ಕುಶಾಲನಗರ, ನ. 1: ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ನಿರ್ಮಾಣಗೊಂಡಿರುವ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿ ಕೇಂದ್ರಗಳಲ್ಲಿ ಮನೆ ನಿರ್ಮಾಣ ಕಾಮಗಾರಿ ಬಹುತೇಕ ನಿಧಾನಗತಿಯಲ್ಲಿ ಸಾಗುತ್ತಿದೆ. ಬಸವನಹಳ್ಳಿ ಶಿಬಿರದಲ್ಲಿ 174 ಮತ್ತು ಬ್ಯಾಡಗೊಟ್ಟದಲ್ಲಿ 354 ಮನೆಗಳು ಸೇರಿದಂತೆ ಒಟ್ಟು 528 ಮನೆಗಳ ನಿರ್ಮಾಣಕ್ಕೆ ಸರಕಾರ ಕ್ರಮಕೈಗೊಂಡಿದೆ.
ಕಳೆದ ಕೆಲವು ತಿಂಗಳಿನಿಂದ ಪ್ರಾರಂಭಗೊಂಡಿರುವ ಮನೆ ಕಾಮಗಾರಿ ಇದೀಗ ಬಹುತೇಕ ಸ್ಥಗಿತಗೊಂಡಿದ್ದು ಅನುದಾನದ ಕೊರತೆ ಎದುರಾಗಿದೆ ಎಂದು ಗುತ್ತಿಗೆದಾರರು ದೂರಿದ್ದಾರೆ. ಬಸವನಹಳ್ಳಿ ವ್ಯಾಪ್ತಿಯಲ್ಲಿ ಶೇ. 50 ರಷ್ಟು ಮನೆ ನಿರ್ಮಾಣ ಕಾಮಗಾರಿ ಮುಗಿದಿದ್ದರೂ ಇದುವರೆಗೆ ಸರಕಾರದಿಂದ ಯಾವದೇ ಹಣ ಪಾವತಿಯಾಗಿರುವದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಈ ಯೋಜನೆಗೆ 11 ಕೋಟಿ ರೂ.ಗಳು ಬಿಡುಗಡೆಯಾಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆಗಳು ಸೃಷ್ಠಿಯಾಗಿವೆ ಎಂದು ಲ್ಯಾಂಪ್ಸ್ ಸೊಸೈಟಿ ನಿರ್ದೇಶಕ ಬಿ.ಕೆ. ಮೋಹನ್ ತಿಳಿಸಿದ್ದಾರೆ. ಇದರೊಂದಿಗೆ ಸಮುದಾಯ ಭವನ ನಿರ್ಮಾಣ, ಉದ್ಯಾನವನ ಸೇರಿದಂತೆ ಸ್ಮಶಾನ ನಿರ್ಮಾಣಕ್ಕೆ ಪ್ರತ್ಯೇಕ ಜಾಗ ಒದಗಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ
ಅನುದಾನದ ಕೊರತೆಯಿಂದ ಕಾಮಗಾರಿ ನಿಧಾನಗತಿ ಸಾಗುತ್ತಿದ್ದು, ತಕ್ಷಣ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.