ಶ್ರೀಮಂಗಲ, ನ.1: ಗೋಣಿಕೊಪ್ಪ ಎ.ಪಿ.ಎ.ಂಸಿ.ಗೆ ವಿಯೆಟ್ನಾಮ್‍ನಿಂದ ಕರಿಮೆಣಸು ಆಮದು ಮಾಡಿಕೊಂಡು ಕಲಬೆರಕೆ ಮಾಡಿ ಮಾರಾಟ ಮಾಡುತ್ತಿರುವ ಪ್ರಕರಣದಿಂದ ಕೊಡಗಿನ ಕರಿಮೆಣಸಿಗೆ ಗಣನೀಯವಾಗಿ ದರ ಕುಸಿತ ಉಂಟಾಗಿರುವ ವಿಚಾರ ಸೇರಿದಂತೆ ಎ.ಪಿ.ಎಂ.ಸಿ ಒಳಗೆ ನಡೆದಿರುವ ಅವ್ಯವಹಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಈಗಾಗಲೇ ಸಿಓಡಿ ತನಿಖೆ ಕೈಗೊಂಡಿದೆ. ಸಿಓಡಿ ತನಿಖೆಯಲ್ಲಿ ಅವ್ಯವಹಾರ ಹಾಗೂ ಬೆಳೆಗಾರರಿಗೆ ವಂಚನೆಯಾಗಿರುವದು ಸಾಬೀತಾದರೆ ಸಂಬಂಧಿಸಿದ ಎ.ಪಿ.ಎಂ.ಸಿ ಆಡಳಿತ ಮಂಡಳಿಯ ಮೇಲೆ ಹಾಗೂ ಶಾಮೀಲಾಗಿರುವ ವ್ಯಾಪಾರಿಗಳ ಮೇಲೆ ಕಾನೂನು ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತರಾಮ್ ಹೇಳಿದರು.
ಟಿ.ಶೆಟ್ಟಿಗೇರಿ-ಬಿರುನಾಣಿ ಮುಖ್ಯ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ಸಲ್ಲಿಸಿ ಕಾಂಗ್ರೆಸ್ ಮುಖಂಡ ಚೊಟ್ಟೆಯಂಡಮಾಡ ವಿಶು ಅವರ ನಿವಾಸಕ್ಕೆ ಆಗಮಿಸಿದ ಅವರೊಂದಿಗೆ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೈಬೀಲಿರ ಹರೀಶ್ ಅಪ್ಪಯ್ಯ ಹಾಗೂ ಪದಾಧಿಕಾರಿಗಳು ಭೇಟಿಯಾಗಿ ಕರಿಮೆಣಸು ಆಮದು ಹಾಗೂ ಅವ್ಯವಹಾರದ ಬಗ್ಗೆ ರಾಜ್ಯ ಸರ್ಕಾರಕ್ಕೆ ಒಕ್ಕೂಟದಿಂದ ಸಲ್ಲಿಸಿದ ಮನವಿಗೆ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ಕೇಳಿದಾಗ ಈ ವಿಚಾರವನ್ನು ತಿಳಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು ಬೆಳೆಗಾರರಿಗೆ ಅನ್ಯಾಯವಾಗಿರುವ ಈ ಪ್ರಕರಣದಲ್ಲಿ ಸರ್ಕಾರ ಯಾವದೇ ರಾಜಿ ಮಾಡಿಕೊಳ್ಳಲು ತಯಾರಿಲ್ಲ. ಎ.ಪಿ.ಎಂ.ಸಿ.ಯಲ್ಲಿ ಆಗಿರುವ ಅವ್ಯವಹಾರದ ವ್ಯಾಪ್ತಿ ಹೆಚ್ಚಿದ್ದು ಸಿಓಡಿ ತನಿಖೆಯಿಂದಲೇ ಅವ್ಯವಹಾರ ಬಯಲಿಗೆಳೆಯುವದು ಸೂಕ್ತ ಎಂದು ನಿರ್ಧರಿಸಿ ಈ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಮಾತನಾಡಿ ಗೋಣಿಕೊಪ್ಪ ಎ.ಪಿ.ಎಂ.ಸಿ.ಯ ನಾಮನಿರ್ದೇಶಿತ ಮೂರು ಸದಸ್ಯರು ಆಮದು ಕರಿಮೆಣಸು ಹಾಗೂ ಇತರ ಅವ್ಯವಹಾರವನ್ನು ಬೆಳಕಿಗೆ ತಂದಿದ್ದಾರೆ. ಆದರೆ, ಎ.ಪಿ.ಎಂ.ಸಿ.ಯ ಸಮಿತಿ ಸಭೆಯಲ್ಲಿ ಈ ಮೂವರು ಸದಸ್ಯರ ಮೇಲೆ ಇತರ ಬಿಜೆಪಿ ಸದಸ್ಯರು ತೀವ್ರವಾಗಿ ಅವಮಾನ ಮಾಡಿ ತೇಜೋವಧೆ ಮೂಲಕ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಈ ಮೂವರು ಸದಸ್ಯರನ್ನು ಒತ್ತಾಯ ಪೂರ್ವಕವಾಗಿ ರಾಜೀನಾಮೆ ಕೇಳುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು. ಈ ಸಂದರ್ಭ ಮಾತನಾಡಿದ ಸಚಿವರು ಎ.ಪಿ.ಎಂ.ಸಿ.ಯಲ್ಲಿ ಅವ್ಯವಹಾರದ ಬಗ್ಗೆ ಏನೆಲ್ಲಾ ಮಾಹಿತಿ ಹಾಗೂ ದಾಖಲೆಗಳಿವೆ ಸಿಓಡಿ ಅಧಿಕಾರಿಗಳಿಗೆ ಸಲ್ಲಿಸಿ ತನಿಖೆಗೆ ಸಹಕಾರ ನೀಡುವಂತೆ ಸಲಹೆ ನೀಡಿದರು.
ಈ ಸಂದರ್ಭ ಜಿಲ್ಲಾಧಿಕಾರಿ ವಿನ್ಸೆಂಟ್ ಡಿಸೋಜ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ತಾ.ಪಂ ಸದಸ್ಯರಾದ ಆಶಾ ಜೇಮ್ಸ್, ಪಲ್ವೀನ್ ಪೂಣಚ್ಚ, ಅಪ್ಪಚ್ಚಂಗಡ ಮೋಟಯ್ಯ ಮತ್ತಿತರರು ಹಾಜರಿದ್ದರು.