿ ಬಾರಿಯಂಡ ಜೋಯಪ್ಪ ಅವರು ಮಾತನಾಡಿ, ಗುಡ್ಡೆಮನೆ ಅಪ್ಪಯ್ಯಗೌಡ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಸಿಫಾಯಿ ದಂಗೆ ಸಂದರ್ಭದಲ್ಲಿ ನಿಜವಾದ ಸ್ವಾತಂತ್ರ್ಯ ಹೋರಾಟ ಆರಂಭವಾಯಿತು. ಆ ದಿನಗಳಲ್ಲಿ ಕೊಡಗು, ಸುಳ್ಯ, ಪುತ್ತೂರು ಬೆಳ್ತಂಗಡಿ ಮತ್ತಿತರ ಭಾಗಗಳಲ್ಲಿ ಗುಡ್ಡೆಮನೆ ಅಪ್ಪಯ್ಯಗೌಡರು ತಮ್ಮ ಪ್ರಾಂತ್ಯಗಳ ಜನರ ರಕ್ಷಣೆಗಾಗಿ ಬ್ರಿಟಿಷರ ದಬ್ಬಾಳಿಕೆ ವಿರುದ್ದ ಸಿಡಿದೆದ್ದು ಹೋರಾಟ ಮಾಡಿದರು ಎಂದು ಸ್ಮರಿಸಿದರು.